×
Ad

ಸಂವಿಧಾನದ ಮೌಲ್ಯಗಳ ಪ್ರಕಾರ ಜನಮುಖಿಯಾಗಿರುವ ವಾರ್ತಾಭಾರತಿ: ಡಾ.ಕೆ.ಪಿ.ಅಶ್ವಿನಿ

ವಾರ್ತಾಭಾರತಿ 20ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ

Update: 2022-12-31 12:46 IST

ಬೆಂಗಳೂರು, ಡಿ.31: ವಾರ್ತಾಭಾರತಿ 20ನೇ ವಾರ್ಷಿಕ ವಿಶೇಷಾಂಕವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾಗಿರುವ ಏಶ್ಯದ ಪ್ರಪ್ರಥಮ ತಜ್ಞೆ ಡಾ.ಕೆ.ಪಿ.ಅಶ್ವಿನಿ ಶನಿವಾರ ಬೆಳಗ್ಗೆ ಬಿಡುಗಡೆಗೊಳಿಸಿದರು.

ನಗರದ  ವಾರ್ತಾಭಾರತಿ ದಿನಪತ್ರಿಕೆಯ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿಶೇಷಾಂಕ ಬಿಡುಗಡೆಗೊಳಿಸಿ ಮಾತನಾಡಿದ ಡಾ.ಕೆ.ಪಿ.ಅಶ್ವಿನಿ, ವಾರ್ತಾಭಾರತಿ ಕನ್ನಡ ದಿನಪತ್ರಿಕೆಯು ಸಂವಿಧಾನದ ಮೌಲ್ಯಗಳ ಅಡಿಯಲ್ಲಿ ಸಮಾನತೆ, ಸ್ವಾತಂತ್ರ್ಯ, ಸಹೋದರತೆ ಮತ್ತು ಸೌಹಾರ್ದಕ್ಕಾಗಿ, ಜನಮುಖಿ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಹುತೇಕ ಮಾಧ್ಯಮಗಳು ಪ್ರಭುತ್ವದ ಪರ ನಿಂತಿರುವ ಈ ಸಂದಿಗ್ಧ ಕಾಲಘಟ್ಟದಲ್ಲಿ ವಾರ್ತಾಭಾರತಿ ಪತ್ರಿಕೆಯು ಸಮಾಜದ ಎಲ್ಲ ಸವಾಲುಗಳನ್ನು ಎದುರಿಸಿ ತಳ ಸಮುದಾಯಗಳ ಸಮಸ್ಯೆಗಳನ್ನು ಎಚ್ಚರಿಸುವ ಮೂಲಕ ದನಿ ಇಲ್ಲದವರ ಪಾಲಿಗೆ ದನಿಯಾಗಿ ಸಾಗುತ್ತಿದೆ ಎಂದು ಅಭಿನಂದಿಸಿದರು.

ವಾರ್ತಾಭಾರತಿ ಪತ್ರಿಕೆಯು ಕೇವಲ ರಾಜ್ಯ ಮತ್ತು ರಾಷ್ಟ್ರಕ್ಕೆ ಮಾತ್ರವೇ ಸೀಮೀತವಾಗಿರದೆ ಹಲವು ದೇಶಗಳಲ್ಲಿ ಓದುಗರು, ವೀಕ್ಷಕರನ್ನು ತಲುಪಿ ಮನ್ನಣೆ ಗಳಿಸಿದೆ. ಈ ಪತ್ರಿಕೆಯ 20ನೇ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿರುವುದು ನನಗೆ ಸಂತಸ ತಂದಿದೆ ಎಂದು ಅಭಿನಂದಿಸಿದ ಕೆ.ಪಿ.ಅಶ್ವಿನಿ, ಈ ಮಾಧ್ಯಮ  ಮತ್ತಷ್ಟು ವಿಸ್ತರಿಸಿ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ನಿವೃತ್ತ ಅಧಿಕಾರಿ ಪ್ರಸನ್ನ ಕುಮಾರ್, ಪತ್ರಿಕೆಯ ನಿರ್ದೇಶಕ ಎಸ್.ಎಂ.ಅಲಿ, ಅಂಕಣಕಾರ ಗಿರೀಶ್ ಕೋಟೆ, ಉದ್ಯಮಿ ಸಾದಿಕ್ ಪುತ್ತಿಗೆ, ಬೆಂಗಳೂರು ಬ್ಯೂರೋ ಮುಖ್ಯಸ್ಥ ಪ್ರಕಾಶ್ ಸಿ. ರಾಮಜೋಗಿಹಳ್ಳಿ ಸೇರಿದಂತೆ ಪತ್ರಿಕೆಯ ಸಿಬ್ಬಂದಿ ಉಪಸ್ಥಿತರಿದ್ದರು.

Full View

Similar News