20 ಕೋಟಿ ರೂ. ಬೆಲೆ ಬಾಳುವ ದುಬಾರಿ ನಾಯಿ ತಳಿಯನ್ನು ಖರೀದಿಸಿದ ಬೆಂಗಳೂರಿನ ವ್ಯಕ್ತಿ !

Update: 2023-01-07 15:55 GMT

ಬೆಂಗಳೂರು: ರಾಜ್ಯ ರಾಜಧಾನಿಯ ಶ್ವಾನಪ್ರಿಯರೊಬ್ಬರು ಇತ್ತೀಚೆಗೆ ಕಕೇಶಿಯನ್ ಶೆಫರ್ಡ್ ನಾಯಿಯನ್ನು ರೂ. 20 ಕೋಟಿ ಖರೀದಿಸಿದ್ದಾರೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ. ಇಂಡಿಯನ್ ಡಾಗ್ ಬ್ರೀಡರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿರುವ ಸತೀಶ್ ಅವರು ಅಪರೂಪದ ತಳಿಯಾದ ನಾಯಿಯನ್ನು ಹೈದರಾಬಾದ್‌ ಮೂಲದ ವ್ಯಕ್ತಿಯೊಬ್ಬರಿಂದ ಖರೀದಿಸಿದ್ದಾರೆ.

ಕಕೇಶಿಯನ್ ಶೆಫರ್ಡ್ ತಳಿಯ ಈ ನಾಯಿಗೆ "ಕಾಡಬೊಮ್ ಹೇಡರ್" ಎಂದು ಹೆಸರಿಸಲಾಗಿದೆ. 1.5 ವರ್ಷ ವಯಸ್ಸಿನ ಹೇಡರ್ ಇತ್ತೀಚೆಗೆ ಟ್ರಿವೆಂಡ್ರಮ್ ಕೆನಲ್ ಕ್ಲಬ್ ಈವೆಂಟ್ ಮತ್ತು ಇನ್ನೊಂದು ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿ ಅತ್ಯುತ್ತಮ ನಾಯಿ ತಳಿ ವಿಭಾಗದಲ್ಲಿ ಒಟ್ಟು 32 ಪದಕಗಳನ್ನು ಗೆದ್ದಿದ್ದಾರೆ ಎಂದು ಬೆಂಗಳೂರು ಮಿರರ್ ವರದಿ ಹೇಳಿದೆ.

"ಹೇಡರ್ ಗಾತ್ರದಲ್ಲಿ ತುಂಬಾ ದೊಡ್ಡದಾಗಿದ್ದು, ಅತ್ಯಂತ ಸ್ನೇಹಪರವಾಗಿದೆ. ಅದು ತನ್ನ ಹವಾನಿಯಂತ್ರಿತ ನಿವಾಸದಲ್ಲಿ ತಂಗಿದೆ, ”ಎಂದು ನಾಯಿ ಮಾಲಕರು ಪತ್ರಿಕೆಗೆ ತಿಳಿಸಿದ್ದಾರೆ.

ಸತೀಶ್‌ ಅವರು ಈ ಹಿಂದೆಯೂ ನಾಯಿಗಳ ದುಬಾರಿ ತಳಿಗಳನ್ನು ಖರೀದಿಸಿದ್ದರು. 2016 ರಲ್ಲಿ, ಸತೀಶ್ ಎರಡು ಕೊರಿಯನ್ ಮಾಸ್ಟಿಫ್‌ ತಳಿಯ ನಾಯಿಗಳನ್ನು ಹೊಂದಿದ್ದ ಭಾರತ ಮೊದಲ ವ್ಯಕ್ತಿಯಾದರು. ಈ ನಾಯಿಗಳಿಗೆ ತಲಾ 1 ಕೋಟಿ ರೂ. ತೆತ್ತು ಚೀನಾದಿಂದ   ಆಮದು ಮಾಡಿಕೊಂಡಿದ್ದರು. ವಿಮಾನ ನಿಲ್ದಾಣದಿಂದ ರೋಲ್ಸ್ ರಾಯ್ಸ್ ಮತ್ತು ರೇಂಜ್ ರೋವರ್‌ ಕಾರುಗಳಲ್ಲಿ ಅವುಗಳನ್ನು ಕರೆದುಕೊಂಡು ಬರಲಾಗಿತ್ತು.

 ಕಕೇಶಿಯನ್ ಶೆಫರ್ಡ್ ಜಾರ್ಜಿಯಾ, ಅರ್ಮೇನಿಯಾ ಅಜೆರ್ಬೈಜಾನ್, ಒಸ್ಸೆಟಿಯಾ, ಡಾಗೆಸ್ತಾನ್ ಮತ್ತು ರಷ್ಯಾದ ಭಾಗಗಳಲ್ಲಿ ವಾಸಿಸುವ ತಳಿಯಾಗಿದೆ. ಅಮೇರಿಕನ್ ಕೆನಲ್ ಕ್ಲಬ್ ಪ್ರಕಾರ, ಶತಮಾನಗಳಿಂದ, ಈ ತಳಿ ನಾಯಿಗಳನ್ನು ಅತಿಕ್ರಮಣಕಾರರಿಂದ ಆಸ್ತಿಗಳನ್ನು ರಕ್ಷಿಸಲು, ತೋಳಗಳಂತಹ ಕಾಡು ಪ್ರಾಣಿಗಳಿಂದ ಸಾಕುಪ್ರಾಣಿಗಳನ್ನು ಸೇರಿದಂತೆ ಇತರ ಅನೇಕ ಕರ್ತವ್ಯಗಳಿಗಾಗಿ ಬಳಸಲಾಗುತ್ತಿತ್ತು.

ಸಂಪೂರ್ಣವಾಗಿ ಬೆಳೆದ ಕಕೇಶಿಯನ್ ಶೆಫರ್ಡ್ ಸುಮಾರು 44 ರಿಂದ 77 ಕೆಜಿ ತೂಗುತ್ತದೆ ಮತ್ತು 23 ರಿಂದ 30 ಇಂಚುಗಳಷ್ಟು ಎತ್ತರವನ್ನು ಹೊಂದಿರುತ್ತದೆ. ಇದರ ಜೀವಿತಾವಧಿ 10 ರಿಂದ 12 ವರ್ಷಗಳು.

Similar News