×
Ad

ಸುಬ್ರಹ್ಮಣ್ಯದಲ್ಲಿ ಅನೈತಿಕ ಗೂಂಡಾಗಿರಿ ಪ್ರಕರಣ: ಹಲ್ಲೆಗೊಳಗಾದ ವಿದ್ಯಾರ್ಥಿ ವಿರುದ್ಧ ಮಾನಭಂಗ ಯತ್ನ ದೂರು

ಸುಬ್ರಹ್ಮಣ್ಯ ಠಾಣೆಯಲ್ಲಿ ಎರಡು ಪ್ರಕರಣ ದಾಖಲು

Update: 2023-01-06 23:17 IST

ಸುಳ್ಯ: ಪರಿಚಯದ ವಿದ್ಯಾರ್ಥಿನಿಯೊಂದಿಗೆ ಮಾತನಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ತಂಡವೊಂದು ಎಳೆದೊಯ್ದು ಹಳೆ ಕಟ್ಟಡದ ಕೋಣೆಯೊಳಗ ಕೂಡಿ ತೀವ್ರವಾಗಿ ಥಳಿಸಿದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದ್ದು, ಹಲ್ಲೆಗೊಳಗಾದ ವಿದ್ಯಾರ್ಥಿ ವಿರುದ್ಧ ಮಾನಭಂಗ ಯತ್ನ ದೂರು ದಾಖಲಾಗಿದೆ.

ಸಂಪಾಜೆ ಗ್ರಾಮದ ಕಲ್ಲುಗುಂಡಿ ಹನೀಫ್ ಎಂಬವರ ಪುತ್ರ ಅಫೀದ್(20) ಹಲ್ಲೆಗೊಳಗಾದ ಯುವಕ. ಈತ ಖಾಸಗಿ ಕಾಲೇಜೊಂದರ ಡಿಪ್ಲೊಮಾ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಗಾಯಾಳು ಅಫೀದ್‌ರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಫೀದ್‌ಗೆ ಸಾಮಾಜಿಕ ಜಾಲತಾಣದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳ ಪರಿಚಯವಾಗಿತ್ತು. ಗುರುವಾರ ಆಕೆಯನ್ನು ಸುಬ್ರಹ್ಮಣ್ಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಅಫೀದ್ ಭೇಟಿಯಾಗಿ ಮಾತನಾಡುತ್ತಿದ್ದನೆನ್ನಲಾಗಿದೆ. ಈ ವೇಳೆ ಅಪರಿಚಿತರ ತಂಡ ಅಫೀದ್‌ರನ್ನು ಎಳೆದೊಯ್ದು ಜೀಪೊಂದರಲ್ಲಿ ಹಾಕಿ ಕೊಂಡೊಯ್ದು ಸುಬ್ರಹ್ಮಣ್ಯದ ಕುಮಾರಧಾರ ಜಂಕ್ಷನ್ ಬಳಿಯ ಹಳೆ ಕಟ್ಟಡದ ಕೋಣೆಯೊಳಗ ಕೂಡಿ ಹಾಕಿದ್ದಾರೆ. ಈ ವೇಳೆ 10-12 ಮಂದಿ ಕೈಯಲ್ಲಿ, ಮರದ ದೊಣ್ಣೆ, ಬೆತ್ತಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಒಬ್ಬಾತ ಚಾಕುವಿನಿಂದ ತಿವಿಯಲು ಕೂಡಾ ಯತ್ನಿಸಿದ್ದಾನೆ. ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಫೀದ್ ಸುಬ್ರಹ್ಮಣ್ಯ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಯುವಕನ ವಿರುದ್ಧ ಮಾನಭಂಗ ಯತ್ನ ದೂರು
ಇದೇ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆಗೊಳಗಾದ ಅಫೀದ್ ವಿರುದ್ಧ ಯುವತಿಯ ತಂದೆ ಮಾನಭಂಗ ಯತ್ನ ದೂರು ದಾಖಲಿಸಿದ್ದಾರೆ.

"ತನ್ನ ಮಗಳು ಮನೆಗೆ ಹಿಂದಿರುಗಲು ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ಅಫೀದ್ ಎಂಬಾತ ಪ್ರೀತಿಸುವಂತೆ ಒತ್ತಾಯಿಸಿ, ದೂರವಾಣಿ ಸಂಖ್ಯೆ ಕೇಳಿದ್ದಾನೆ. ಇದಕ್ಕೆ ಮಗಳು ನಿರಾಕರಿಸಿದಾಗ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಘಟನೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಎರಡೂ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಮಾಜಿ ಸಚಿವ ಈಶ್ವರಪ್ಪಗೆ ಮತ್ತೆ ಸಂಕಷ್ಟ

Similar News