ಗುಜರಾತಿನ ಕಸಾಯಿಖಾನೆಗೆ ನಂದಿನಿ?

Update: 2023-01-02 05:39 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಸರಕಾರವೇ ಜಾರಿಗೆ ತಂದ ‘ಗೋ ಹತ್ಯೆ ಕಾನೂನನ್ನು’ ಸರಕಾರವೇ ಉಲ್ಲಂಘಿಸುತ್ತಿದೆಯೆ? ಕಾನೂನಿನ ಪ್ರಕಾರ ಹಾಲುಕೊಡುವ ವಯಸ್ಕ, ಉಪಯುಕ್ತ ಗೋವನ್ನು ಯಾವ ಕಾರಣಕ್ಕೂ ಕಸಾಯಿಖಾನೆಗೆ ಒಪ್ಪಿಸುವಂತಿಲ್ಲ ಎನ್ನುವ ನಿಯಮವಿದೆ. ಆದರೆ ಕರ್ನಾಟಕದ ಹತ್ತು ಹಲವು ಹಾಲುಕೊಡುವ ಹಸುಗಳು ಈಗಾಗಲೇ ಗುಜರಾತಿನ ಕಸಾಯಿಖಾನೆಯ ಪಾಲಾಗಿದೆ. ವಿಜಯಾ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳು ದಕ್ಷಿಣ ಭಾರತದ ಆರ್ಥಿಕ ವಲಯದಲ್ಲ್ಲಿ ಕ್ರಾಂತಿಯನ್ನು ಮಾಡಿತ್ತು. ತಳಸ್ತರದ ಜನರನ್ನು ಈ ಬ್ಯಾಂಕ್‌ಗಳು ತಲುಪಿತ್ತು ಮಾತ್ರವಲ್ಲ, ಅವರನ್ನು ಆರ್ಥಿಕವಾಗಿ ಮೇಲೆತ್ತಲು ಮಹತ್ತರ ಕೊಡುಗೆಯನ್ನು ನೀಡಿದ್ದವು. ಆದರೆ ಉತ್ತರ ಭಾರತದ ನಷ್ಟದಲ್ಲಿರುವ ಬ್ಯಾಂಕ್‌ಗಳನ್ನು ಉಳಿಸುವುದಕ್ಕಾಗಿ ಕರ್ನಾಟಕದ ಈ ಲಾಭದಲ್ಲಿರುವ ಬ್ಯಾಂಕ್‌ಗಳನ್ನು ವಿಲೀನದ ಹೆಸರಿನಲ್ಲಿ ಬಲಿಕೊಡಲಾಯಿತು. ಕರ್ನಾಟಕದ ಆರ್ಥಿಕ ಕ್ಷೇತ್ರದ ಹೆಮ್ಮೆಯಾಗಿದ್ದ ಈ ಬ್ಯಾಂಕ್‌ಗಳು ಬೇರೆ ಬೇರೆ ಹೆಸರುಗಳಿಗೆ ಬಲವಂತದ ಮತಾಂತರಕ್ಕೊಳಗಾಗಿವೆ. ಇಂದು ಈ ಬ್ಯಾಂಕ್‌ಗಳಿಗೆ ಕರ್ನಾಟಕದ ಜನರು ಅನ್ಯರಾಗಿದ್ದಾರೆ.

 ಬ್ಯಾಂಕ್‌ಗಳ ಸರದಿ ಮುಗಿದ ಬೆನ್ನಿಗೇ, ಕರ್ನಾಟಕದ ಜನರಿಗೆ ಹಾಲುಣಿಸುವ ‘ನಂದಿನಿ’ಯ ಮೇಲೆ ವಕ್ರದೃಷ್ಟಿ ಬಿದ್ದಿದೆ. ಕರ್ನಾಟಕದ ಹಾಲು ಉತ್ಪಾದಕ ಮಹಾ ಮಂಡಳಿಯ ‘ನಂದಿನಿ’ ಕೇವಲ ಹಾಲು ಉತ್ಪಾದನೆಯ ಸಂಸ್ಥೆಯಾಗಿಯಷ್ಟೇ ರಾಜ್ಯದಲ್ಲಿ ಗುರುತಿಸಿಕೊಂಡಿಲ್ಲ. ಇದು ಜನರಿಂದ ಜನರಿಗಾಗಿಯೇ ರೂಪುಗೊಂಡ ಬಲಿಷ್ಠ ಸಹಕಾರಿ ಸಂಘಟನೆಯಾಗಿದೆ. ರೈತರನ್ನು ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಏಕಕಾಲದಲ್ಲಿ ಇಂದು ರಾಜ್ಯಾದ್ಯಂತ ಸಂಘಟಿಸಿದೆ. ಗ್ರಾಮೀಣ ಪ್ರದೇಶದ ರೈತರನ್ನೆಲ್ಲ ನಂದಿನಿ ಒಂದೇ ನೂಲಿನಲ್ಲಿ ಬೆಸೆದಿದೆ. ಹೈನೋದ್ಯಮ ನಷ್ಟದಾಯಕವಾಗಿದ್ದರೂ, ಈ ನಂದಿನಿಯ ದೆಸೆಯಿಂದಾಗಿ ರೈತರು ಇನ್ನೂ ಜೀವ ಉಳಿಸಿಕೊಂಡಿದ್ದಾರೆ. ಸರಕಾರ ‘ಗೋಹತ್ಯೆ ನಿಷೇಧ’ ಕಾನೂನು ಜಾರಿಗೆ ತಂದ ದಿನದಿಂದ ಹೈನೋದ್ಯಮ ರೈತರ ಪಾಲಿಗೆ ಇನ್ನಷ್ಟು ನಷ್ಟದಾಯಕವಾಗಿದೆ.

ತಾವೇ ಸಾಕಿದ ಜಾನುವಾರುಗಳನ್ನು ಮಾರುವ ಹಕ್ಕನ್ನು ಈ ಕಾಯ್ದೆಯಿಂದಾಗಿ ರೈತರು ಕಳೆದುಕೊಂಡರು. ಪರಿಣಾಮವಾಗಿ ಹಟ್ಟಿಯಲ್ಲಿದ್ದ ಅನುಪಯುಕ್ತ ಗೋವುಗಳನ್ನು ಮಾರಿ, ಬಂದ ಹಣದಿಂದ ನಷ್ಟವನ್ನು ಸರಿದೂಗಿಸುವ ಅವಕಾಶವನ್ನು ಅವರು ಕಳೆದುಕೊಂಡರು. ತಮ್ಮ ಅನುಪಯುಕ್ತ ಜಾನುವಾರುಗಳನ್ನು ಮಾರಲೂ ಆಗದೆ, ಹಟ್ಟಿಯಲ್ಲೂ ಇಟ್ಟುಕೊಳ್ಳಲಾಗದೆ ಸಂಕಷ್ಟಕ್ಕೀಡಾದರು. ರೈತರು ತಮ್ಮ ಜಾನುವಾರುಗಳನ್ನು ನಕಲಿ ಗೋರಕ್ಷಕರ ಕೈಗೆ ಅಥವಾ ಗೋಶಾಲೆಗಳಿಗೆ ಉಚಿತವಾಗಿ ಒಪ್ಪಿಸುವ ಸ್ಥಿತಿ ನಿರ್ಮಾಣವಾಯಿತು. ಇಂತಹ ಗೋಶಾಲೆಗಳು ಸರಕಾರದಿಂದ ಕೋಟಿಗಟ್ಟಲೆ ಅನುದಾನವನ್ನು ಬಾಚಿಕೊಳ್ಳುತ್ತಿದ್ದರೆ, ಹೈನೋದ್ಯಮದಲ್ಲಿ ತೊಡಗಿಕೊಂಡ ರೈತರು ಸಾಲಗಾರರಾದರು. ನಂದಿನಿಯ ದೆಸೆಯಿಂದಾಗಿ ಅವರು ಒಂದಿಷ್ಟು ಉಸಿರಾಡುತ್ತಿದ್ದಾರೆ. ನಂದಿನಿ ಕರ್ನಾಟಕದ ಜನರಿಗೆ ಹಾಲುಣಿಸುವ ತಾಯಿ. ನಂದಿನಿ ಹಾಲು ತನ್ನ ಗುಣಮಟ್ಟದ ಕಾರಣದಿಂದಾಗಿ ಕರ್ನಾಟಕದ ಮನೆ ಮನೆಯಲ್ಲಿ ಸ್ಥಾನ ಸಂಪಾದಿಸಿಕೊಂಡಿದೆ. ನಂದಿನಿ ತುಪ್ಪ, ಬೆಣ್ಣೆ ಮೊದಲಾದ ಪದಾರ್ಥಗಳು ರಾಜ್ಯದ ಹೊರಗೂ ಬಹಳಷ್ಟು ಖ್ಯಾತಿಯನ್ನು ಪಡೆದಿವೆ. ಸರಕಾರ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಬಳಿಕ, ಹೈನೋದ್ಯಮದಲ್ಲಿ ತೊಡಗಿಕೊಂಡ ರೈತರ ಸಂಖ್ಯೆ ಇಳಿಮುಖವಾಗಿದೆಯಾದರೂ, ನಂದಿನಿಯ ಕೆಚ್ಚಲಲ್ಲಿ ಹರಿಯುವ ಹಾಲಿನಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವಾಗಿಲ್ಲ. ನಂದಿನಿಯ ದೆಸೆಯಿಂದಾಗಿ ಹೊರಗಿನ ಖಾಸಗಿ ಕಂಪೆನಿಗಳ ಹಾಲು ಉತ್ಪನ್ನಗಳ ಪ್ರವೇಶ ಕಷ್ಟವೆನ್ನಿಸಿದೆ.

ಇಂತಹ ಸಂದರ್ಭದಲ್ಲಿ ಹಾಲು ಉತ್ಪಾದನಾ ಸಹಕಾರಿ ಸಂಘಗಳನ್ನು ವಿಲೀನಗೊಳಿಸುವ ಮಾತುಗಳು ಕೇಂದ್ರ ಸಚಿವರಿಂದ ಕೇಳಿ ಬರುತ್ತಿವೆ. ಗುಜರಾತ್‌ನ ಅಮುಲ್ ಸೇರಿದಂತೆ ಐದು ಸಹಕಾರಿ ಸಂಘಗಳ ಜೊತೆಗೆ ನಂದಿನಿಯನ್ನು ವಿಲೀನಗೊಳಿಸುವ ಮಾತುಗಳನ್ನು ಈ ಹಿಂದೆಯೇ ಕೇಂದ್ರ ಸಚಿವರು ಪ್ರಸ್ತಾಪಿಸಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ‘ವಿಲೀನದ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿ ಮುಖಂಡರು ಸ್ಪಷ್ಟನೆ ನೀಡಿದ್ದರು. ಆದರೆ ಎರಡು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಅವರು ಮತ್ತೆ ಈ ವಿಲೀನದ ಮಾತುಗಳನ್ನು ಆಡಿದ್ದಾರೆ. ಅಮುಲ್ ಜೊತೆಗೆ ನಂದಿನಿ ಕೈ ಜೋಡಿಸಿದರೆ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದು ಅವರು ರಾಜ್ಯದ ರೈತರ ಮೂಗಿಗೆ ‘ಬೆಣ್ಣೆ’ ಸವರಿದ್ದಾರೆ. ಅಮುಲ್‌ನ ಜೊತೆಗೆ ನಂದಿನಿಯ ವಿಲೀನದ ಹಿಂದೆ ರೈತರ ಹಿತಾಸಕ್ತಿಯಿಲ್ಲ, ಬದಲಿಗೆ ಅಮುಲ್ ಸಂಸ್ಥೆಯ ಹಿಂದಿರುವ ಗುಜರಾತ್‌ನ ಉದ್ಯಮಿಗಳ ಹಿತಾಸಕ್ತಿಯಿದೆ ಎನ್ನುವುದು ಜನರ ಆರೋಪವಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಬೇರೆ ಬೇರೆ ಕಾರಣಗಳಿಂದ ಹಾಲು ಉತ್ಪಾದನೆ ಇಳಿಮುಖವಾಗುತ್ತಿದೆ.

ಅ ಕೆಲವು ಹಿತಾಸಕ್ತಿಗಳು ಗೋವಿನ ಹೆಸರಿನಲ್ಲಿ ರಾಜಕೀಯ ನಡೆಸುತ್ತಿರುದರಿಂದಾಗಿ ದೇಶದಲ್ಲಿ ಸಾವಿರಾರು ರೈತರು ಹೈನೋದ್ಯಮದಿಂದ ಹಿಂದೆ ಸರಿಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅನುಪಯುಕ್ತ ಗೋವುಗಳನ್ನು ಮಾರಲು ಸಾಧ್ಯವಾಗದೆ ರೈತರು ಬೀದಿಪಾಲು ಮಾಡುತ್ತಿರುವುದರಿಂದ, ಅವುಗಳು ಅನಾರೋಗ್ಯಗಳಿಗೆ ಬಲಿಯಾಗಿವೆ. ಮಾತ್ರವಲ್ಲ, ಇತರ ಆರೋಗ್ಯವಂತ ಗೋವುಗಳಿಗೂ ಅವುಗಳು ರೋಗಗಳನ್ನು ಹರಡುತ್ತಿವೆ. ಪರಿಣಾಮವಾಗಿ ದೇಶಾದ್ಯಂತ ಲಕ್ಷಾಂತರ ಗೋವುಗಳು ಈಗಾಗಲೇ ಮೃತಪಟ್ಟಿವೆ. ಹಾಲು ಉತ್ಪಾದನೆಯ ಮೇಲೆ ಇದು ಸಹಜವಾಗಿಯೇ ದುಷ್ಪರಿಣಾಮಗಳನ್ನು ಬೀರಿದೆ. ಅಮುಲ್, ಪತಂಜಲಿಯಂತಹ ಸಂಸ್ಥೆಗಳು ಹಾಲು ಉತ್ಪಾದನೆಯನ್ನು ರಫ್ತು ಮಾಡುವುದರ ಬಗ್ಗೆ ಹೆಚ್ಚು ಆಸಕ್ತಿವಹಿಸಿವೆ. ಆದರೆ ತಮ್ಮ ಉತ್ಪಾದನೆಗೆ ಪೂರಕವಾಗಿ ಹಾಲಿನ ಪೂರೈಕೆಯಾಗುತ್ತಿಲ್ಲ. ಆದುದರಿಂದಲೇ, ಅವುಗಳ ಕಣ್ಣು ಕರ್ನಾಟಕದ ನಂದಿನಿಯ ಮೇಲೆ ಬಿದ್ದಿದೆ. ಸಂಕಷ್ಟದಲ್ಲಿರುವ ಉತ್ತರ ಭಾರತದ ಹಾಲು ಉತ್ಪಾದನಾ ಸಂಸ್ಥೆಯನ್ನು ಮೇಲೆತ್ತುವ ಭಾಗವಾಗಿಯೇ ನಂದಿನಿಯಂತಹ ಲಾಭದಾಯಕ ಸಂಸ್ಥೆಯನ್ನು ವಿಲೀನಗೊಳಿಸಲು ಸರಕಾರ ಮುಂದಾಗಿದೆ ಎನ್ನುವುದು ರೈತರ ಆರೋಪವಾಗಿದೆ. ಇದರಲ್ಲಿ ಯಶಸ್ವಿಯಾದರೆ, ಕರ್ನಾಟಕ ರಾಜ್ಯದ ನಂದಿನಿಯ ಹೆಸರು ಇಲ್ಲವಾಗುತ್ತದೆ ಮಾತ್ರವಲ್ಲ, ರಾಜ್ಯದ ಮಕ್ಕಳು ಹಾಲಿಗಾಗಿ ಗುಜರಾತ್‌ನ ಉದ್ಯಮಿಗಳ ಬಾಯಿ ನೋಡಬೇಕಾಗುತ್ತದೆ.

ಇದೇ ಸಂದರ್ಭದಲ್ಲಿ ನಂದಿನಿ ವಿಲೀನವಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಸ್ಪಷ್ಟೀಕರಣ ನೀಡಿದ್ದಾರೆ. ‘‘ಒಬ್ಬರಿಗೊಬ್ಬರು ಸಹಕಾರದಿಂದ ಕೆಲಸ ಮಾಡುವುದು ಇದರ ಉದ್ದೇಶ. ನಂದಿನಿ ಮತ್ತು ಅಮುಲ್ ತಾಂತ್ರಿಕವಾಗಿ ಮಾರುಕಟ್ಟೆಯಲ್ಲಿ ಪರಸ್ಪರ ಸಹಕಾರ ಮಾಡಬೇಕು. ಇದರರ್ಥ ವಿಲೀನಗೊಳಿಸುವುದು ಅಲ್ಲ’’ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಆದರೆ ಯಾರ ಹಿತಾಸಕ್ತಿಗೆ ಪೂರಕವಾಗಿ ಪರಸ್ಪರ ಸಹಕಾರ ಮಾಡಬೇಕು ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಇದೊಂದು ರೀತಿ ‘ಅಳಿಯ ಅಲ್ಲ, ಮಗಳ ಗಂಡ’ ಎಂದಂತೆ. ಉತ್ತರ ಭಾರತದ ಸಹಕಾರಿ ಸಂಸ್ಥೆಗಳ ಉಳಿವಿಗಾಗಿ ಕರ್ನಾಟಕದ ನಂದಿನಿ ಸಹಕಾರ ನೀಡಬೇಕು ಎನ್ನುವುದೇ ಮಾತಿನ ಅಂತಿಮ ತಾತ್ಪರ್ಯವಾಗಿದೆ. ಕರ್ನಾಟಕ ನಂದಿನಿಯನ್ನು ಕಳೆದುಕೊಂಡರೆ ಅದರ ಜೊತೆ ಜೊತೆಗೆ ಈ ನಾಡನ್ನು ಬಲವಾಗಿ ಬೆಸೆದುಕೊಂಡಿರುವ ಸಹಕಾರಿ ತತ್ವವನ್ನೂ ಕಳೆದುಕೊಳ್ಳಬೇಕಾಗುತ್ತದೆ. ನಂದಿನಿ ರೈತರ ಕಟ್ಟ ಕಡೆಯ ಆಸರೆಯಾಗಿದೆ. ನಂದಿನಿಯ ಉಳಿವು ರಾಜ್ಯದ ರೈತರ ಉಳಿವೂ ಆಗಿದೆ.

Similar News