ಬಸ್ಸು ಸಂಪರ್ಕ ವ್ಯವಸ್ಥೆ ಕಲ್ಪಿಸಲು ಆಗ್ರಹ: ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2023-01-03 13:50 GMT

ಪುತ್ತೂರು: ತಾಲೂಕಿನ ಗ್ರಾಮೀಣ ಪ್ರದೇಶವಾದ ರೆಂಜ ಮಾರ್ಗವಾಗಿ ಸುಳ್ಯ ಪದವಿಗೆ ಬಸ್ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಪುತ್ತೂರು ತಾಲೂಕು ಆಡಳಿತ ಸೌಧ ಮತ್ತು ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. 

ಪುತ್ತೂರು ನಗರದಿಂದ ರೆಂಜ ಮಾರ್ಗವಾಗಿ ಸುಳ್ಯಪದವಿಗೆ ಈ ಹಿಂದೆ ಬಸ್ ಸಂಪರ್ಕ ವ್ಯವಸ್ಥೆ ಇದ್ದು, ಸೇತುವೆ ನಿರ್ಮಾಣದ ಕಾರಣಕ್ಕೆ ಸ್ಥಗಿತಗೊಂಡಿತ್ತು, ಸೇತುವೆ ನಿರ್ಮಾಣದ ಕಾರ್ಯ ಪೂರ್ಣಗೊಂಡು ಸಂಪರ್ಕ ರಸ್ತೆ ಸುಸ್ಥಿತಿಗೆ ಬಂದ ಬಳಿಕ ಬಸ್ ಸಂಪರ್ಕ ಮರು ಆರಂಭಿಸದೆ ವಿದ್ಯಾರ್ಥಿಗಳನ್ನು ಸತಾಯಿಸುತ್ತಿದ್ದಾರೆ. ಬಸ್ ಇಲ್ಲದ ಹಿನ್ನಲೆಯಲ್ಲಿ ಸುಳ್ಯ ಪದವಿನಿಂದ ಬರುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ನಮಗೆ ಸಂಜೆ ಗಂ 4.15 ಕ್ಕೆ ಪತ್ತೂರಿನಿಂದ ಇದ್ದ ಹಾಗೂ ಬೆಳಿಗ್ಗೆ ಸುಳ್ಯಪದವಿನಿಂದ 8.00 ಗಂಟೆಗೆ ಇದ್ದ ಬಸ್ ಸಂಪರ್ಕ ವ್ಯವಸ್ಥೆಯನ್ನು ಮರು ಆರಂಭಿಸುವಂತೆ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಕೆಸ್ಸಾರ್ಟಿಸಿ ಕಚೇರಿ ಬಳಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಬಳಿಗೆ ಬಂದ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರು ವಿದ್ಯಾರ್ಥಿಗಳ ಬೇಡಿಕೆಯನ್ನು ಆಲಿಸಿದರು.  ಸಿಬ್ಬಂದಿಗಳ ಕೊರತೆಯಿಂದಾಗಿ ಸದ್ಯದ ಮಟ್ಟಿಗೆ ಸಮಸ್ಯೆಯಾಗಿದೆ. ಆದರೂ ನಾಳೆಯಿಂದಲೇ ಬೆಳಗ್ಗಿನ ಟ್ರಿಪ್‍ಗೆ ಅವಕಾಶ ಮಾಡಿ ಕೊಡುತ್ತೇನೆ. ಸಂಜೆಯ ಟ್ರಿಪ್ ಗೆ 2 ದಿನ ಬಿಟ್ಟು ರೂಟ್ ಸರ್ವೆ ಮಾಡಿ ಬಳಿಕ ಟ್ರಿಪ್ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳು ನಮಗೆ ಸಂಜೆಯೂ ಬಸ್ ಬೇಕೇ ಬೇಕೆಂದು ಪಟ್ಟು ಹಿಡಿದರೂ. ಈ ವೇಳೆ ನಾನು ಸರ್ವೆ ಮಾಡಿ ನೋಡುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.

ಪ್ರತಿಭಟನೆಯಲ್ಲಿ ಮಾತನಾಡಿದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ನಾಯಕ ರಕ್ಷಿತ್ ರೈ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹರೀಶ್ಚಂದ್ರ ಸೇರಿದಂತೆ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ತಾಲೂಕು ಸೌಧದ ನಡೆದ ಪ್ರತಿಭಟನೆಲ್ಲಿ ಸಹಾಯಕ ಕಮೀಷರ್ ಅವರಿಗೆ ಮನವಿ ನೀಡಲಾಯಿತು. 

Similar News