ಬುಡುಬುಡಿಕೆ ಸಮುದಾಯದ ಜನರಿಗೆ ಪುನರ್ ವಸತಿ ಕಲ್ಪಿಸಲು ಆಗ್ರಹ

Update: 2023-01-09 18:32 GMT

ಬೆಂಗಳೂರು, ಜ. 9: ಇಲ್ಲಿನ ಕಾಚರಕನಹಳ್ಳಿ ಘೋಷಿತ ಕೊಳಚೆ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಭಿಕ್ಷೆ ಬೇಡಿ ಜೀವನ ಸಾಗಿಸುವ ಬುಡುಬುಡಿಕೆ ಸಮುದಾಯದ 60 ಶೆಡ್‍ಗಳನ್ನು ಏಕಾಏಕಿ ತೆರವು ಮಾಡಿದ ಕ್ರಮವನ್ನು ಖಂಡಿಸಿ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಬುಡುಬುಡಿಕೆ ಸಮುದಾಯದ ಜನರು ಧರಣಿ ಪ್ರತಿಭಟನೆ ನಡೆಸಿದರು.

ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದ ಸಮುದಾಯದ ಜನರು, ಕೂಡಲೇ ತಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಮುನ್ಸೂಚನೆ ನೀಡದೆ ಶೆಡ್‍ಗಳನ್ನು ತೆರವು ಮಾಡಿದ್ದು, ಆ ಸಮುದಾಯದ ಜನರಿಗೆ ತೀವ್ರ ತೊಂದರೆ ಉಂಟಾಗಿದೆ. ಈ ಸಂಬಂಧದ ಪ್ರಕರಣ ಹೈಕೋರ್ಟ್‍ನಲ್ಲಿ ಬಾಕಿ ಇರುವ ಸಂದರ್ಭದಲ್ಲಿ ತೆರವು ಕಾರ್ಯಾಚರಣೆ ಸರಿಯಲ್ಲ ಎಂದು ಆಕ್ಷೇಪಿಸಲಾಗಿದೆ.

ಶೆಡ್‍ಗಳನ್ನು ತೆರವುಗೊಳಿಸಿದ ಜಾಗದಲ್ಲೇ ಬುಡುಬುಡಿಕೆ ಸಮುದಾಯದ ಜನರಿಗೆ ಪುನರ್ ವಸತಿ ಕಲ್ಪಿಸಬೇಕು. ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ವಿಸಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಮೂರ್ತಿ ಎಚ್ಚರಿಕೆ ನೀಡಿದ್ದಾರೆ.

Similar News