ನೋಟು ಅಮಾನ್ಯೀಕರಣದಿಂದ ’ಮಿಶ್ರ ಫಲ’: ನೀತಿ ಆಯೋಗದ ಮಾಜಿ ಉಪಾಧ್ಯಕ್ಷ

Update: 2023-01-03 02:04 GMT

ಹೊಸದಿಲ್ಲಿ: ಕೇಂದ್ರ ಸರ್ಕಾರ 2016ರಲ್ಲಿ ದಿಢೀರನೇ ಘೋಷಿಸಿದ ನೋಟು ಅಮಾನ್ಯೀಕರಣ ಕ್ರಮ, "ಮಿಶ್ರ ಫಲ" ನೀಡಿದೆ ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂಕೋರ್ಟ್, ಕೇಂದ್ರದ ನಿರ್ಧಾರವನ್ನು 4-1 ತೀರ್ಪಿನ ಮೂಲಕ ಸಮರ್ಥಿಸಿಕೊಂಡಿದ್ದು, ರಾತ್ರೋರಾತ್ರಿ ಹೇರಿದ ನಿಷೇಧದಿಂದ ಅದರ ಉದ್ದೇಶ ಈಡೇರಿದೆಯೇ ಎನ್ನುವುದು "ಅಪ್ರಸ್ತುತ" ಎಂದು ಹೇಳಿತ್ತು.

ನೋಟು ನಿಷೇಧ ಏನೆಲ್ಲವನ್ನು ಸಾಧಿಸಬೇಕಿತ್ತೋ ಅದೆಲ್ಲವನ್ನೂ ಸಾಧಿಸಿದೆ ಎಂದೆನಿಸುವುದಿಲ್ಲ; ಒಂದೇ ಒಂದು ಧನಾತ್ಮಕ ಅಂಶವೆಂದರೆ ಡಿಜಿಟಲೀಕರಣ ಎಂದು ಕುಮಾರ್ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟರು.

ನೋಟು ನಿಷೇಧದ ಫಲಿತಾಂಶ "ಸಮ್ಮಿಶ್ರ" ಎಂದು ಅವರು ಸ್ಪಷ್ಟಪಡಿಸಿದರು. "ನಮ್ಮ ಆರ್ಥಿಕತೆಯ ಸ್ವರೂಪದಿಂದಾಗಿ, ನಿರ್ಮಾಣ ಕ್ಷೇತ್ರ ಸೇರಿದಂತೆ ನಮ್ಮ ಆರ್ಥಿಕತೆಯ ದೊಡ್ಡ ವರ್ಗವಾದ ಅಸಂಘಟಿತ ವಲಯ ನಗದು ವಹಿವಾಟು ನಡೆಸುತ್ತಿದೆ. ಆರ್ಥಿಕತೆಯಿಂದ ನಗದು ವ್ಯವಹಾರವನ್ನು ಅಥವಾ ಕಪ್ಪು ಹಣವನ್ನು ನಿರ್ಮೂಲನೆ ಮಾಡುವ ಪ್ರಯತ್ನ ಯಶಸ್ವಿಯಾಗಿದೆ ಎಂದು ಅನಿಸುವುದಿಲ್ಲ ಎಂದು ಹೇಳಿದ್ದಾರೆ.

2016ರ ನವೆಂಬರ್ 8ರಂದು ನೋಟು ಅಮಾನ್ಯೀಕರಣ ನಿರ್ಧಾರ ಪ್ರಕಟಿಸುವ ವೇಳೆ, ಇದು ಕಪ್ಪು ಹಣವನ್ನು ಮತ್ತು ಆ ಮೂಲಕ ಭಯೋತ್ಪಾದನೆಯನ್ನು ನಿಗ್ರಹಿಸುವ ವಿಸ್ತೃತ ಯೋಜನೆಯ ಭಾಗ ಎಂದು ಬಣ್ಣಿಸಿದ್ದರು. ಆದರೆ ಆರು ವರ್ಷ ಕಳೆದರೂ, ಚಲಾವಣೆಯಲ್ಲಿರುವ ಕಳ್ಳನೋಟು ಪ್ರಮಾಣ 2016ಕ್ಕಿಂತ ಹೆಚ್ಚಾಗಿದೆ.

ಒಟ್ಟು ಕರೆನ್ಸಿ ಮೌಲ್ಯ 2016ರ ಮಾರ್ಚ್‌ನಲ್ಲಿ ಚಲಾವಣೆಯಲ್ಲಿದ್ದ ನೋಟಿನ ಮೌಲ್ಯವಾದ 16,41,571 ಕೋಟಿಯಿಂದ 2022ರ ಮಾರ್ಚ್ ಅವಧಿಯಲ್ಲಿ ಶೇಕಡ 89ರಷ್ಟು ಹೆಚ್ಚಳ ಕಂಡು 31,05,721 ಕೋಟಿಗೆ ಹೆಚ್ಚಿದೆ ಎಂದು ಹಣಕಾಸು ಸಚಿವಾಲಯ ಲೋಕಸಭೆಗೆ ತಿಳಿಸಿದೆ. ಅಂತೆಯೇ ನೋಟಿನ ಸಂಖ್ಯೆಯಲ್ಲೂ ಶೇಕಡ 44ರಷ್ಟು ಹೆಚ್ಚಳವಾಗಿದ್ದು, 2022ರ ಮಾರ್ಚ್‌ನಲ್ಲಿ 1,30,533 ದಶಲಕ್ಷಕ್ಕೆ ಏರಿದೆ. ಇದೇ ವೇಳೆ ಡಿಜಿಟಲ್ ಪಾವತಿಯ ಮೌಲ್ಯ 6952 ಕೋಟಿಯಿಂದ 12 ಲಕ್ಷ ಕೋಟಿಗೆ ಹೆಚ್ಚಿದೆ.

Similar News