ಸೈದ್ಧಾಂತಿಕ ಶಕ್ತಿಯಿಂದ ಹುಸಿ ರಾಷ್ಟ್ರೀಯತೆ ಹೇರಿಕೆ: ಡಾ.ರಾಜೇಂದ್ರ ಚೆನ್ನಿ
ಬೆಂಗಳೂರು, ಜ.8: ಪ್ರಸ್ತುತದ ಪ್ರಭುತ್ವ ಮತ್ತು ಅದರ ಹಿಂದಿನ ಸೈದ್ದಾಂತಿಕ ಶಕ್ತಿಯು ಹುಸಿ ರಾಷ್ಟ್ರೀಯತೆ ಹೇರುತ್ತಿದೆ. ಅದನ್ನು ಪ್ರಬಲವಾಗಿ ಎದುರಿಸಲು ಇತಿಹಾಸ ರೂಪಿತ ಕನ್ನಡತನದ ಆಶಯಗಳನ್ನು ಅಳವಡಿಸುವ ಕೆಲಸ ಆಗಬೇಕಿದೆ ಎಂದು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ತಿಳಿಸಿದ್ದಾರೆ.
ರವಿವಾರ ನಗರದ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ಆಯೋಜಿಸಿದ್ದ ಜನಸಾಹಿತ್ಯ ಸಮ್ಮೇಳನದಲ್ಲಿ ‘ಸೌಹಾರ್ದತೆ ಮತ್ತು ಕನ್ನಡತನ’ ವಿಷಯದ ಕುರಿತು ಮಾತನಾಡಿದ ಅವರು, ಇಂದಿಗೂ ರಾಜ್ಯದಲ್ಲಿ ಸಾವಿರಾರು ಹಳ್ಳಿಗಳಲ್ಲಿ ಮೊಹರಂ ಆಚರಿಸಲಾಗುತ್ತದೆ. ಅದೂ ಒಬ್ಬನೇ ಒಬ್ಬ ಮುಸ್ಲಿಂ ವ್ಯಕ್ತಿ ಇಲ್ಲದ ಹಳ್ಳಿಗಳಲ್ಲೂ ಮೊಹರಂ ಆಚರಿಸಲಾಗುತ್ತದೆ ಎಂದು ಹಿರಿಯ ಚಿಂತಕ ರಹಮತ್ ತರೀಕೆರೆ ಹೇಳುತ್ತಾರೆ. ಇದು ನಮ್ಮ ಕನ್ನಡತನವಾಗಿದೆ ಎಂದು ಹೇಳಿದರು.
ಇತಿಹಾಸದ ಕುರಿತು ಭ್ರಮೆಗಳನ್ನು ಹರಡಿಸುವ ಕೆಲಸ ಆಗುತ್ತಿದ್ದು, ನಾವು ಅಂತಹ ಸುಳ್ಳುಗಳನ್ನು ಬಯಲಿಗೆಳೆಯಬೇಕಿದೆ. ನಾವು ಸಾಂಸ್ಕೃತಿಕ ಮರೆವಿನಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಅದನ್ನು ತೊಡೆದು ಹಾಕುವ ಕೆಲಸಗಳು ಆಗಬೇಕಾಗಿದೆ. ಮುಂದಿನ ತಲೆಮಾರಿಗೆ ಸೌಹಾರ್ದತೆ ಚರಿತ್ರೆಯ ದೊಡ್ಡತನ ತಿಳಿಸುವ ನಿಟ್ಟಿನಲ್ಲಿ ಗಟ್ಟಿದನಿ ಹೆಚ್ಚಿಸುವ ಕೆಲಸ ಮಾಡಬೇಕಿದೆ ಎಂದು ಅವರು ತಿಳಿಸಿದರು.
ಕವಿರಾಜ ಮಾರ್ಗ ಕೃತಿಯ ಹುಟ್ಟು ಮತ್ತು ಅಂದಿನ ಸಾಮ್ರಾಜ್ಯದ ನಡೆಯ ಬಗ್ಗೆ ವಿವರಿಸಿದರು. ಕನ್ನಡತನದ ಬೇರುಗಳನ್ನು ಅಳವಡಿಸುವುದು ಅವಶ್ಯಕವಾಗಿದೆ. ಆ ಮೂಲಕ ಸೌಹಾರ್ದತೆಯನ್ನು, ಶ್ರೇಷ್ಠ ಆರೋಗ್ಯಕರ ರಾಜಕೀಯವಾಗಿದೆ. ಅದುವೇ ಕನ್ನಡತನದ ರಾಜಕೀಯ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ದಸಂಸ ಮುಖಂಡ ಮಾವಳ್ಳಿ ಶಂಕರ್, ಮುನೀರ್ ಕಾಟಿಪಳ್ಳ, ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ, ಪ್ರಿಯಾಂಕ ಮಾವಿನ್ಕರ್ ಗುಲ್ಬರ್ಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.