ಬಹುರೂಪಿ ವ್ಯಕ್ತಿತ್ವದ ‘ಕಾಮರೂಪಿ’

Update: 2023-01-02 05:07 GMT

ಹುಟ್ಟೂರಿಗಿಂತಲೂ ಅವರನ್ನು ಅಸ್ಸಾಂ ಬಹುವಾಗಿ ಸೆಳೆಯುತ್ತಿತ್ತೆಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತು. ಅಸ್ಸಾಂ ಅವರೊಳಗೆ ಅದೆಷ್ಟು ಗಾಢವಾಗಿತ್ತೆಂಬುದನ್ನು ಹೇಳಲು ಅಸ್ಸಾಮ್‌ನ ಮೂಲ ಹೆಸರಾದ ಕಾಮರೂಪ ಎಂಬುದನ್ನೇ ಅವರು ತಮ್ಮ ಸಾಹಿತ್ಯಕ ಬರವಣಿಗೆಯನ್ನು ಮಾಡಲು ಕಾವ್ಯನಾಮವಾಗಿ ಇಟ್ಟುಕೊಂಡಿದ್ದನ್ನು ಉಲ್ಲೇಖಿಸಲಾಗುತ್ತದೆ.

ಎಂ.ಎಸ್.ಪ್ರಭಾಕರ, ಅಧ್ಯಾಪಕ, ಪತ್ರಕರ್ತ ಮತ್ತು ಬರಹಗಾರರಾಗಿದ್ದರು. ಆದರೆ ಅವರು ತೀರಾ ತೊಡಗಿಸಿಕೊಂಡದ್ದು ಪತ್ರಿಕೋದ್ಯಮದಲ್ಲಿ ಮತ್ತು ಅವರ ಗ್ರಹಿಕೆಗಳು ಹೆಚ್ಚು ವ್ಯಾಪಕವಾಗಿ ವ್ಯಕ್ತವಾದದ್ದು ಅವರೊಳಗಿನ ಪತ್ರಕರ್ತನ ಮೂಲಕ. ಅಚ್ಚರಿಯೆಂದರೆ, ಅವರು ಪತ್ರಕರ್ತನಾದದ್ದು ತಮ್ಮ 40ನೇ ವಯಸ್ಸಿನಲ್ಲಿ ಮತ್ತು ಅದಕ್ಕೂ ಮುನ್ನ ಅವರು ಸುಮಾರು 17 ವರ್ಷಗಳ ಕಾಲ ಅಧ್ಯಾಪಕ ವೃತ್ತಿಯಲ್ಲಿದ್ದರು. ಅವರು, ಸಾಹಿತ್ಯಕ ವಲಯದಲ್ಲಿ ಕಾಮರೂಪಿ ಎಂದೇ ಪರಿಚಿತರಾಗಿದ್ದ, ಪತ್ರಕರ್ತ ಎಂ.ಎಸ್. ಪ್ರಭಾಕರ. ಮೊನ್ನೆ ಡಿಸೆಂಬರ್ 29ರಂದು (2022) ಅವರು ನಿಧನರಾದರು.

ಕೋಲಾರ ತಾಲೂಕು ಮೋಟ್ನಹಳ್ಳಿ ಗ್ರಾಮದಲ್ಲಿ 1936ರಲ್ಲಿ ಎಂ. ಎಸ್. ಪ್ರಭಾಕರ್ ಜನಿಸಿದರು. ಕೋಲಾರದಲ್ಲಿಯೇ ಶಾಲಾ ಓದು. ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ 1956ರಲ್ಲಿ ಇಂಗ್ಲಿಷ್ ಮತ್ತು ಸಾಹಿತ್ಯದಲ್ಲಿ ಆನರ್ಸ್ ಪದವಿ ಮತ್ತು 1957ರಲ್ಲಿ ಸ್ನಾತಕೋತ್ತರ ಪದವಿ. ಬಳಿಕ ಬೆಂಗಳೂರು ಮತ್ತು ಧಾರವಾಡಗಳಲ್ಲಿ ಸುಮಾರು 4 ವರ್ಷ ಕಾಲ ಉಪನ್ಯಾಸಕರಾಗಿದ್ದ ಅವರು 1962ರಲ್ಲಿ ಗುವಾಹಟಿ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರಕಾರದ ಕೆಂಗಣ್ಣಿಗೂ ಅವರು ತುತ್ತಾಗಬೇಕಾಯಿತು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತು. 13 ವರ್ಷಗಳ ಬಳಿಕ ಅಂದರೆ 1975ರಲ್ಲಿ ರಾಜೀನಾಮೆ ನೀಡಿದ ಮೇಲೆ ಶುರುವಾಯಿತು ಅವರ ಪತ್ರಿಕೋದ್ಯಮ ವೃತ್ತಿ.

ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿಯ ಸಂಪಾದಕೀಯ ಬಳಗ ಸೇರುವುದ ರೊಂದಿಗೆ ತಮ್ಮ ಪತ್ರಿಕೋದ್ಯಮ ಆರಂಭಿಸಿದ ಅವರು, ಏಳು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದರು. 1983ರಲ್ಲಿ ಗುವಾಹಟಿಗೆ ಹಿಂದಿರುಗಿ ದಿ ಹಿಂದೂ ಮತ್ತು ಫ್ರಂಟ್‌ಲೈನ್ ಪತ್ರಿಕೆಗಳ ವಿಶೇಷ ವರದಿಗಾರರಾಗಿ ಅಸ್ಸಾಂ ಮತ್ತು ಅದರ ನೆರೆಹೊರೆಯಲ್ಲಿನ ಬೆಳವಣಿಗೆಗಳ ಕುರಿತು ಬರೆದರು. ಅಸ್ಸಾಂ ರಾಜಕಾರಣ, ಸಾಂಸ್ಕೃತಿಕ ಚಟುವಟಿಕೆ, ಮಾನವೀಯ ಸಂವೇದನೆ ಬಗ್ಗೆ ವರದಿ ಮಾಡುತ್ತಿದ್ದ ಅವರನ್ನು ದಿ ಹಿಂದೂ ದಕ್ಷಿಣ ಆಫ್ರಿಕಾಕ್ಕೆ ವರ್ಗ ಮಾಡಿತು.

 1994ರಲ್ಲಿ ಅವರು ದಕ್ಷಿಣ ಆಫ್ರಿಕಾದಲ್ಲಿ ಇವೇ ಪತ್ರಿಕೆಗಳ ವಿಶೇಷ ವರದಿಗಾರರಾಗಿ, ಜೋಹಾನ್ಸ್‌ಬರ್ಗ್‌ಗೆ ಹೋದರು. ಸುಮಾರು 8 ವರ್ಷ ಅವರು ಅಲ್ಲಿ ಕೆಲಸ ಮಾಡಿದ್ದರು. ಅಲ್ಲಿನ ಸ್ವಾತಂತ್ರ ಹೋರಾಟಗಾರ ನೆಲ್ಸನ್ ಮಂಡೇಲಾ ಅವರ ಸಂದರ್ಶನ ನಡೆಸಿದ ಭಾರತದ ಮೊದಲ ಪತ್ರಕರ್ತ ಎಂಬ ಖ್ಯಾತಿ ಗಳಿಸಿದ್ದರು. ದಕ್ಷಿಣ ಆಫ್ರಿಕಾದ ಸ್ಥಿತ್ಯಂತರಗಳನ್ನು ಅಲ್ಲಿಯೇ ಇದ್ದು ವರದಿ ಮಾಡಿದ ಭಾರತೀಯ ವರದಿಗಾರರಲ್ಲಿ ಎಂ.ಎಸ್. ಪ್ರಭಾಕರ ಪ್ರಮುಖರು. 2002ರಲ್ಲಿ ಮತ್ತೆ ಗುವಾಹಟಿಗೆ ಬಂದು, ಬಳಿಕ ನಿವೃತ್ತರಾದರು.

ಅಸ್ಸಾಂ ವಿಚಾರದಲ್ಲಿ ಅವರೆಷ್ಟು ಅಧಿಕೃತತೆಯಿಂದ ಮಾತನಾಡಬಲ್ಲವರಾಗಿದ್ದರೆಂಬು ದನ್ನು ದಿನೇಶ್ ಅಮಿನ್‌ಮಟ್ಟು ಅವರು ಒಂದು ಮಾತಿನಲ್ಲಿ ಬರೆದಿದ್ದಾರೆ: ನಾನು ಅಸ್ಸಾಂ ಗಲಭೆ ವರದಿಗಾಗಿ ಹೊರಟಿದ್ದಾಗ ಫೋನ್ ಮಾಡಿದ್ದೆ. ಆ ರಾಜ್ಯದ ಇಂಚಿಂಚಿನ ಅರಿವಿದ್ದ ಅವರ ಮಾತುಗಳನ್ನು ಕೇಳಿದ ನಂತರ ಬೆಂಗಳೂರಿನಲ್ಲಿಯೇ ಕೂತು ವರದಿ ಬರೆಯಬಹುದು ಅನಿಸಿತ್ತು.

ಅವರ ಬಗ್ಗೆ ಅಮಿನ್‌ಮಟ್ಟು ಅವರು ನೆನಪು ಮಾಡಿಕೊಂಡಿರುವ ಇನ್ನೊಂದು ವಿಚಾರವನ್ನೂ ಇಲ್ಲಿ ಪ್ರಸ್ತಾವಿಸಬೇಕು. ಅವರು ಬರೆದಿದ್ದಾರೆ: ಮೊದಲ ಬಾರಿ ಯಾವುದೋ ಕ್ಲಬ್ಬಿನ ಮಂದ ಬೆಳಕಿನಲ್ಲಿ ತಮ್ಮನ್ನು ಪರಿಚಯಿಸುತ್ತಾ ‘ನನ್ನ ಹೆಸರು’ ‘ಕನಿಷ್ಠ ಬೆಂಬಲ ಬೆಲೆ’ ಎಂದಿದ್ದರು. ನಾವೆಲ್ಲ ತಲೆ ಕೆರೆದುಕೊಳ್ಳುತ್ತಿದ್ದಾಗ ‘ಅಂದರೆ ಖ’ ಎಂದು ನಕ್ಕಿದ್ದರು.

ನಾಲ್ಕು ವರ್ಷಗಳ ಹಿಂದೆ ಪ್ರೊ.ಚಟರ್ಜಿ, ಪ್ರಭಾ ಬೆಳವಂಗಲ ಮತ್ತು ಮೀನಾಕ್ಷಿ ಸುಂದರಮ್ ಜೊತೆ ಕೋಲಾರದಲ್ಲಿರುವ ಅವರ ಮನೆಯಲ್ಲಿಯೇ ಭೇಟಿಮಾಡಿದ್ದೆ. ಆಗಲೇ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸುತ್ತಲೂ ಪುಸ್ತಕಗಳನ್ನು ಹರಡಿಕೊಂಡು ಕೂತಿದ್ದರು. ಅವರು ಓದಲು ಎತ್ತಿಟ್ಟಿದ್ದ ಮೂರು ಪುಸ್ತಕಗಳು ಅವರ ಜೀವನಾಸಕ್ತಿಗೆ ಸಾಕ್ಷಿಯಾಗಿತ್ತು. ಆ ಪುಸ್ತಕಗಳಲ್ಲಿ ಒಂದು ವೆಂಡಿ ಡೋನಿಗೇರ್ ಮತ್ತು ಸುಧೀರ್ ಕಕ್ಕರ್ ಬರೆದ ‘ಕಾಮಸೂತ್ರ’. ಇನ್ನೊಂದು ಜಾರ್ಜ್ ವುಡ್ ಕಾಕ್ ಅವರ ‘ಗಾಂಧಿ’ ಮತ್ತೊಂದು ಕಾಲಿನ್ಸ್ ಜೆಮ್ ಸಂಗ್ರಹದ ‘ಬೈಬಲ್’ ಡಿಕ್ಸನರಿ.

ಮಾತೃಭಾಷೆ ಕನ್ನಡದೊಂದಿಗೆ ತೆಲುಗು ಕೂಡ ಬಲ್ಲವರಾಗಿದ್ದ ಎಂ.ಎಸ್.ಪ್ರಭಾಕರ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ, ನಂತರ ಇಂಗ್ಲಿಷ್ ಪತ್ರಿಕಾ ರಂಗದಲ್ಲಿ ತೊಡಗಿಸಿ ಕೊಂಡಿದ್ದರೂ, ಸೃಜನಶೀಲ ಬರವಣಿಗೆಗೆ ಅವರು ಕನ್ನಡವನ್ನು ಆಯ್ದುಕೊಂಡರು. ಒಂದು ತೊಲ ಪುನುಗು ಮತ್ತು ಇತರ ಕತೆಗಳು, ಕಿರು ಕಾದಂಬರಿಗಳಾದ ಕುದುರೆ ಮೊಟ್ಟೆ ಮತ್ತು ಅಂಜಿಕಿನ್ಯಾತಕಯ್ಯ ಇವು ಅವರ ಕನ್ನಡ ಕೃತಿಗಳು. ಇವೆಲ್ಲವೂ ಕಾಮರೂಪಿ ಎಂಬ ಕಾವ್ಯನಾಮದಲ್ಲಿ ಮನೋಹರ ಗ್ರಂಥಮಾಲೆಯಿಂದ ಪ್ರಕಟಗೊಂಡವು. ಇಂಗ್ಲಿಷಿನಲ್ಲಿ ಅವರು ಲಘು ಪ್ರಬಂಧಗಳ ಸಂಕಲನ ಪ್ರಕಟಿಸಿದ್ದಾರೆ. 

ಅಲ್ಲದೆ, Light Essays, Words and Ideas  ಎಂಬ ಆ ಕೃತಿ 2007ರಲ್ಲಿ ಪ್ರಕಟವಾದರೆ, ಅವರ ಸುದೀರ್ಘ ವಿಶ್ಲೇಷಣಾತ್ಮಕ ಪ್ರಬಂಧಗಳ ಸಂಕಲನ Looking Back into the Future: Identity and Insurgency in Northeast India ಕೃತಿಯು 2012ರಲ್ಲಿ ಪ್ರಕಟವಾಯಿತು. ಅವರು ಪಿಎಚ್‌ಡಿಗೆ ಆರಿಸಿಕೊಂಡಿದ್ದು ಜಾರ್ಜ್ ಆರ್ವೆಲ್ ಸಾಹಿತ್ಯವಾಗಿತ್ತು. ಅವರು ತಮ್ಮನ್ನು ತಾವು ಆಕಸ್ಮಿಕ ಬರಹಗಾರ ಎಂದೇ ಕರೆದುಕೊಳ್ಳುತ್ತಿದ್ದರಂತೆ.

ನಾಲ್ಕು ದಶಕಗಳಷ್ಟು ದೀರ್ಘ ಕಾಲ ಕರ್ನಾಟಕದಿಂದ ಹೊರಗೆ ಇದ್ದ ಅವರು ಪೂರ್ಣಕಾಲದ ಪತ್ರಿಕಾ ವೃತ್ತಿಯಿಂದ ಬಿಡುಗಡೆ ಹೊಂದಿದ ಬಳಿಕ ತಮ್ಮ ಕೊನೆಯ ದಿನಗಳನ್ನು ಕೋಲಾರದ ಕಟಾರಿಪಾಳ್ಯದ ಮನೆಯಲ್ಲಿ ಕಳೆದರು. ಬೆಂಗಳೂರಿನ ಎಂ. ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡಿದ್ದರು. ಅವರ ಪ್ರಮುಖ ಸಾಹಿತ್ಯ ಕೃತಿಗಳು. ಕಥೆ, ಕಾದಂಬರಿ, ಕವನ, ಬರಹ, ಬ್ಲಾಗ್ ಬರಹಗಳನ್ನೊಳಗೊಂಡ ಕಾಮರೂಪಿ ಸಮಗ್ರ ಕೃತಿಯನ್ನು ಸಂಚಯ ಪುಸ್ತಕ ಪ್ರಕಾಶನ ಪ್ರಕಟಿಸಿದೆ.

ಕವಿ, ಇತಿಹಾಸ ಪ್ರಾಧ್ಯಾಪಕ ಪ್ರೊ.ಅಶೋಕ್ ಶೆಟ್ಟರ್ ಅವರು ಕಾಮರೂಪಿಯವರನ್ನು ನೆನಪಿಸಿಕೊಂಡಿರುವುದು ಹೀಗೆ: ಪ್ರೊ.ಎಸ್. ಶೆಟ್ಟರ್ ಅವರ ಸ್ನೇಹಿತರಾಗಿದ್ದ ಕಾಮರೂಪಿ ಶೆಟ್ಟರ್ ಅವರ ಶಂಗಂ ತಮಿಳಗಂ ಪುಸ್ತಕದ ಪುನರ್ಮುದ್ರಿತ ಆವೃತ್ತಿಯ ಬಿಡುಗಡೆ ಮತ್ತು ಅದರ ಭಾಗವಾಗಿ ನಡೆದ ಕಮ್ಮಟದ ಸಂದರ್ಭದಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಧಾರವಾಡಕ್ಕೆ ಬಂದಾಗ ಶೆಟ್ಟರ್ ಅವರ ನಿವಾಸದಿಂದ ಅವರನ್ನು ನನ್ನ ಕಾರಿನಲ್ಲಿಯೇ ಕಾರ್ಯಕ್ರಮ ನಡೆಯಲಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಕರೆದೊಯ್ದಿದ್ದೆ.

 ಮಾಳಮಡ್ಡಿಯ ಕ್ರಾಸ್ ರೋಡ್‌ನಿಂದ ರೈಲ್ವೆ ಸ್ಟೇಶನ್ ಮುಖ್ಯ ರಸ್ತೆ ಸೇರುವ ದಾರಿಯಲ್ಲಿ ದೊಡ್ಡ ಕಲ್ಲೊಂದರ ಮೇಲೆ ನನ್ನ ಕಾರಿನ ಟೈರ್ ಹತ್ತಿ ಇಳಿದಾಗ ‘ನಿಮಗೆ ಅಲ್ಲಿ ಅಷ್ಟು ದೊಡ್ಡ ಕಲ್ಲಿರುವುದು ಕಂಡಿರಲಿಲ್ವಾ?’ ಎಂದಿದ್ದರು. ‘ಇಲ್ಲ ಸರ್ ನಿಮ್ಮ ಮಾತು ಕೇಳಿಸಿಕೊಳ್ಳುತ್ತಿದ್ದೆ, ಗಮನಕ್ಕೆ ಬರಲಿಲ್ಲ; ಎಂದಿದ್ದೆ. ಧಾರವಾಡದ ಕೋರ್ಟ್ ಸರ್ಕಲ್ ಬಳಿ ಬಂದಾಗ ಇದು ‘ಜುಬಿಲಿ ಸರ್ಕಲ್ ಅಲ್ವಾ’ ಎಂದವರು ಕೇಳಿದಾಗ ‘ಅಲ್ಲ, ಜುಬಿಲಿ ಸರ್ಕಲ್ ಇನ್ನೂ ಮುಂದಿದೆ. 

ಅದು ಹೇಗೆ ನಿಮಗೆ ಜುಬಿಲಿ ಸರ್ಕಲ್, ಕಿಟೆಲ್ ಕಾಲೆಜ್ ಇವೆಲ್ಲಾ ಗೊತ್ತು? ಈ ಮುಂಚೆ ಧಾರವಾಡಕ್ಕೆ ಬಂದಿದ್ದಿರಾ?’ ಎಂದು ಕೇಳಿದರೆ ‘ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿ 1960ರ ದಶಕದಲ್ಲಿ ಒಂದೆರಡು ವರ್ಷ ಇದ್ದೆ, ಡಾ. ಶೆಟ್ಟರ್ ಆಗಿನಿಂದಲೇ ಪರಿಚಯ’ ಎಂದಿದ್ದರು. ನಿವೃತ್ತಿಯ ನಂತರ ಕೋಲಾರದ ಬಳಿ ತಮ್ಮ ಹಳೆಯ ಮನೆಯಿದ್ದು ಅಲ್ಲೇ ಈಗ ವಾಸಿಸುತ್ತಿರುವುದಾಗಿ ಹೇಳಿದರು.

ಹುಟ್ಟೂರಿಗಿಂತಲೂ ಅವರನ್ನು ಅಸ್ಸಾಂ ಬಹುವಾಗಿ ಸೆಳೆಯುತ್ತಿತ್ತೆಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತು. ಅಸ್ಸಾಂ ಅವರೊಳಗೆ ಅದೆಷ್ಟು ಗಾಢವಾಗಿತ್ತೆಂಬುದನ್ನು ಹೇಳಲು ಅಸ್ಸಾಮ್‌ನ ಮೂಲ ಹೆಸರಾದ ಕಾಮರೂಪ ಎಂಬುದನ್ನೇ ಅವರು ತಮ್ಮ ಸಾಹಿತ್ಯಕ ಬರವಣಿಗೆಯನ್ನು ಮಾಡಲು ಕಾವ್ಯನಾಮವಾಗಿ ಇಟ್ಟುಕೊಂಡಿದ್ದನ್ನು ಉಲ್ಲೇಖಿಸಲಾಗುತ್ತದೆ. ಮತ್ತೆ ಅಲ್ಲಿಗೇ ಹೋಗಿಬಿಡುತ್ತೇನೆ ಎನ್ನುತ್ತಿದ್ದುದೂ ಇತ್ತಂತೆ. 

ಈ ಕೆಲವು ದಶಕಗಳಲ್ಲಿ ಬದಲಾಗಿರುವ ಕರ್ನಾಟಕದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಿಸರದೊಡನೆ ಅವರಿಗೆ ಪುನಃ ಸಂಬಂಧವನ್ನು ಬೆಸೆದುಕೊಳ್ಳಲಿಕ್ಕಾಗಲಿಲ್ಲ ಎಂಬ ಮಾತುಗಳಿವೆ.

Similar News