×
Ad

ಬಂಡೇಮಠ ಕೆಎಚ್‍ಬಿ ಬಡಾವಣೆ ಬಿಬಿಎಂಪಿಗೆ ಹಸ್ತಾಂತರ

Update: 2022-12-31 18:04 IST

ಬೆಂಗಳೂರು, ಡಿ. 31: ಬಂಡೇಮಠ ಕೆಎಚ್‍ಬಿ ಬಡಾವಣೆಯನ್ನು ಬಿಬಿಎಂಪಿಗೆ  ಹಸ್ತಾಂತರ ಮಾಡಬೇಕು ಎಂಬ ಸ್ಥಳೀಯರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.

ವಿಧಾನಸಭೆಯ ಅರ್ಜಿಗಳ ಸಮಿತಿಯಲ್ಲಿ ತೀರ್ಮಾನವಾಗಿದ್ದಂತೆ, ಬಂಡೇಮಠ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಲು ಕರ್ನಾಟಕ ಗೃಹ ಮಂಡಳಿಯು ಬಿಬಿಎಂಪಿಗೆ 5ಕೋಟಿ ರೂ.ಪಾವತಿಸುವ ಮೂಲಕ ಈ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ.

ಈ ಬಡಾವಣೆಯ ಅಭಿವೃದ್ಧಿಯ ಜವಾಬ್ದಾರಿಯನ್ನು ಡಿ.30ರಿಂದ ಅನ್ವಯವಾಗುವಂತೆ ಬಿಬಿಎಂಪಿಗೆ ವಹಿಸಲಾಗಿದೆ. ಕರ್ನಾಟಕ ಗೃಹ ಮಂಡಳಿಯ ಕಾಯ್ದೆ 29ರನ್ವಯ ಪೂರ್ಣಗೊಳಿಸಿದ ವಸತಿ ಬಡಾವಣೆಗಳನ್ನು ಮುಂದಿನ ನಿರ್ವಹಣೆಗಾಗಿ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಬೇಕು ಎಂಬ ನಿಯಮ ಇದೆ. 2016ರಿಂದ ಕೆಎಚ್‍ಬಿ ಬಂಡೇಮಠ ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಲು ಪ್ರಯತ್ನ ಮಾಡಿತ್ತಾದರೂ, ಅಭಿವೃದ್ಧಿ ವಿಚಾರದಲ್ಲಿ ಎರಡೂ ಸಂಸ್ಥೆಗಳ ಹಗ್ಗ ಜಗ್ಗಾಟದಿಂದ ನೆನೆಗುದಿಗೆ ಬಿದ್ದಿತ್ತು. ಇದರ ಪರಿಣಾಮವಾಗಿ, ನಾಗರಿಕರು ಮೂಲಸೌಕರ್ಯ ವಂಚಿತರಾಗಿ ಸಂಕಷ್ಟ ಪಡುವಂತಾಗಿತ್ತು. 

ಇದೀಗ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡಿರುವ 480ಕ್ಕೂ ಹೆಚ್ಚು ನಿವಾಸಿಗಳು ಬಿಬಿಎಂಪಿ ತಮ್ಮ ಬಡಾವಣೆಯನ್ನು ಅಭಿವೃದ್ಧಿಪಡಿಸುತ್ತದೆಂಬ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯ ಅರ್ಜಿಗಳ ಸಮಿತಿಯ ಅಧ್ಯಕ್ಷ ಎಸ್.ಸುರೇಶ್ ಕುಮಾರ್ ಮತ್ತು ಸಮಿತಿಯ ಎಲ್ಲ ಸದಸ್ಯ ಶಾಸಕರಿಗೆ ಹಾಗೂ ಇದಕ್ಕಾಗಿ ಹೋರಾಟ ನಡೆಸಿದ ಬಂಡೇಮಠ ಕೆಎಚ್‍ಬಿ. ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದೆ.

Similar News