13 ವರ್ಷ ಬಳಿಕ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಗಳು ಇಲ್ಲ!

Update: 2023-01-07 03:28 GMT

ಬೆಂಗಳೂರು: ದೆಹಲಿಯ ಆಕರ್ಷಕ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸತತ ಹದಿಮೂರು ವರ್ಷಗಳ ಕಾಲ ತನ್ನ ಸಾಂಸ್ಕೃತಿಕ ಮತ್ತು ಪರಂಪರೆಯನ್ನು ಬಿಂಬಿಸಿದ ಕರ್ನಾಟಕದ ಸ್ತಬ್ಧಚಿತ್ರಗಳು ಈ ಬಾರಿ ಅವಕಾಶ ವಂಚಿತವಾಗಿವೆ.

ಮುಂಬರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಿರಿಧಾನ್ಯ ವೈವಿಧ್ಯತೆಯನ್ನು ಬಿಂಬಿಸಲು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವವನ್ನು ಕೇಂದ್ರ ತಳ್ಳಿಹಾಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪರಿಣಾಮವಾಗಿ ಜನವರಿ 26ರಂದು ನವದೆಹಲಿಯ ಕರ್ತವ್ಯಪಥದಲ್ಲಿ ನಡೆಯಲಿರುವ ವರ್ಣರಂಜಿತ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಪ್ರಾತಿನಿಧ್ಯ ಇರುವುದಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ (timesofindia)ವರದಿ ಮಾಡಿದೆ.

ಸ್ತಬ್ಧಚಿತ್ರಗಳ ಪ್ರವೇಶಕ್ಕೆ ಸಂಬಂಧಿಸಿದ ರೇಸ್‌ನಲ್ಲಿ ಅಂತಿಮ ಹಂತದಲ್ಲಿ ಕರ್ನಾಟಕ ಅವಕಾಶ ಕಳೆದುಕೊಂಡಿದೆ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಗಳು ಹೇಳಿವೆ. "ತಜ್ಞರ ಸಮಿತಿ ನಡೆಸುವ ಆರಂಭಿಕ ಮೌಲ್ಯಮಾಪನ ಸುತ್ತುಗಳಲ್ಲಿ ನಮ್ಮ ಸ್ತಬ್ಧಚಿತ್ರಗಳ ವಿನ್ಯಾಸ ಹಾಗೂ ಸಂಗೀತಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದಾಗ್ಯೂ ಕೊನೆಯ ಸುತ್ತಿನಲ್ಲಿ ನಾವು ಹೊರಬಿದ್ದೆವು. ಹಲವು ವರ್ಷಗಳಿಂದ ಕೇವಲ ಕೆಲವೇ ರಾಜ್ಯಗಳಿಗೆ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲು ಅವಕಾಶ ನೀಡಿ ನಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಹಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ ದೂರು ನೀಡಿವೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ರಾಜ್ಯದ ಸ್ತಬ್ಧಚಿತ್ರಗಳ ಸೃಜನಶೀಲತೆ ಹಾಗೂ ವರ್ಣರಂಜಿತ ಅಭಿವ್ಯಕ್ತಿಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು, ಹಲವು ಪ್ರಶಸ್ತಿಗಳನ್ನು ಕೂಡಾ ಈ ಮೊದಲು ಕರ್ನಾಟಕ ಗೆದ್ದಿತ್ತು. 2022ರಲ್ಲಿ ಕರ್ನಾಟಕದ ’ಸಾಂಪ್ರದಾಯಿಕ ಕಸೂತಿಯ ತೊಟ್ಟಿಲು’ ಸ್ತಬ್ಧಚಿತ್ರ ಎರಡನೇ ಅತ್ಯುತ್ತಮ ಸ್ತಬ್ಧಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ರಾಜ್ಯದ ಸ್ತಬ್ಧಚಿತ್ರಗಳು ಸಮೃದ್ಧ ಜಾನಪದ, ಜೀವವೈವಿಧ್ಯ, ಕರಕುಶಲಕಲೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿವೆ.

Similar News