ಸಮುದಾಯದೆಡೆಗೆ ಈ ನಿರ್ಲಕ್ಷ ತರವೇ?

Update: 2023-01-04 06:34 GMT

ಸಾಮಾಜಿಕ ಅಸಮಾನತೆಗೆ ಕಾರಣವಾಗಿದ್ದ ಅನಕ್ಷರತೆ, ಬಡತನ ಮತ್ತು ಅಸ್ಪಶ್ಯತೆ ಎಂಬ ಪದಗಳು ಈಗ ಸವಕಲು ನಾಣ್ಯಗಳಾಗಿವೆ. ಈ ಮೂರು ಅಂಶಗಳ ವಿರುದ್ಧ ತೀವ್ರವಾಗಿ ಸೆಣಸಾಡಿ ಗೆಲುವು ಪಡೆದವರು ನಮ್ಮೆದುರು ಇದ್ದಾರೆ. ಮಾತ್ರವಲ್ಲ ಇಂದಿಗೂ ಸೆಣಸಾಡುತ್ತಲೇ ಇರುವವರು ಕೂಡಾ. ಆದರೆ, ಸಹ್ಯ ಬದುಕಿಗೆ ಅಡ್ಡಿಯಾಗಿದ್ದ ಈ ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸಿನ ಹಾದಿಯಲ್ಲಿ ನಿಂತವರು ತಾವು ಬೆಳೆದು ಬಂದ ಸಮಾಜವನ್ನು ಒಮ್ಮೆ ಹಿಂದಿರುಗಿ ನೋಡದೆ ಅಥವಾ ಮುಂದಿನ ತಲೆಮಾರಿಗೆ ಇಂತಹ ಸವಾಲುಗಳನ್ನು ಭೇದಿಸುವ ಪಟ್ಟುಗಳನ್ನು ತೋರಿಸಿಕೊಡುತ್ತಾ ಜೊತೆ ಜೊತೆಯಾಗಿ ಕರೆದೊಯ್ಯಬೇಕಾದವರು ಸ್ವಾರ್ಥ ಮತ್ತು ಇತರರ ಬಗ್ಗೆ ಉಡಾಫೆ ಧೋರಣೆ ತೋರಿದ ಮತ್ತು ತೋರುತ್ತಿರುವ ಘಟನಾವಳಿಗಳು ಚಿಂತನೆಗೀಡು ಮಾಡುತ್ತಿವೆ.

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಬಂದ ದಲಿತ ಕುಟುಂಬಗಳ ಅಭ್ಯರ್ಥಿಗಳು ತೀವ್ರ ಆರ್ಥಿಕ ತೊಂದರೆಯಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿಕೊಂಡು ಸಣ್ಣ ಪುಟ್ಟ ನೌಕರಿಗಳ ಮೊರೆ ಹೋಗಿ ತಮ್ಮ ಕುಟುಂಬವನ್ನು ಸಲಹುತ್ತಿರುವುದು ಒಂದೆಡೆಯಾದರೆ, ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯ, ಶುಲ್ಕ ರಿಯಾಯಿತಿ ಮುಂತಾದ ರೂಪದಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆದುಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಿದ ಐಎಎಸ್, ಐಪಿಎಸ್, ಕೆಎಎಸ್, ಐಎಫ್‌ಎಸ್ ಮುಂತಾದ ಅಧಿಕಾರಿಗಳಿಂದ ಪ್ರತ್ಯುಪಕಾರವನ್ನು ದಲಿತ ಸಮಾಜ ಬಯಸಿತ್ತು. ಬಯಸುತ್ತಿದೆ ಕೂಡಾ. 

ಬಾಲ್ಯದಲ್ಲಿ ಜೀತಗಾರಿಕೆಯಿಂದಲೋ, ಕೂಲಿ ನಾಲಿಯೋ ಮಾಡಿ ಕಡು ಕಷ್ಟಗಳನ್ನು ಅನುಭವಿಸಿ ತಮ್ಮ ಮಕ್ಕಳ ಭವಿಷ್ಯ ಸುಂದರಗೊಳ್ಳಲು ಶ್ರಮಿಸಿದ ತಂದೆ ತಾಯಿಯವರ ಕನಸುಗಳನ್ನು ನನಸು ಮಾಡುವುದರ ಜೊತೆಗೆ ಬಾಬಾ ಸಾಹೇಬರ ಆಶಯದಂತೆ ತನ್ನ ಸಮಾಜದ ಏಳಿಗೆಗೆ ಕೈ ಜೋಡಿಸಬೇಕಾದವರು ಮುಂದೆ ತಾವಾಯಿತು ತಮ್ಮ ಪಾಡಾಯಿತು ಎಂಬಂತೆ ಉಳಿದದ್ದು ನಿಜಕ್ಕೂ ವಿಷಾದಪಡುವಂತಹ ಸಂಗತಿಯೇ. ಜಾತಿ ವ್ಯವಸ್ಥೆಯನ್ನು ಮೈತುಂಬಾ ಹೊದ್ದಿರುವ ಗ್ರಾಮಾಂತರ ಪ್ರದೇಶಗಳಿಗೆ ಗುಡ್‌ಬೈ ಹೇಳಿ ನಗರ ಪ್ರದೇಶಗಳಿಗೆ ವಿದ್ಯೆ, ಉದ್ಯೋಗ ಅರಸಿ ಬಂದ ದಲಿತ ಸಮುದಾಯದ ಅಭ್ಯರ್ಥಿಗಳಿಗೆ ಕೇವಲ ಉಳಿದುಕೊಳ್ಳಲು ಜಾತಿಯ ಕಾರಣಕ್ಕೆ ಬಾಡಿಗೆ ಮನೆಯೊಂದು ಕೂಡಾ ಸಿಗದೆ ಪಡಿಪಾಟಲು ಪಟ್ಟ ದಿನಗಳಲ್ಲಿ ನೆಂಟರಿಷ್ಟರ ಮನೆಯಲ್ಲೋ, ಗೆಳೆಯರ ಜೊತೆಗೂಡಿಯೋ, ಪಿ.ಜಿ.ಗಳಲ್ಲೋ ಸುಳ್ಳು ಜಾತಿಗಳನ್ನು ಹೇಳಿಕೊಂಡೋ ರೂಂಗಳನ್ನು ಪಡೆದು ಕಷ್ಟಪಟ್ಟು ವಿದ್ಯೆ ಕಲಿತು ಭವಿಷ್ಯವನ್ನು ರೂಪಿಸಿಕೊಂಡದ್ದನ್ನು ಮರೆಯುವಂತಿಲ್ಲ. 

ನಗರ ಪ್ರದೇಶಗಳಲ್ಲಿ ಶಿಕ್ಷಣದ ಮಹತ್ವವನ್ನು ಅರ್ಥೈಸಿಕೊಂಡು ವಿದ್ಯಾಕಾಂಕ್ಷಿಗಳಾದ ಕೆಲವರು ಎಷ್ಟೋ ವೇಳೆ ತೀವ್ರ ಆರ್ಥಿಕ ತೊಂದರೆಯನ್ನು ಅನುಭವಿಸಿ ಹಗಲಿನ ವೇಳೆ ದುಡಿಮೆ, ನಂತರ ಸಂಜೆ ಕಾಲೇಜುಗಳಲ್ಲಿ ಅಭ್ಯಾಸ ಮಾಡಿಕೊಂಡು ಮತ್ತೂ ಕೆಲವು ಸಂದರ್ಭಗಳಲ್ಲಿ ದೂರ ಶಿಕ್ಷಣ (ಕರೆಸ್ಪಾಂಡೆನ್ಸ್) ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳನ್ನೆದುರಿಸಿ ಸಮಾಜದಲ್ಲಿ ತುಸು ಆತ್ಮವಿಶ್ವಾಸದಿಂದ ಬದುಕನ್ನು ಕಟ್ಟಿಕೊಂಡಿದ್ದು ಅವಿಸ್ಮರಣೀಯ ಸಂಗತಿಯೇ ಸರಿ. ಹೀಗೆ, ಕಠೋರ ಜಾತಿ ವ್ಯವಸ್ಥೆಯ ನಡುವೆಯೇ ಸಂಘರ್ಷ ಮಾಡುತ್ತಾ ಬದುಕನ್ನು ಕಟ್ಟಿಕೊಂಡವರು ಮುಂದೆ ಪ್ರೇಮ ವಿವಾಹವೋ, ಅಂತರ್‌ಜಾತಿಯ ವಿವಾಹವೋ ಅಥವಾ ತಂದೆ-ತಾಯಿ ಒಪ್ಪಿತ ವ್ಯವಸ್ಥೆಯೋ ಅಂತೂ ವಿವಾಹ ಬಂಧನವನ್ನೇರ್ಪಡಿಸಿಕೊಂಡ ತರುವಾಯ ತಮ್ಮ ಕೌಟುಂಬಿಕ ತಾಪತ್ರಯಗಳಲ್ಲೇ ಕಳೆದುಹೋಗುತ್ತಾ ವಿದ್ಯಾಭ್ಯಾಸದ ಹಂತದಲ್ಲಿ, ನಂತರ ಉದ್ಯೋಗದ ಬೇಟೆಯ ಸಮಯದಲ್ಲಿ ಇರಿಸಿಕೊಂಡಿದ್ದ ಸಮುದಾಯದ ಬಗೆಗಿನ ತಮ್ಮ ಕಾಳಜಿ ಮತ್ತು ಇಚ್ಛಾಸಕ್ತಿಗಳೆಲ್ಲವನ್ನು ಮರೆತು ತಮ್ಮ ಮಕ್ಕಳ ಮತ್ತು ತಮ್ಮ ಐಷಾರಾಮಿ ಸ್ವಾರ್ಥ ಬದುಕಿನ ಜೊತೆ ರಾಜಿಯಾಗುವುದು ನ್ಯಾಯೋಚಿತವೇ? ಎಂಬ ಪ್ರಶ್ನೆ ನಮ್ಮೆದುರು ನಿಂತಿದೆ. ಇದು ವಿವಾಹ ಸಂಬಂಧಕ್ಕೀಡಾದಾಗ ಮಾತ್ರವಲ್ಲ, ಒಳ್ಳೆಯ ನೌಕರಿ ಸಿಗುವವರೆಗೂ ಇದ್ದ ಸಮುದಾಯದ ಬಗೆಗಿನ ಕಳಕಳಿ ದಿನ ಕಳೆದಂತೆ ಮರೆಯಾಗಲು ಕಾರಣವೇನು? ಎಂದು ಸಂಶೋಧಿಸಬೇಕಾಗಿದೆ. 

ಉತ್ತಮ ನೌಕರಿ ಸಿಕ್ಕಿ ತನ್ನ ಕಾಲ ಮೇಲೆ ತಾನು ನಿಂತೆ ಎಂಬ ಭರವಸೆ ಮೂಡಿದ ನಂತರ ತಮ್ಮ ದುಡಿಮೆಯಲ್ಲಿ ಭಾಗಶಃ ಒಂದಷ್ಟು ಹಣವನ್ನು ತಾನು ಪ್ರತಿನಿಧಿಸಿರುವ ಸಮುದಾಯದ ಗ್ರಾಮಾಂತರ ಪ್ರದೇಶದ ಅಥವಾ ತಮ್ಮ ಕುಟುಂಬದ ಇನ್ನಿತರ ಕಡು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲತೆಗೆ ನೆರವಾದರೆ ಆ ಸಮಾಜ ಋಣಿಯಾಗಿರುವುದು ಸತ್ಯವೇ. ಮಾತ್ರವಲ್ಲ, ತಾನು ಅನುಕೂಲಸ್ಥ ಎನಿಸಿಕೊಂಡ ನಂತರ ಕಡು ಬಡತನದ ಕುಟುಂಬದ ಓರ್ವ ಹೆಣ್ಣು ಮಗಳನ್ನು ವಿವಾಹವಾದರೆ ಕನಿಷ್ಠ ಪಕ್ಷ ಒಂದು ಕುಟುಂಬಕ್ಕೆ ಆಸರೆಯಾದಂತಾಗುವುದು. ಆದರೆ, ಮತ್ತೆ ಅಲ್ಲಿ ತಮ್ಮ ಸರಿ ಸಮಾನರಾದ ಇಲ್ಲವೇ ವಿವಾಹವಾಗಬಯಸುವ ಹೆಣ್ಣು ಕೂಡಾ ಉದ್ಯೋಗಸ್ಥೆಯಾಗಿರಬೇಕೆಂದು ಬಯಸುವ ವ್ಯವಸ್ಥೆ ನಮ್ಮ ನಡುವೆ ಇರುವುದು ವಾಸ್ತವ. ಪರಿಸ್ಥಿತಿ ನಮ್ಮಿಳಗೇ ಸುಧಾರಣೆಗೊಳ್ಳಲು ಅವಕಾಶವಿದ್ದಾಗ್ಯೂ ಆ ಬಗ್ಗೆ ಚಿಂತಿಸುವವರ ಸಂಖ್ಯೆ ಬೆರಳೆಣಿಕೆಯಷ್ಟೆ. 

ಉಪದೇಶವನ್ನು ಧಾರಾಳವಾಗಿ ನೀಡಲು ಮುಂದಾಗುವ ಮಂದಿ ತಮ್ಮ ಬದುಕಿನಲ್ಲೂ ಕೆಲವು ಸಣ್ಣ ಪುಟ್ಟ ಸಂಗತಿಗಳ ಕಡೆಯೂ ಲಕ್ಷವಹಿಸಿದರೆ ಒಂದಷ್ಟು ಪರಿವರ್ತನೆಯನ್ನು ಕಾಣಬಹುದೇನೋ? ಆದರೆ, ಸುಳ್ಳು ಜಾತಿಗಳನ್ನು ಹೇಳಿಕೊಂಡು ಮೇಲ್ವರ್ಗವನ್ನು ಪ್ರತಿನಿಧಿಸುವ ಬಡಾವಣೆ ಮತ್ತು ಅಪಾರ್ಟ್‌ಮೆಂಟ್‌ಗಳತ್ತ ವಲಸೆ ಹೋಗುವ ಜಾಣರು (?) ಸಮುದಾಯವನ್ನು ಪ್ರೀತಿಸುವುದಿರಲಿ, ಕಣ್ಣೆತ್ತಿಯೂ ನೋಡದಂತಾದರೆ ಆ ಉಪದೇಶಗಳಿಗೆ ಬೆಲೆ ಎಲ್ಲಿಯದು? ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಬಹಳಷ್ಟು ದಲಿತ ಸಮುದಾಯದ ಅಧಿಕಾರಿಗಳು ಅಥವಾ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ಸಮಾಜ ಪರಿವರ್ತನೆಯ ಗಣ್ಯ ಮಾನ್ಯರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಭರ್ಜರಿ ಭಾಷಣಗಳನ್ನು ಬಿಗಿದು ಚಪ್ಪಾಳೆ ಗಿಟ್ಟಿಸುವುದರಲ್ಲಿ ಎತ್ತಿದ ಕೈ. 

ಆದರೆ, ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡುವ ವಿವೇಚನಾ ಅವಕಾಶ ತಮಗೆ ಬಂದಾಗ ಮಾತ್ರ ನೈತಿಕತೆ ಹಾಗೂ ಬದ್ಧತೆಯನ್ನು ಬದಿಗಿರಿಸಿ ನಿಯಮ/ನಿಬಂಧನೆಗಳನ್ನು, ಕಾನೂನು ಕಟ್ಟಳೆಗಳನ್ನು ಮುಂದು ಮಾಡಿ, ಕೆಲವೊಮ್ಮೆ ವೈಯಕ್ತಿಕ ತಾಪತ್ರಯಗಳ ಕತೆ ಹೇಳಿ ತಪ್ಪಿಸಿಕೊಳ್ಳುವ ಜಾಯಮಾನವುಳ್ಳವರ ವರ್ತನೆ ಹಾಸ್ಯಾಸ್ಪದವಾಗುವುದರ ಬಗ್ಗೆ ಸಂಬಂಧಿಸಿದವರಿಗೆ ಅರಿವಾಗದಿರುವುದು ದುರಂತವಲ್ಲವೇ? ಜೊತೆಗೆ ತಮ್ಮದೇ ಸಮುದಾಯದ ಇನ್ನಿತರ ಅಧಿಕಾರಿಗಳು/ರಾಜಕಾರಣಿಗಳು ಮತ್ತು ಸಂಘ ಸಂಸ್ಥೆಗಳ ಮುಖಂಡರನ್ನು ವಾಚಾಮಗೋಚರವಾಗಿ ನಿಂದಿಸುತ್ತಾ, ವಿಕೃತ ಆನಂದ ಪಡೆಯುವ ಕೆಲವು ವ್ಯಕ್ತಿಗಳು ಬೇರೆಯವರಿಗೆ ಉಪದೇಶ ಮಾಡುವುದರಲ್ಲಿ ಮಾತ್ರ ನಿಸ್ಸೀಮರೆಂಬುದನ್ನು ಕಂಡಾಗ ವಿಷಾದವಾಗುತ್ತದೆ. ತಾನು ಕಳ್ಳ ಪರರ ನಂಬ ಎಂಬ ಗಾದೆ ಮಾತಿನಂತೆ ನಡೆದುಕೊಳ್ಳುವವರು ತಮ್ಮ ಕೈಲಾದ ನೆರವು ನೀಡುವುದರಲ್ಲಿ ಹಿಂದೆ ಮುಂದೆ ನೋಡುವ ಮಂದಿ, ಇನ್ನಿತರರನ್ನು ಗುರಿಯಾಗಿಸಿ ಟೀಕೆ ಮಾಡುವುದರಲ್ಲಿ ತೋರುವ ಆಸಕ್ತಿಯನ್ನು ಏನೆಂದು ಕರೆಯಬೇಕು? ಪ್ರತೀ ದಿನ ವಾರ್ತಾ ಪತ್ರಿಕೆಗಳು, ವಿದ್ಯುನ್ಮಾನಗಳ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ದಲಿತರ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳ ಸುದ್ದಿಗಳನ್ನು ಗಮನಿಸುವ ಅನೇಕ ಮಂದಿ ಅಯ್ಯೋ ಪಾಪ! ಎಂದು ಉದ್ಗಾರ ತೆಗೆಯುವಷ್ಟಕ್ಕೆ ಸೀಮಿತವಾಗುವವರು ಒಂದೆಡೆಯಾದರೆ, ಸದರಿ ಸುದ್ದಿಯನ್ನು ನೂರಾರು ಜನರಿಗೆ ಹಂಚಿ ಸಮಾಧಾನ ಪಟ್ಟುಕೊಳ್ಳುವ ಮಂದಿಯೂ ಮತ್ತೊಂದೆಡೆ. 

ಆದರೆ, ಮುಂದೇನು ಪರಿಹಾರ? ನನ್ನಿಂದ ಏನಾದರೂ ಸಹಾಯ ಮಾಡಲಾದೀತೇ? ಎಂಬ ಬಗ್ಗೆ ಮಾತ್ರ ಮೌನ ಮತ್ತು ನಿರ್ಲಕ್ಷ್ಯತನ ಮುಂದುವರಿದರೆ ಸಮಸ್ಯೆಗಳಿಗೆ ಮುಕ್ತಿ ದೊರೆಯುವುದೆಂತು? ದೌರ್ಜನ್ಯ ದಬ್ಬಾಳಿಕೆಯಿಂದ ನೊಂದವರಿಗೆ ಆಸರೆ, ನೆರವು ದೊರಕಿಸಿಕೊಡಲು ಹೆಣಗುವ ಹೋರಾಟಗಾರರನ್ನು ದಿನದ ಇಪ್ಪತ್ತನಾಲ್ಕು ಗಂಟೆಯೂ ಹೋರಾಟ ಮಾಡುತ್ತಲೇ ಇರಬೇಕೆಂದು ಬಯಸುವವರು ಆ ಹೋರಾಟಗಾರರ ದೈನಂದಿನ ಬದುಕನ್ನು, ಅವರ ಆರೋಗ್ಯ, ಕುಟುಂಬ, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿ ವಿಚಾರಗಳ ಬಗ್ಗೆ ಅರ್ಥೈಸಿಕೊಳ್ಳದೆ ಏಕಪಕ್ಷೀಯವಾಗಿ ದೂರುವುದನ್ನು ಕಂಡಾಗ ವಿಷಾದವಾಗುತ್ತದೆ. ಒಟ್ಟಾರೆ, ದಲಿತ ಸಮಾಜದ ಸುಶಿಕ್ಷಿತರು, ಉನ್ನತ ಅಧಿಕಾರಿ ವರ್ಗದವರು, ಪ್ರಜ್ಞಾವಂತರು ತಾವು ಹುಟ್ಟಿ ಬಂದ ಸಮುದಾಯದೆಡೆಗೆ ಅದರಲ್ಲೂ ಕಡು ಬಡತನದಿಂದ ನೆರವಿಗಾಗಿ ಹಂಬಲಿಸುವವರತ್ತ ನೆರವಿನ ಹಸ್ತ ಚಾಚುತ್ತಾ, ಸಮಾಜದೊಟ್ಟಿಗೆ ಬಾಂಧವ್ಯವಿರಿಸಿಕೊಂಡು ಮುನ್ನಡೆದರೆ, ಜಾತಿ ವ್ಯವಸ್ಥೆಯಿಂದ ನಲುಗಿ ಕೀಳರಿಮೆಯಿಂದ ಬದುಕು ಕಟ್ಟಿಕೊಂಡವರಲ್ಲಿ ಒಂದಷ್ಟು ಆತ್ಮಸ್ಥೈರ್ಯವನ್ನು ಮೂಡಿಸಲು ನೆರವಾದೀತು. ಭವಿಷ್ಯತ್ತಿನ ದಲಿತ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢಗೊಳ್ಳಲು ಇಂತಹ ಸಂಗತಿಗಳು ನೆರವಾಗಬಹುದಲ್ಲವೇ?

Similar News