ಪ್ರಧಾನಿ ಮೋದಿ ಮುಂದೆ ಬೊಮ್ಮಾಯಿ "ನಾಯಿಮರಿ" ಹೇಳಿಕೆ: ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ...

►"ನಳಿನ್ ಕುಮಾರ್ ಗೆ ಕಾನೂನು ಜ್ಞಾನ ಇಲ್ಲ, ಬಿಜೆಪಿಯ ಜೋಕರ್ ಇದ್ದಂತೆ" ►ಮಂಗಳೂರಿನ ಶ್ರೀ ಕುದ್ರೋಳಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಭೇಟಿ

Update: 2023-01-05 08:18 GMT

ಮಂಗಳೂರು, ಜ.4: ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರ ಸರಕಾರದ ಜೊತೆ ಮಾತನಾಡುವ ಧೈರ್ಯ ರಾಜ್ಯದ ಮುಖ್ಯಮಂತ್ರಿಗೆ ಇರಬೇಕು. ರಾಜ್ಯಕ್ಕೆ ಬರಬೇಕಾದ ಅನುದಾನ ತರಬೇಕು, ನಾಯಿಮರಿ ತರ ಇರಬಾರದೆಂದು ಹೇಳಿದ್ದೇನಷ್ಟೇ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಅವರು ನಗರದ ಶ್ರೀ ಕುದ್ರೋಳಿ ಕ್ಷೇತ್ರ ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಹಲವು ಬಾರಿ ಹುಲಿಯಾ ಅನ್ನುತ್ತಾರೆ. ಯಡಿಯೂರಪ್ಪರಪ್ಪರನ್ನು ರಾಜಾ ಹುಲಿ ಎನ್ನುತ್ತಾರೆ. ಅಂದರೆ ಯಡಿಯೂರಪ್ಪ ಹುಲಿ ಆಗುತ್ತಾರಾ? ಎಂದು ಪ್ರಶ್ನಿಸಿದರು.

ನಳಿನ್ ಕುಮಾರ್ ಕಟೀಲು ಒಬ್ಬ ಜೋಕರ್ ಇದ್ದಂತೆ: ನಳಿನ್ ಕುಮಾರ್ ಕಟೀಲು ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಕಾನೂನು ಜ್ಞಾನ ಇಲ್ಲದೆ ಮಾತನಾಡುತ್ತಾರೆ. ಆ ಕಾರಣದಿಂದ ನನ್ನನ್ನು ಜೈಲಿಗೆ ಕಳುಹಿಸಿಸುತ್ತೇನೆ ಎನ್ನುತ್ತಾರೆ. ಜೈಲಿಗೆ ಕಳುಹಿಸುವ ಕೆಲಸ ನ್ಯಾಯಾಲಯ ಮಾಡುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಈ ಬಾರಿ ನಾನು ಹೈಕಮಾಂಡ್ ಹೇಳಿದ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ಯಾವ ಕ್ಷೇತ್ರ ಎಂಬುವುದು ಇನ್ನೂ ನಿರ್ಧಾರ ಆಗಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಯು.ಟಿ. ಖಾದರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಮೊಯ್ದೀನ್ ಬಾವ, ಜೆ.ಆರ್.ಲೋಬೊ, ಐವನ್ ಡಿಸೋಜ, ವಿಜಯ ಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಇನಾಯತ್ ಅಲಿ, ಅಪ್ಪಿ, ಸಂತೋಷ್, ಕವಿತಾ ಸನಿಲ್ ಮೊದಲಾದವರು ಉಪಸ್ಥಿತರಿದ್ದರು. ಕುದ್ರೋಳಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಸ್ವಾಗತಿಸಿದರು.

Similar News