ಶಾಲೆಗಳ ಕೇಸರೀಕರಣ

Update: 2023-01-06 05:50 GMT

ಶಾಲಾ ಶಿಕ್ಷಣದ ಉದ್ದೇಶ ಮಕ್ಕಳಲ್ಲಿ ವಿದ್ಯೆಯ ಕುರಿತು ಪ್ರೀತಿ, ಗೌರವವನ್ನು ಹುಟ್ಟಿಸುವುದಾಗಿದೆ. ಆದರೆ ಇಂದಿನ ಸರಕಾರ ಶಾಲೆಗಳಲ್ಲಿ ಅದ್ವಾನವನ್ನೇ ಹುಟ್ಟು ಹಾಕಲಾಗುತ್ತಿದೆ. ಸನ್ಯಾಸಿ ಸಂತರು ಕೇಸರಿ ವಸ್ತ್ರವನ್ನು ತೊಡುವುದರ ಉದ್ದೇಶ ತ್ಯಾಗದ ಸಂಕೇತವಾಗಿರುತ್ತದೆ. ಸನ್ಯಾಸಿ ಸಂತರು ಸರ್ವ ಸಂಗ ಪರಿತ್ಯಾಗಿಯಾದುದರಿಂದ ಅದು ಔಚಿತ್ಯವಾದುದು. ಆದರೆ ವಿದ್ಯಾರ್ಥಿಗಳು ವಿದ್ಯೆಯನ್ನು ಅಪ್ಪಿ ಹಿಡಿಯುವುದು ತಾನೇ? ಇಲ್ಲಿ ತ್ಯಾಗದ ಸಂಕೇತ ಮತ್ತು ಅಪ್ಪುವ ಸಂಕೇತಗಳಲ್ಲಿ ವಿರೋಧಾಭಾಸವನ್ನು ಕಾಣುವುದಿಲ್ಲವೇ?

‘ವಿವೇಕ’ ಕಾರ್ಯಕ್ರಮದಡಿಯಲ್ಲಿ ಶಾಲಾ ಕೊಠಡಿಗಳ ಗೋಡೆಗಳಿಗೆ ಕೇಸರಿ ಬಣ್ಣವನ್ನು ಹೊಡೆಯುವುದರಿಂದ ಏನನ್ನು ಸಾಧಿಸಿದಂತಾಯಿತು? ಈ ಕ್ರಮ ಸರಕಾರಿಯೇತರ ಶಾಲೆಗಳಿಗೂ ಅನ್ವಯವಾಗುತ್ತದೆಯೇ? ಇಂದು ನಮ್ಮ ಶಾಲಾ ಮಕ್ಕಳಿಗೆ ಅತೀ ಅಗತ್ಯವಾಗಿ ಬೇಕಾದುದು ಪೌಷ್ಟಿಕ ಆಹಾರ, ಆಟೋಪಕರಣಗಳು, ಉತ್ತಮ ಗ್ರಂಥಾಲಯ, ವಾಹನ ಸೌಕರ್ಯದ ವ್ಯವಸ್ಥೆ. ಇಂದು ಹಳ್ಳಿಗಾಡಿನ ಮಕ್ಕಳಿಗೆ ವಾಹನ ಸೌಲಭ್ಯವಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಸರಕಾರ ಈ ಮೂಲಭೂತ ಸಮಸ್ಯೆಗಳ ಕಡೆ ಗಮನಹರಿಸದೆ ಬರೇ ಗೋಡೆಗಳಿಗೆ ಬಣ್ಣ ಬಳಿಯುವುದು, ತರಗತಿಗಳಲ್ಲಿ ಧ್ಯಾನ ಮತ್ತು ಭಗವದ್ಗೀತೆ ಕಂಠಪಾಠ ಮಾಡುವಿಕೆಗಳಲ್ಲಿ ಏನು ಹುರುಳಿದೆಯೋ? ನನಗರಿಯದು.

ಇಲ್ಲಿ ಉದ್ಭವವಾಗುವ ವಿಚಾರವೆಂದರೆ ‘ಗುಣಾತ್ಮಕ ಬೋಧನೆ’. ಗುಣಾತ್ಮಕ ಬೋಧನೆಯಿಂದ ಗುಣಾತ್ಮಕ ಕಲಿಕೆ ಹುಟ್ಟುವುದು. ಗುಣಾತ್ಮಕ ಕಲಿಕೆ ಎಂದರೇನು. ಇಲ್ಲಿ ಹೇಳಲಾದ ‘ಗುಣಮಟ್ಟದ ಶಿಕ್ಷಣ’ ಮತ್ತು ‘ಗುಣಾತ್ಮಕ ಕಲಿಕೆ’ ಇವೆರಡು ಪರಸ್ಪರ ವಿರೋಧಿ ಪರಿಕಲ್ಪನೆಗಳಲ್ಲದಿದ್ದರೂ, ಒಂದು ಮತ್ತೊಂದರ ಪಡಿಯಚ್ಚಲ್ಲ. ಸರಕಾರದ ದೃಷ್ಟಿಯಿಂದ ಗುಣಮಟ್ಟದ ಶಿಕ್ಷಣ ಮುಖ್ಯವೆನಿಸಿದರೂ, ವಿದ್ಯಾರ್ಥಿಗಳ ದೃಷ್ಟಿಯಿಂದ ಗುಣಾತ್ಮಕ ಕಲಿಕೆಯೇ ಮುಖ್ಯವಾಗುವುದು.

ವಿದ್ಯಾರ್ಥಿಗಳು ವಿಷಯವನ್ನು ಅರಿಯದೇ ಇದ್ದರೆ ಕೇವಲ ಉರು ಹೊಡೆಯುವುದೊಂದೇ ದಾರಿ ತಾನೇ? ಉರು ಹೊಡೆಯುವ ಪ್ರವೃತ್ತಿಯನ್ನೇ ಪ್ರಚೋದಿಸಿದಂತಾಗಲಿಲ್ಲವೇ? ನಿಜವಾದ ಅರ್ಥದಲ್ಲಿ ಅದು ಶಿಕ್ಷಣವೆಂದಾಯಿತೇ? ಇಲ್ಲಿ ಶಿಕ್ಷಣ ಸಚಿವರ ಹಾಗೂ ಅವರ ಮಂದಿ ಮಾಗದರ ಅವಗಾಹನೆಗೆ ಮಕ್ಕಳ ಆರೋಗ್ಯ, ವಾಚನಾಲಯಗಳ ಅಭಿವೃದ್ಧಿಯಾಗದೆ, ಮುಖ್ಯವಾಗಿ ಸಾರಿಗೆ ವ್ಯವಸ್ಥೆ ಅಭಿವೃದ್ಧಿಯಾಗದೆ, ಶಿಕ್ಷಣದ ಅಭಿವೃದ್ಧಿಯಾಯಿತೆಂಬುದು ಪೊಳ್ಳುವಾದ.

ಕಲಿಕೆಯಲ್ಲಿ ವಿದ್ಯಾರ್ಥಿಗಳ ಬುದ್ಧಿ-ಭಾಷೆಗಳ ಅಂತರ ಸಂಬಂಧವನ್ನು ಅಧ್ಯಾಪಕನಾದವನು ಮೊದಲಾಗಿ ಗುರುತಿಸಬೇಕು. ಬೆಳೆಯುತ್ತಿರುವ ಮಗುವಿನ ಬುದ್ಧಿ ಮತ್ತು ಭಾಷೆಗಳ ಬೇರುಗಳು ಮೂಲತಃ ಬೇರೆ ಬೇರೆಯಾಗಿದ್ದರೂ ಕ್ರಮೇಣ ಅವು ಬೆಸೆದುಕೊಳ್ಳುವುದು. ಮಗು ಬೆಳೆಯುತ್ತಾ ಬಲಿಯುತ್ತಾ ಬಂದಂತೆ, ತನಗೆದುರಾದ ಹೊಸ ಅನುಭವ ಸಂವೇದನೆಗಳ ತುಣುಕುಗಳನ್ನು ತನಗೆ ಅರ್ಥವಾಗುವ ರೀತಿಯಲ್ಲಿ ತನ್ನ ಜ್ಞಾನಕೋಶಕ್ಕೆ ಸೇರಿಸಿ ಪುನರ‌್ರಚಿಸುವ ಪ್ರಕ್ರಿಯೆಯೇ ಕಲಿಕೆ. ಇದೊಂದು ಅನುಕ್ತವಾಗಿ ನಡೆಯುವ ಪ್ರಕ್ರಿಯಾತ್ಮಕ ಸಂಗತಿ. ತೀರಾ ವ್ಯಕ್ತಿಗತವಾದ ಈ ಪ್ರಕ್ರಿಯೆ ಕಲಿಯುವಾತನು ತನ್ನಲ್ಲಿ ಈಗಾಗಲೇ ಹುದುಗಿರುವುದನ್ನು ಹೊರಗೆಳೆದು ಅದಕ್ಕೆ ಜೀವಂತಿಕೆಯನ್ನು ತುಂಬುವ ಕಾರ್ಯವೇ ಕಲಿಕೆಯಾಗಿದೆ. ಹಾಗಿರುತ್ತಾ, ಕಲಿಕೆಗೆ ಒದಗುವ ಅತ್ಯಂತ ಪರಿಣಾಮಕಾರಿಯಾದ ಸಾಧನವೇ ಭಾಷೆ. ಬಾಹ್ಯ ಪ್ರಪಂಚವನ್ನು ಅಂತರಂಗದಲ್ಲಿ ಪ್ರತಿನಿಧೀಕರಿಸಲು ಯಾ ರೂಪಿಸಲು ವ್ಯಕ್ತಿಗೆ ಭಾಷೆ ಬೇಕು. ಹಾಗೇ ತನ್ನ ಮನಸ್ಸಿನಲ್ಲಿ ಮೂಡುವ ವಿಚಾರ, ಭಾವನೆ, ಕಲ್ಪನೆಗಳ ಅಭಿವ್ಯಕ್ತಿಗೂ ಭಾಷೆ ಬೇಕು. ಬುದ್ಧಿಯ ವ್ಯಕ್ತಾಂಶ ಭಾಷೆ, ಭಾಷೆಯ ಅವ್ಯಕ್ತಾಂಶ ಬುದ್ಧಿ. ಈ ಪ್ರಕ್ರಿಯೆಗಳ ಕುರಿತಾಗಿ ಪಿಯಾಜೆ, ವ್ಯಗೋಸ್ಕಿ, ಚೊಂಸ್ಕಿ, ಬ್ರೂನರ್ ಮೊದಲಾದವರು ಸಾಕಷ್ಟು ಸೈದ್ಧಾಂತಿಕ ವಿವರಣೆಯನ್ನಿತ್ತಿರುವರು.

ಒಟ್ಟಿನಲ್ಲಿ, ಜಡ್ಡುಕಟ್ಟಿದ, ಬಿಗಿಯಾದ ಸಾಂಪ್ರದಾಯಿಕ ತರಗತಿ ಕೊಠಡಿಗಳ ಬದಲಾಗಿ ಮುಕ್ತ ಕಲಿಕಾ ಕೇಂದ್ರಗಳು (ಛ್ಞಿ ಔಛಿಚ್ಟ್ಞಜ್ಞಿಜ ಇಛ್ಞಿಠ್ಟಿಛಿ) ಹುಟ್ಟಬೇಕು, ಕಲಿಕಾ ಕೇಂದ್ರಗಳು ಯೋಚನಾ ಕೇಂದ್ರಗಳಾಗಬೇಕು. ಇದು ಸಾಧ್ಯವಾಗಬೇಕಾದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇರಬೇಕಾದುದು ತೆರೆದ ಮನ ಮತ್ತು ಪರಿವರ್ತನಾ ಗುಣ.

Similar News