ಮತದಾರರ ಪಟ್ಟಿ ಕುರಿತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ: ಮತದಾರರ ಪಟ್ಟಿ ಸಿದ್ದ, ಇದೇ ಅಂತಿಮವಲ್ಲ; ಗಿರೀಶ್ ನಂದನ್
ಪುತ್ತೂರು: ಮತದಾರರ ಪಟ್ಟಿ ಸಿದ್ದವಾಗಿದೆ. ಆದರೆ ಇದೇ ಅಂತಿಮ ಪಟ್ಟಿಯಲ್ಲ. ಈ ತನಕ 208272 ಮಂದಿಯನ್ನು ಒಳಗೊಂಡಂತೆ ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ. ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಚುನಾವಣೆಯ ದಿನ ಘೋಷಣೆ ಮಾಡುವ ತನಕವೂ ಅವಕಾಶಗಳಿವೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ತಿಳಿಸಿದರು.
ವಿಧಾನಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಕುರಿತಂತೆ ತಾಲೂಕು ಕಚೇರಿಯಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಸಭೆ ನಡೆಸಿ ಮಾಹಿತಿ ನೀಡಿದರು.
ಈ ತನಕ ಒಟ್ಟು 2,08,272 ಮಂದಿ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಅಂತಿಮಗೊಂಡಿದೆ. ಈ ಪೈಕಿ 1,02,909 ಪುರುಷ ಹಾಗೂ 1,05,363 ಮಹಿಳಾ ಮತದಾರರು ಒಳಗೊಂಡಿದ್ದಾರೆ. ಈ ಬಾರಿ 3,080 ಮಂದಿ ಮತದಾರರ ಹೆಸರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ವಲಸೆ ಹೋದವರು ಹಾಗೂ ಮೃತಪಟ್ಟವರು ಸೇರಿದಂತೆ ಒಟ್ಟು 1,911 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.
ಒಟ್ಟು ಮತದಾರರ ಪೈಕಿ 1,998 ಮಂದಿ ವಿಶೇಷ ಚೇತನರು, 24 ಅನಿವಾಸಿ ಭಾರತೀಯರು (ಎನ್‍ಆರ್‍ಐ) 657 ವಿಐಪಿ, 96 ಸೈನಿಕರನ್ನು ಪಟ್ಟಿಯಲ್ಲಿ ಗುರುತಿಸಲಾಗಿದೆ.
ಶೇ. 86.1 ಆಧಾರ್ ಲಿಂಕ್ ಪೂರ್ಣ
ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ಜೊತೆ ಜೋಡಣೆ ಮಾಡುವ ಆಧಾರ್ ಲಿಂಕ್ ಪ್ರಕ್ರಿಯೆ ನಡೆಯುತ್ತಿದ್ದು, ಒಟ್ಟು ಮತದಾರರ ಪೈಕಿ ಈಗಾಗಲೇ ಶೇ. 86.1 ಮಂದಿಯ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಜತೆ ಲಿಂಕ್ ಮಾಡಿದ್ದಾರೆ. 176769 ಮಂದಿಯ ಆಧಾರ್ ಕಾರ್ಡ್ ಲಿಂಕ್ ಆಗಿದೆ. ಈ ತನಕದ ಅಂಕಿ ಅಂಶ ಪ್ರಕಾರ ಮತದಾರರ ಗುರುತಿನ ಚೀಟಿ-ಆಧಾರ್ ಕಾರ್ಡ್ ಲಿಂಕ್‍ನಲ್ಲಿ ದ.ಕ.ಜಿಲ್ಲೆಯಲ್ಲಿ ಪುತ್ತೂರು ಅಗ್ರ ಸ್ಥಾನದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಿಸರ್ಗಪ್ರಿಯ, ಚುನಾವಣಾ ಶಾಖೆಯ ಉಪ ತಹಸೀಲ್ದಾರ್ ಸುಲೋಚನಾ ಉಪಸ್ಥಿತರಿದ್ದರು.
ವಿವಿಧ ಪಕ್ಷಗಳ ಮುಖಂಡರಾದ ಬಿಜೆಪಿ ಗ್ರಾಮಾಂತರ ಮಂಡಲ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ನಗರ ಮಂಡಲ ಸಮಿತಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಪುತ್ತೂರು ವಿಧಾನ ಸಭಾ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಬಿಜೆಪಿ ಮುಖಂಡ ಹರೀಶ್ ಬಿಜತ್ರೆ, ಕಾಂಗ್ರೆಸ್ ಮುಖಂಡ ಇಸಾಕ್ ಸಾಲ್ಮರ, ಜೆಡಿಎಸ್ ಮುಖಂಡರಾದ ಐ.ಸಿ.ಕೈಲಾಸ್, ಅಬ್ದುಲ್ ಕುಂಞ ಕೆದುವಡ್ಕ ಉಪಸ್ಥಿತರಿದ್ದರು.