ಸುಳ್ಯ ಜಾತ್ರೆಯ ಸಂತೆ ವ್ಯಾಪಾರ ಹಿಂದೂಗಳಿಗೆ ಮಾತ್ರ ಅವಕಾಶ: ದೇವಸ್ಥಾನದಲ್ಲಿ ನಡೆದ ತುರ್ತು ಸಭೆಯಲ್ಲಿ ನಿರ್ಧಾರ

ಹಿಂದುತ್ವ ಸಂಘಟನೆಗಳ ಆಕ್ಷೇಪದ ಬಳಿಕ ಸಂತೆ ವ್ಯಾಪಾರದಲ್ಲಿ ಮುಕ್ತ ಅವಕಾಶದ ನಿರ್ಧಾರದಿಂದ ಹಿಂದೆ ಸರಿದ ಸಮಿತಿ

Update: 2023-01-04 16:42 GMT

ಸುಳ್ಯ: ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ಸಂತೆ ವ್ಯಾಪಾರ ನಡೆಸಲು ಹಿಂದುಗಳಿಗೆ ಮಾತ್ರ ಅವಕಾಶ ನೀಡಲು ದೇವಸ್ಥಾನದಲ್ಲಿ ಇಂದು ಸಂಜೆ ನಡೆದ ಜೀರ್ಣೋದ್ಧಾರ ಮತ್ತು ಪ್ರಮುಖರ ತುರ್ತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ದೇವಸ್ಥಾನದ ವತಿಯಿಂದ ಸಂತೆ ವ್ಯಾಪಾರ ನಡೆಸಲು ಏಲಂ ಮಾಡುವ ಸ್ಥಳದಲ್ಲಿ ಹಿಂದುಯೇತರರಿಗೆ ಅವಕಾಶ ನೀಡುವುದಿಲ್ಲ, ಸಂತೆಯಲ್ಲಿ ವ್ಯಾಪಾರ ನಡೆಸಲು ಹಿಂದುಗಳಿಗೆ ಮಾತ್ರ ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಸಂತೆಯಲ್ಲಿ ಈ ಹಿಂದಿನಂತೆ ಮುಕ್ತ ಅವಕಾಶ ನೀಡಲು ಈ ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಂತೆ ವ್ಯಾಪಾರಕ್ಕೆ ಎಲ್ಲರಿಗೂ ಮುಕ್ತ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಹಿಂದುತ್ವ ಸಂಘಟನೆಗಳು ಸುಳ್ಯ ತಾಲೂಕು ಹಿಂದೂ ಹಿತ ರಕ್ಷಣಾ ವೇದಿಕೆಯನ್ನು ರಚಿಸಿ ದೇವಸ್ಥಾನಕ್ಕೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಿಗೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆಗೆ ಹಾಗು ಧಾರ್ಮಿಕ ದತ್ತಿ ಇಲಾಖೆಗೆ ಮನವಿ ನೀಡಿದ್ದರು.

ಈ ಹಿನ್ನಲೆಯಲ್ಲಿ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಎಂ.ಮೀನಾಕ್ಷಿ ಗೌಡ, ಲಿಂಗಪ್ಪ ಗೌಡ ಕೇರ್ಪಳ, ಕೃಪಾಶಂಕರ ತುದಿಯಡ್ಕ, ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಹಿಂದೂ ಹಿತ ರಕ್ಷಣಾ ವೇದಿಕೆಯ ಸಂಚಾಲಕ ಚಿದಾನಂದ ವಿದ್ಯಾನಗರ, ಕೇಶವ ನಾಯಕ್ ಸುಳ್ಯ, ಸುನಿಲ್ ಕೇರ್ಪಳ,ನಿಕೇಶ್ ಉಬರಡ್ಕ, ಜಿ.ಜಿ.ನಾಯಕ್, ಗೋಪಾಲಕೃಷ್ಣ, ಲತೀಶ್ ಗುಂಡ್ಯ, ಗಿರೀಶ್ ಕಲ್ಲುಗದ್ದೆ, ರಜತ್ ಅಡ್ಕಾರ್ ಮತ್ತಿತರರು ಇದ್ದರು.

ಇದನ್ನೂ ಓದಿ: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣ: ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ

Similar News