ಬಿಎಸ್‌ಎನ್‌ಎಲ್ ಜಾಗವನ್ನು ಖಾಸಗಿಯವರಿಗೆ ಮಾರಬೇಡಿ

Update: 2023-01-02 18:34 GMT

ಸಂವಿಧಾನದತ್ತವಾಗಿ ಕಾರ್ಯಾಚರಿಸಿ, ಕರ್ನಾಟಕ ರಾಜ್ಯ ಸರಕಾರವು, ಸಾರ್ವಜನಿಕ ಉದ್ದೇಶಕ್ಕೋಸ್ಕರ ಅಂದರೆ - ಭಾರತ ಸಂಚಾರ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಇವರಿಗೆ ಕದ್ರಿಪಾರ್ಕ್‌ನ ಎದುರುಗಡೆ ಎರಡು ಎಕರೆ ಸ್ಥಳವನ್ನು, ಕನ್ನಡಿಗರಿಗೆ ದೂರ ಸಂಪರ್ಕ ಲ್ಯಾಂಡ್ ಲೈನ್ ನೀಡಲು; ಜುಜುಬಿ ಹಣಕ್ಕೆ ದಶಕಗಳ ಹಿಂದೆ ನೀಡಿತ್ತು. ಆಗ ನಡೆದ ಒಪ್ಪಂದದಲ್ಲಿ ಲ್ಯಾಂಡ್ ಲೈನ್‌ಗೆ ಅರ್ಜಿ ಸಲ್ಲಿಸಿ ಸುಮಾರು ಹತ್ತು ವರ್ಷಗಳಾದರೂ ಸಂಪರ್ಕ ಸಿಗದ ಕಾರಣ; ಮೂಲಭೂತ ಸೌಕರ್ಯವಾದ ಟೆಲಿಫೋನ್ ಎಕ್ಸ್‌ಚೇಂಜ್‌ಗಾಗಿ ಜಮೀನು ನೀಡಲಾಗಿತ್ತು. ಇದರಲ್ಲಿ ಕೇವಲ 50 ಸೆಂಟ್ಸ್ ಜಾಗದಲ್ಲಿ ಮಾತ್ರ, ಟೆಲಿಫೋನ್ ಎಕ್ಸ್‌ಚೇಂಜ್ ಕಟ್ಟಡ ನಿರ್ಮಿಸಲ್ಪಟ್ಟಿದೆ.

ಯಾವ ಉದ್ದೇಶಕ್ಕಾಗಿ ಜಮೀನು ನೀಡಲಾಗಿದೆಯೋ ಆ ಉದ್ದೇಶಕ್ಕಾಗಿ ಮಾತ್ರ ಅದರ ಬಳಕೆಯಾಗಬೇಕು. ಬಳಕೆಯಾಗದೆ ಜಮೀನು ಉಳಿದಿದ್ದರೆ, ಅದನ್ನು ತಕ್ಷಣ ರಾಜ್ಯ ಸರಕಾರಕ್ಕೆ ವಾಪಸ್ ಮಾಡಬೇಕು ಎಂಬ ನಿಯಮವಿದೆ. ಅತ್ಯಂತ ಕಡಿಮೆ ದರಕ್ಕೆ ಸಿಕ್ಕ ಜಮೀನಿನಲ್ಲಿ ಎರಡು ಎಕರೆ ಸ್ಥಳವನ್ನು, ದಶಕಗಳಿಂದ, ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು (ಗೋಡೌನ್ ಹಾಗೂ ನೌಕರರ ವಸತಿಗಾಗಿ) ಉಪಯೋಗಿಸದೆ ಪಾಳು ಬಿಟ್ಟಿತ್ತು. ಈ ಹೆಚ್ಚುವರಿ ಜಮೀನನ್ನು ವಾಪಸ್ ರಾಜ್ಯ ಸರಕಾರಕ್ಕೆ ನೀಡಿರಲಿಲ್ಲ.
ಆನಂತರ ಪೋಸ್ಟ್ ಹಾಗೂ ಟೆಲಿಗ್ರಾಫ್ ಒಂದೇ ಆಗಿದ್ದ ಕಂಪೆನಿ ಬೇರೆ ಬೇರೆಯಾದವು. 2011ರಿಂದ ಮೊಬೈಲ್ ಆರಂಭವಾಗಿ, ಲಾಭದಲ್ಲಿ ನಡೆಯುವ ಬಿಎಸ್‌ಎನ್‌ಎಲ್ ನಷ್ಟದಲ್ಲಿ ಹೋಯಿತು.

ನಷ್ಟದಲ್ಲಿರುವ ಸರಕಾರಿ ಸಂಸ್ಥೆಗಳು ತಮ್ಮಲ್ಲಿ ಉಪಯೋಗಿಸದೆ ಇರುವ ಯಾವುದೇ ಸ್ಥಿರ,ಚರ ಸ್ವತ್ತುಗಳನ್ನು ಮಾರಾಟ ಮಾಡಿ ನಗದೀಕರಣವನ್ನು ಹೆಚ್ಚಿಸಬಹುದೆಂಬ ಕೇಂದ್ರ ಸರಕಾರದ ನೀತಿ ಇದೆ. ಈ ನೀತಿಯಡಿ; ಸಮತಟ್ಟಾಗಿರುವ ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಈ 200 ಸೆಂಟ್ಸ್ ಜಾಗವನ್ನು; ಬಹಿರಂಗ ಏಲಮ್ ಮಾಡಲು ಹೊರಟಿದೆ. ಇದರಿಂದಾಗಿ 30-40 ಕೋಟಿ ರೂ. ಸಿಗಬಹುದೆಂಬ ಸಾಮಾನ್ಯ ಲೆಕ್ಕಾಚಾರವಿದೆ.
ಮಂಗಳೂರು ನಗರದ ಕೇಂದ್ರ ಭಾಗದಲ್ಲಿರುವ ಈ ಜಮೀನಿಗೆ, ಅತ್ಯಂತ ಹೆಚ್ಚಿನ ಬೇಡಿಕೆ ಇದೆ. ಈ ಜಮೀನಿನ ಪಕ್ಕದಲ್ಲಿಯೇ ಮಂಗಳೂರು ಆಕಾಶವಾಣಿ, ಕದ್ರಿ ಪಾರ್ಕ್, ಕೆಪಿಟಿ, ಐಟಿಐ ಹಾಗೂ ಪ್ರವಾಸಿ ಬಂಗಲೆ ಇದೆ. ಜಮೀನಿನ ಎದುರು ಹಾಗೂ ಹಿಂದುಗಡೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಇದೆ. ಪಕ್ಕದಲ್ಲಿಯೇ ಶಾಲೆ ಹಾಗೂ ಕಾಲೇಜುಗಳು ಇವೆ. ಆದುದರಿಂದ ಕೋಟಿಗಟ್ಟಲೆ ಬೆಲೆಬಾಳುವ ಈ ರಾಜ್ಯ ಸರಕಾರದ ಜಮೀನನ್ನು, ರಾಜ್ಯದ ಕನ್ನಡಿಗರಿಗಾಗಿಯೇ ಉಪಯೋಗಿಸಬೇಕು; ಅದನ್ನು ಖಾಸಗಿ ವ್ಯಕ್ತಿಗಳಿಗೆ ಮಾರಬಾರದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀ ನಾಗರಿಕನು ಕೂಡ ಬಯಸುತ್ತಾನೆ. ಉಪಯೋಗಿಸದೆ ಬಾಕಿ ಉಳಿದ ಕೋಟಿಗಟ್ಟಲೆ ಬೆಲೆ ಬಾಳುವ ರಾಜ್ಯ ಸರಕಾರದ ಜಮೀನನ್ನು; ರಾಜ್ಯ ಸರಕಾರಕ್ಕೆ ಅಥವಾ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ವಾಪಸು ನೀಡಬೇಕು, ಅದನ್ನು ಖಾಸಗಿ ವ್ಯಕ್ತಿಗಳಿಗೆ ಬಹಿರಂಗ ಏಲಂ ಮಾಡಬಾರದು ಎಂಬ ನಿಯಮವಿದೆ.

ಎದುರುಗಡೆ ಇರುವ ಕದ್ರಿ ಪಾರ್ಕ್ ತೋಟಗಾರಿಕಾ ಇಲಾಖೆಯಡಿ ಬರುತ್ತದೆ. ಆದರೆ ಅದರ ನಿರ್ವಹಣೆಗಾಗಿ ಮಂಗಳೂರು ಮಹಾನಗರ ಪಾಲಿಕೆಯು ತೆರಿಗೆ ಸಂಗ್ರಹಿಸುತ್ತಿದೆ. ಕದ್ರಿ ಪಾರ್ಕಿಗೆ ಬರುವ ನೂರಾರು ವಾಹನಗಳು ರಸ್ತೆಯ ಇಕ್ಕೆಲಗಳಲ್ಲೂ ನಿಂತು ಇತರ ವಾಹನಗಳು ಆ ರಸ್ತೆಯಲ್ಲಿ ಹೋಗುವಂತಿಲ್ಲ. ಇಲ್ಲಿ ಯಾವಾಗಲೂ ಟ್ರಾಫಿಕ್ ಜಾಮ್ ಆಗುತ್ತಿರುತ್ತದೆ. ಪಾರ್ಕಿಗೆ ಬರುವ ಜನರಿಗೂ ಸುರಕ್ಷಿತವಾಗಿ ನಡೆದಾಡಲು ಕಷ್ಟ. ಆದುದರಿಂದ ಪಾಳು ಬಿದ್ದ ಬಿಎಸ್‌ಎನ್‌ಎಲ್ ಸ್ಥಳದಲ್ಲಿ 200 ಸೆಂಟ್ಸ್ ಸ್ಥಳವನ್ನು ಪಾರ್ಕಿಂಗ್ ಸ್ಥಳ ಮಾಡಲು ಮಂಗಳೂರು ಮಹಾನಗರ ಪಾಲಿಕೆಗೆ ನೀಡಬೇಕು. ಇದರಿಂದ ಪಾಲಿಕೆಯು ಪಾರ್ಕಿಂಗ್ ಫೀ ಸಂಗ್ರಹಿಸಿ, ತೋಟಗಾರಿಕೆ ಇಲಾಖೆಗೆ ಆರ್ಥಿಕ ಸಂಚಯವೂ ಆಗಲಿದೆ.
ದಕ್ಷಿಣ ಕನ್ನಡ ಪ್ರಾದೇಶಿಕ ಸಾರಿಗೆ ಕಚೇರಿಯ ತಪಾಸಣಾ ಯಾರ್ಡ್ ಗಾಗಿ 50 ಸೆಂಟ್ಸ್ ಸ್ಥಳವನ್ನು ರಾಜ್ಯ ಸರಕಾರವು ಕೆಪಿಟಿ ಹತ್ತಿರ ನೀಡಿದೆ. ತಪಾಸಣೆಗಾಗಿ ಬರುವ ಬಸ್ಸು ಲಾರಿಗಳ ಹಾಗೂ ಇತರ ವಾಹನಗಳನ್ನು ತಪಾಸಣೆ ಮಾಡಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಅವರ ಸಿಬ್ಬಂದಿ ದೂರದ ಹಂಪನಕಟ್ಟೆಯಿಂದ ಇಲ್ಲಿಗೆ ಬರಬೇಕಾಗುತ್ತದೆ. ಇದರಿಂದಾಗಿ ಪ್ರತಿದಿನ ಹಣ, ಶ್ರಮ ಹಾಗೂ ಸಮಯವು ವ್ಯರ್ಥವಾಗುತ್ತದೆ. ಇದನ್ನು ತಪ್ಪಿಸಲು 25 ವರ್ಷದ ಹಳೆಯ ಬಿಎಸ್‌ಎನ್‌ಎಲ್ ಕಟ್ಟಡವನ್ನು ನ್ಯಾಯೋಚಿತ ಬೆಲೆಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ನೀಡಬಹುದು. ಆಗ ತಪಾಸಣೆಗಾಗಿ ಕೆಪಿಟಿ ತಪಾಸಣಾ ಯಾರ್ಡಿಗೆ ಹೋಗಲು ಬಹಳ ಹತ್ತಿರವಾಗುತ್ತದೆ. ಈಗಿರುವ ಆರ್‌ಟಿಒ ಕಚೇರಿಯನ್ನು ಇತರ ಸರಕಾರಿ ಉದ್ದೇಶಗಳಿಗೆ ಬಳಸಬಹುದು. ಈಗ ದಿನನಿತ್ಯ ಸಾವಿರಾರು ಜನರು ಈಗಿನ ಮಂಗಳೂರು ಹೃದಯ ಭಾಗದಲ್ಲಿರುವ ಆರ್‌ಟಿಒ ಕಚೇರಿಗೆ ಬರುವಾಗ ಆಗುವ ಟ್ರಾಫಿಕ್ ಜಾಮನ್ನೂ ತಪ್ಪಿಸಬಹುದಾಗಿದೆ.
ಈ ಎರಡು ಸದುದ್ದೇಶಗಳು ನಡೆಯುವಂತೆ; ಬಿಎಸ್‌ಎನ್‌ಎಲ್ ತಮ್ಮ ಎರಡು ಎಕರೆ ಸ್ಥಳವನ್ನು, ಪಾಲಿಕೆ ಮತ್ತು ಜಿಲ್ಲಾಡಳಿತಕ್ಕೆ, ನ್ಯಾಯಯುತ ಹಾಗೂ ನಿಯಮದಂತೆ ವಾಪಸ್ ಮಾಡಬೇಕು.

Similar News