KMF ಮೇಲೆ ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದಿದೆ: ಸಿದ್ದರಾಮಯ್ಯ
ಬೆಂಗಳೂರು, ಡಿ. 31: ‘ಸ್ವಾಭಿಮಾನ, ಸ್ವಾತಂತ್ರ್ಯ ಅಭಿವೃದ್ಧಿ ನಮ್ಮ ಗುರಿಯಾಗಬೇಕೊ? ಅಥವಾ ಗುಜರಾತಿನ ಕಾರ್ಪೊರೇಟ್ ಬಂಡವಾಳಿಗರಿಗೆ ಗುಲಾಮರಾಗುವುದು ನಮ್ಮ ಆಯ್ಕೆಯೊ ಎಂದು ತೀರ್ಮಾನಿಸಬೇಕಾಗಿದೆ’ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ‘ನಮ್ಮ ಬ್ಯಾಂಕುಗಳನ್ನು ಕಿತ್ತುಕೊಂಡು ನಮ್ಮ ಆರ್ಥಿಕತೆಯನ್ನು ನಾಶಮಾಡಲೆತ್ನಿಸಿದ ಬಿಜೆಪಿಯವರು ಇದೀಗ ನಮ್ಮ ಹಾಲಿನ ಮೂಲಕ್ಕೆ ಕೈ ಹಾಕುತ್ತಿದ್ದಾರೆ. ಈ ದುಷ್ಟ ಭಸ್ಮಾಸುರನ ಕೈಗೆ ಈಗಲೆ ಬರೆ ಹಾಕದಿದ್ದರೆ ನಮ್ಮ 25 ಲಕ್ಷ ರೈತ ಕುಟುಂಬಗಳನ್ನು ಬಿಜೆಪಿಯವರು ಬೀದಿಪಾಲು ಮಾಡಿ ಮಾರಾಟ ಮಾಡಿಬಿಡುತ್ತಾರೆಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಹಾಲು ಉತ್ಪಾದಕ ಮಹಾ ಮಂಡಳ ಗುಜರಾತ್ ಜೊತೆಗೂಡಬೇಕೆಂಬ ಬಯಕೆಯನ್ನು ಅಮಿತ್ ಶಾ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಾಲು ಉತ್ಪಾದಕ ರೈತರು ಸುಮಾರು 20ಸಾವಿರ ಕೋಟಿ ರೂ. ಹಾಲಿನ ವಹಿವಾಟು ಮಾಡುತ್ತಾರೆ. ಈ ಲಕ್ಷಾಂತರ ಕುಟುಂಬಗಳ ಮನೆಯಲ್ಲಿ ದೀಪ ಬೆಳಗುವುದೆ ಹಾಲಿನಿಂದ. ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚಿನಿಂದ ಹಿಡಿದು, ಅಕ್ಕಿ, ಬೇಳೆ, ಬಟ್ಟೆ-ಬರೆ ಮುಂತಾದವುಗಳೆಲ್ಲ ಹಾಲಿನಿಂದಲೆ ಬರಬೇಕು. ಇಂತಹ ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಈಗ ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದಿದೆ ಎಂದು ಸಿದ್ಧರಾಮಯ್ಯ ಟೀಕಿಸಿದ್ದಾರೆ.
‘ಅವರ ಕಣ್ಣು ಬಿದ್ದ ಕಡೆ, ಅವರು ಕಾಲು ಇಟ್ಟ ಕಡೆ ಎಲ್ಲವೂ ಸರ್ವನಾಶವಾಗುತ್ತದೆ. ಇವರಿಗಾಗಿಯೆ ಹಗಲಿರುಳು ದುಡಿಯುತ್ತಿರುವ ಅಮಿತ್ ಶಾ, ಮೋದಿ ಮುಂತಾದವರೆಲ್ಲ ಥರ ಥರದ ಸುಳ್ಳುಗಳ, ಮುಳ್ಳಿನ ಟೋಪಿಯನ್ನು ಸಿದ್ಧಪಡಿಸಿಕೊಂಡು ಕನ್ನಡಿಗರ ತಲೆಗೆ ತೊಡಿಸಲು ತರುತ್ತಿದ್ದಾರೆ. ನಮಗೆ ಆಕ್ಸಿಜನ್ನು ಕೊಡದೆ ಕೊರೋನ ಸಮಯದಲ್ಲಿ ಜನರನ್ನು ಕೊಂದ ಪಾಪವನ್ನು ಮೋದಿ ಸರಕಾರವೆ ಹೊರಬೇಕು. ಕೊರೋನ ನೆಪದಲ್ಲಿ ವ್ಯಾಪಕ ಭ್ರಷ್ಟಾಚಾರ ಮಾಡಿ ಹೆಣದ ಮೇಲೂ ಕಮಿಷನ್ ಲೂಟಿ ಮಾಡಿದ ಪಾಪವನ್ನು ಬಿಜೆಪಿ ಹೊರಲೇಬೇಕು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ>>> ಕೆಎಂಎಫ್-ಅಮುಲ್ ಒಂದಾಗುವ ಸುಳಿವು ಕೊಟ್ಟ ಅಮಿತ್ ಶಾ: 'ನಂದಿನಿ ಉಳಿಸಿ' ಅಭಿಯಾನ ಆರಂಭಿಸಿದ ಕನ್ನಡಿಗರು
‘ನಮ್ಮನ್ನು ದೋಚಲು ಬಿಜೆಪಿಯವರು ಸಿದ್ಧಪಡಿಸಿಕೊಂಡಿರುವ ವಿಷದ ಟೋಪಿಯಲ್ಲಿ ಹಿಂದೂ-ಮುಸ್ಲಿಂ ದ್ವೇಷ, ಭ್ರμÁ್ಟಚಾರ, ಕುಟುಂಬ ರಾಜಕಾರಣ ಎಂಬ ಕಡ್ಡಾಯವಾದ ಮೂರು ಮುಳ್ಳುಗಳು ಇರುತ್ತವೆ. ಜನರು ಎಚ್ಚರ ವಹಿಸಬೇಕು. ಈ ಮಾತುಗಳನ್ನೆ ಮಂತ್ರದಂತೆ ಹೇಳಿ ಅಧಿಕಾರಕ್ಕೆ ಬಂದು ದೇಶದ ಜನರ ರಕ್ತವನ್ನು ಪ್ರತಿ ಹನಿಯನ್ನೂ ಹೀರುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
‘ನಾವೀಗ ಬಿಜೆಪಿಯ ವಿದೂಷಕ ಸುಳ್ಳರನ್ನು ಕರ್ನಾಟಕದಿಂದ ತೊಲಗಿಸಿ ನಾಡನ್ನು ಉಳಿಸಿಕೊಳ್ಳಬೇಕಿದೆ. ನಿಮ್ಮ ಸುಳ್ಳಿಗೆ ನಾವು ಬಲಿಯಾಗುವುದಿಲ್ಲ ಎಂದು ಕೂಗಿ ಹೇಳಬೇಕಾಗಿದೆ. ನಮ್ಮ ರೈತರ ಏಳ್ಗೆ ಆಗಬೇಕಾಗಿದೆ. ಅದಕ್ಕಾಗಿ ಅವರ ಹಾಲಿಗೆ ಬೆಲೆ ಬೇಕು. ಬೆಳೆದ ಎಲ್ಲ ಬೆಳೆಗಳಿಗೆ, ಉತ್ಪನ್ನಗಳಿಗೆ ಉತ್ತಮ ಬೆಲೆ ಬೇಕು. ಅವರು ಬೆಳೆದಿದ್ದನ್ನು ಕೊಂಡುಕೊಳ್ಳುವ ವ್ಯವಸ್ಥೆ ಬೇಕು. ಕೊಳ್ಳುವ ಗ್ರಾಹಕರ ಜೇಬಿನಲ್ಲಿ ಹಣ ಇರುವಂತೆ ನೋಡಿಕೊಳ್ಳಬೇಕು. ನಗರಗಳ ಜನರಿಗೂ ವಸ್ತುಗಳು ಅಗ್ಗದ ದರದಲ್ಲಿ ವಸ್ತುಗಳು ಸಿಗಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
‘ಬಿಜೆಪಿ ಸರಕಾರವು ಲಂಚವಿಲ್ಲದೆ ಯಾವ ಅಧಿಕಾರಿಗೂ ಹುದ್ದೆ ಕೊಡುತ್ತಿಲ್ಲ. ತಾಲೂಕು ಆಫೀಸು, ಪೊಲೀಸ್ ಸ್ಟೇಷನ್ನು ಸೇರಿದಂತೆ ಯಾವ ಕವೇರಿಗೆ ಹೋದರೂ ಬಡ ಬಗ್ಗರ, ರೈತರ ಕೆಲಸಗಳು ಆಗುತ್ತಿಲ್ಲ. ರೈತರು ಇದರಿಂದ ಬೇಸತ್ತು ಹೋಗಿದ್ದಾರೆ. ಸರಕಾರದ ಯಾವುದೇ ಕಾಮಗಾರಿಗಳಲ್ಲಿ ಕನಿಷ್ಠ 40 ಪರ್ಸೆಂಟ್ ಲಂಚ ನಡೆಯುತ್ತಿದೆ. ರಸ್ತೆ, ಸೇತುವೆ, ಶಿಕ್ಷಣ ಎಲ್ಲದರಲ್ಲೂ ನುಂಗಿ ನೀರು ಕುಡಿಯಲಾಗುತ್ತಿದೆ. ಇಷ್ಟಿದ್ದರೂ ಯಾವ ಲಜ್ಜೆ ನಾಚಿಕೆ, ಮರ್ಯಾದೆ ಇಲ್ಲದೆ ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಮಾತಾನಾಡುತ್ತಾರೆ. ಇದಕ್ಕಿಂತ ವಿದೂಷಕತನ ಬೇರೆ ಯಾವುದಿದೆ?’ ಎಂದು ಅವರು ಪ್ರಶ್ನಿಸಿದ್ದಾರೆ.
‘ಇದರ ಜೊತೆಗೆ ಬಿಜೆಪಿಯವರು ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಾರೆ. ಭಯೋತ್ಪಾದನೆಯ ಪಿತೃಗಳೆ ಬಿಜೆಪಿಯವರು. ನಾವು ಗಾಂಧೀಜಿಯನ್ನು ಕಳೆದುಕೊಂಡೆವು. ಬಸವಣ್ಣನವರನ್ನು ಕಳೆದುಕೊಂಡೆವು. ಕಲ್ಬುರ್ಗಿಯವರನ್ನು, ಗೌರಿ ಲಂಕೇಶರನ್ನು ಕಳೆದುಕೊಂಡೆವು. ತಾಲಿಬಾನಿಗಳು ಹೆಣ್ಣು ಮಕ್ಕಳು ಶಾಲೆ, ಕಾಲೇಜುಗಳಿಗೆ ಹೋಗಬಾರದೆಂದು ಕಾನೂನು ತಂದಿದ್ದಾರೆ. ಆರೆಸ್ಸಿಸಿನ ಮೋಹನ್ ಭಾಗವತರು ಹೆಣ್ಣು ಮಕ್ಕಳು ಮನೆ ಕೆಲಸ ಮಾತ್ರ ಮಾಡಬೇಕು, ಹೊರಗಡೆ ಹೋಗಬಾರದು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ ಎಂದು ಅವರು ಗಮನ ಸೆಳೆದಿದ್ದಾರೆ.
‘ಕಾಂಗ್ರೆಸ್ ಸರಕಾರ ಇದ್ದಾಗ ಪಿಎಫ್‍ಐ ಮೇಲಿನ ಕೇಸುಗಳನ್ನು ವಾಪಸ್ಸು ತೆಗೆದುಕೊಂಡರು ಎಂದು ಸುಳ್ಳು ಹೇಳುತ್ತಿದ್ದಾರೆ. ನಾನು ಈ ಕುರಿತು ಸರಕಾರಕ್ಕೆ ಪತ್ರ ಬರೆದು ಮಾಹಿತಿ ತರಿಸಿಕೊಂಡಿದ್ದೇನೆ. ಸರಕಾರವೆ ನೀಡಿರುವ ಉತ್ತರದಲ್ಲಿ ಪಿಎಫ್‍ಐ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ಸು ತೆಗೆದುಕೊಂಡ ಒಂದೆ ಒಂದು ದಾಖಲೆಯನ್ನೂ ನೀಡಿಲ್ಲ. ಇದಾದ ಮೇಲೆ ಮತ್ತೊಮ್ಮೆ ಪತ್ರ ಬರೆದು ಪಿಎಫ್‍ಐ ಕಾರ್ಯಕರ್ತರ ಹೆಸರು, ಅವರ ಮೇಲಿದ್ದ ಪ್ರಕರಣ ಇವುಗಳ ಸಮಗ್ರ ದಾಖಲೆ ಕೊಡಿ ಎಂದು ವಿಪಕ್ಷ ನಾಯಕನಾಗಿ ಕೇಳಿದ್ದೇನೆ. ಆರು ತಿಂಗಳಿಂದ ಮಾಹಿತಿಯನ್ನೆ ಕೊಡದೆ ಕಡತವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಇಟ್ಟುಕೊಂಡು ಕೂತಿದ್ದಾರೆ. ಆದರೂ ನಾಚಿಕೆಯೆ ಇಲ್ಲದ ನಿರ್ಲಜ್ಜ ಬಿಜೆಪಿ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಇದೇ ಬಿಜೆಪಿಯೆ ಎಸ್‍ಡಿಪಿಐ ಜೊತೆ ಹಲವಾರು ಕಡೆ ಒಳ ಒಪ್ಪಂದ ಮಾಡಿಕೊಂಡ ಮಾಹಿತಿ ನಮ್ಮ ಬಳಿ ಇದೆ. ಇಷ್ಟಿದ್ದರೂ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಚುನಾವಣೆ ಹತ್ತಿರ ಬರುತ್ತಿದೆ. ಅಂಬಾನಿ, ಅದಾನಿಗಳ ರಾಯಭಾರಿಗಳು ಇನ್ನು ಮುಂದೆ ಕರ್ನಾಟಕಕ್ಕೆ ಬರುತ್ತಾರೆ. ಜನರಿಗೆ ಮುಳ್ಳಿನ ಟೋಪಿ ತೊಡಿಸಿ ಚಿನ್ನದ ಕಿರೀಟವೆನ್ನುತ್ತಾರೆ. ಜನರು ಜಾಗ್ರತೆ ವಹಿಸದಿದ್ದರೆ ನಾಡು ಶಾಶ್ವತವಾಗಿ ಕುಸಿದು ಹೋಗಲಿದೆ. ಕರ್ನಾಟಕದ ಯುವಕರು, ಬುದ್ಧಿವಂತರು ಎಲ್ಲರೂ ಇದನ್ನು ಅರ್ಥ ಮಾಡಿಕೊಂಡು ಕರ್ನಾಟಕವನ್ನು ಈ ಪೀಡೆಗಳಿಂದ ಮುಕ್ತಗೊಳಿಸಬೇಕು. ನವ ಕರ್ನಾಟಕ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡಬೇಕು’ ಎಂದು ಸಿದ್ದರಾಮಯ್ಯ ಕೋರಿದರು.
‘ಬಿಜೆಪಿಯವರ ರಾಷ್ಟ್ರ ಪ್ರೇಮವೆಂದರೆ ಅದು ಅಂಬಾನಿ, ಅದಾನಿಗಳಂಥ ಬಂಡವಾಳಿಗರಿಗೆ ಇಡೀ ದೇಶವನ್ನು ಲೂಟಿ ಹೊಡೆಯಲು ಲೈಸೆನ್ಸ್ ಕೊಡುವುದು ಎಂದರ್ಥ ಹಾಗೂ ರಾಷ್ಟ್ರಪ್ರೇಮವೆಂದರೆ ಮನುವಾದಿ ಸಿದ್ಧಾಂತವನ್ನು ಜಾರಿಗೆ ತಂದು ಬುದ್ಧ, ಬಸವಣ್ಣ, ನಾರಾಯಣಗುರು, ಅಂಬೇಡ್ಕರ್ ಮತ್ತು ಕುವೆಂಪು ಮುಂತಾದ ಮಹನೀಯರ ವಿಚಾರಗಳನ್ನು ಮೂಟೆಕಟ್ಟಿ ಮೂಲೆಗೆ ಎಸೆದು ಭಾರತವನ್ನು ಮತ್ತೆ ಕೆಲವರೆ ನಿಯಂತ್ರಿಸಬೇಕು ಎಂಬುದಾಗಿದೆ’
-ಸಿದ್ದರಾಮಯ್ಯ ವಿಪಕ್ಷ ನಾಯಕ