ಭಟ್ಕಳ: ಕರಾವಳಿ ಕರ್ನಾಟಕ ಎನ್‌ಆರ್‌ಐ ಫೋರಂ ವತಿಯಿಂದ ಸಂಚಾರಿ ಚಿಕಿತ್ಸಾಲಯ ಸೇವೆ ಉದ್ಘಾಟನೆ

ಮೊಬೈಲ್ ಕ್ಲಿನಿಕ್‌ಗೆ ಹೈಟೆಕ್ ಆ್ಯಂಬ್ಯುಲೆನ್ಸ್ ಕೊಡುಗೆ ನೀಡಿದ ಮುಹಮ್ಮದ್ ಮೀರಾನ್ ಮಣೆಗಾರ್

Update: 2023-01-08 13:06 GMT

ಭಟ್ಕಳ:  ಭಟ್ಕಳ: ಕರಾವಳಿ ಕರ್ನಾಟಕದ ಎನ್‌ಆರ್‌ಐ (NRI) ಫೋರಂ ತನ್ನ ಮೊದಲ ಮೊಬೈಲ್ ಕ್ಲಿನಿಕ್ (ಸಂಚಾರಿ ಚಿಕಿತ್ಸಾಲಯ ಸೇವೆ) ಅನ್ನು ಪ್ರಾರಂಭಿಸಿದೆ. ಶಿರೂರಿನ ಎಂಎಂ ರೆಸಾರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರವಿವಾರ ಈ ಸೇವೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಉಪಸ್ಥಿತರಿದ್ದರು.

ಅನಿವಾಸಿ ಭಾರತೀಯ ಮಹಮ್ಮದ್ ಮೀರಾನ್ ಮಣೆಗಾರ್ ಅವರು ಕೊಡುಗೆಯಾಗಿ ನೀಡಿದ ಹೈಟೆಕ್ ಆಂಬ್ಯುಲೆನ್ಸ್‌ನಲ್ಲಿ ನಿರ್ಮಿಸಲಾದ ಮೊಬೈಲ್ ಕ್ಲಿನಿಕ್ ಅನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು.

ಗ್ರೀನ್ ವ್ಯಾಲಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಹಿರಿಯ ಉಪಾಧ್ಯಕ್ಷ ಮುಹಮ್ಮದ್ ಮೀರಾನ್ ಮಣೆಗಾರ್ ಅವರು ಮೊಬೈಲ್ ಕ್ಲಿನಿಕ್ ಕಲ್ಪನೆಯ ಬಗ್ಗೆ ಹಾಗೂ ಅದನ್ನು ಕಾರ್ಯರೂಪಕ್ಕೆ ತಂದ ಬಗ್ಗೆ ಮಾತನಾಡಿದರು. ಇದೇ ವೇಳೆ, ಈ ಯೋಜನೆಗೆ ಬೆಂಬಲ ನೀಡಿದಕ್ಕಾಗಿ ಯೂನಸ್ ಕಾಝಿಯಾ ಮತ್ತು ಎಸ್‌ಎಂ ಅರ್ಷದ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಸಂಚಾರಿ ಚಿಕಿತ್ಸಾಲಯ ಸೇವೆಯನ್ನು ಉದಾತ್ತ ಕಾರ್ಯವೆಂದು ಬಣ್ಣಿಸಿದ್ದು, ಸೇವೆಯನ್ನು ಆರಂಭಿಸಿದ ಸಂಸ್ಥೆಯನ್ನು ಅಭಿನಂದಿಸಿದರು.

ಮೀರನ್ ಮನೇಗಾರ್ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ಮನೇಗಾರ್‌ ಅವರು ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ, ಅವರಂತಹ ಪರೋಪಕಾರಿಗಳನ್ನು ಹುಡುಕುವುದು ಕಷ್ಟ ಎಂದು ಹೇಳಿದರು.

ಜಮಾತುಲ್ ಮುಸ್ಲಿಮೀನ್ ಭಟ್ಕಳದ ಖಾಝಿಯಾಗಿರುವ ಮೌಲಾನಾ ಅಬ್ದುಲ್ ರಬ್ ನದ್ವಿ ಅವರು ಮಾತನಾಡಿ, ದಾನ ಕರ್ಮಗಳು ಮತ್ತು ಸಾಮಾಜಿಕ ಸೇವೆಗಳ ಮಹತ್ವದ ಕುರಿತು ವಿವರಿಸಿ, ವಿವಿಧ ಸಮುದಾಯಗಳನ್ನು ಒಂದುಗೂಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. 

ಮರ್ಕಝಿ ಖಲೀಫಾ ಜಮಾತುಲ್ ಮುಸ್ಲಿಮೀನ್ ಭಟ್ಕಳದ ಖಾಝಿ ಮೌಲಾನಾ ಖಾಜಾ ಅಕ್ರಮಿ ಮದನಿ ಮಾತನಾಡಿ , ಮೊಬೈಲ್ ಕ್ಲಿನಿಕ್ ಯಶಸ್ವಿ ಯೋಜನೆಯಾಗಲಿ, ಹಾಗೂ ಇದು ಇಂತಹದ್ದೇ ರೀತಿಯ ಯೋಜನೆಗಳನ್ನು ಪ್ರಾರಂಭಿಸಲು ಇತರರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ಕರಾವಳಿ ಕರ್ನಾಟಕ ಎನ್‌ಆರ್‌ಐ ಫೋರಮ್‌ನ ಅಧ್ಯಕ್ಷ ಯೂನಸ್ ಕಾಜಿಯಾ ಅವರು ಮಾತನಾಡಿ,  ಈ ಪ್ರದೇಶದಲ್ಲಿ ಮೊಬೈಲ್ ಕ್ಲಿನಿಕ್ ಸೇವೆಯನ್ನು ಪ್ರಾರಂಭಿಸುವ ಉದ್ದೇಶದ ಬಗ್ಗೆ ಬೆಳಕು ಚೆಲ್ಲಿದರು ಮತ್ತು ಯೋಜನೆಗೆ ಆಂಬ್ಯುಲೆನ್ಸ್ ದೇಣಿಗೆ ನೀಡುವ ಮೂಲಕ ಉದಾರವಾಗಿ ಬೆಂಬಲಿಸಿದ್ದಕ್ಕಾಗಿ ಮೀರಾನ್ ಮನೇಗರ್ ಅವರಿಗೆ ಧನ್ಯವಾದ ಅರ್ಪಿಸಿದರು.

ವೇದಿಕೆಯ ಕಾರ್ಯದರ್ಶಿ ಅಮೀನ್ ಸೈಫುಲ್ಲಾ ಮಾತನಾಡಿ, ಸಂಚಾರಿ ಚಿಕಿತ್ಸಾಲಯವು ಜನರಿಗೆ ಒದಗಿಸುವ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳ ಕುರಿತು ವಿವರಿಸಿದರು.

ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ, ಖಾಜಿ ಜಮಾತುಲ್ ಮುಸ್ಲಿಮೀನ್ ಮಂಕಿ ಮೌಲಾನಾ ಶಕೀಲ್, ಭಟ್ಕಳ ಮುಸ್ಲಿಂ ಖಲೀಜ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಅತೀಕುರ್ ರಹಮಾನ್ ಮುನಿರಿ, ಬಿಎಂಕೆಸಿ ಅಧ್ಯಕ್ಷ ಫಾರೂಕ್ ಮುಸ್ಬಾ, ಭಟ್ಕಳ ಟಿಎಂಸಿ ಅಧ್ಯಕ್ಷ ಪರ್ವೇಜ್ ಕಾಶಿಮಜಿ, ಭಟ್ಕಳ ಟಿಎಚ್‌ಒ ಡಾ. ಸವಿತಾ ಕಾಮತ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Similar News