×
Ad

ಬಿಗ್‌ಬಾಸ್ ವಿಜೇತ ರೂಪೇಶ್ ಶೆಟ್ಟಿಗೆ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸನ್ಮಾನ

Update: 2023-01-10 00:05 IST

ಮಂಗಳೂರು, ಜ.9: ಬಿಗ್‌ಬಾಸ್ ಕನ್ನಡ 9ನೇ ಆವೃತ್ತಿ ಮತ್ತು ಒಟಿಟಿ (OTT) ಬಿಗ್‌ಬಾಸ್ ವಿಜೇತ ರೂಪೇಶ್ ಶೆಟ್ಟಿ ಅವರನ್ನು ಸೋಮವಾರ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪೊಲೀಸ್ ಆಯುಕ್ತರಿಗೆ ಕಲೆಯ ಮೇಲೆ ಇರುವ ಕಾಳಜಿ, ಮಂಗಳೂರು ಪೊಲೀಸರು ಕಲಾವಿದರಿಗೆ ನೀಡುವ ಗೌರವವು ನನಗೆ ತುಂಬಾ ಕುಶಿಕೊಟ್ಟಿದೆ. ಪೊಲೀಸ್ ಇಲಾಖೆಯ ಮೇಲೆ ಅಪಾರ ಗೌರವ ಹೊಂದಿದ್ದೇನೆ. ಒತ್ತಡದಲ್ಲಿಯೂ ತಾಳ್ಮೆ ಕಳೆದುಕೊಳ್ಳದೆ ಹಗಲು-ರಾತ್ರಿ ಜನರ ಸುರಕ್ಷತೆ ಕಾಪಾಡುವ ಪೊಲೀಸರು ಬಿಗ್‌ಬಾಸ್ ವಿನ್ನರ್‌ಗಳಿಗಿಂತಲೂ ದೊಡ್ಡ ವಿನ್ನರ್‌ಗಳು. ಪೊಲೀಸ್ ಆಯುಕ್ತರು ತನಗೆ ಕೆಲವು ಸಲಹೆ ನೀಡಿದ್ದು ಅದನ್ನು ಪಾಲಿಸುತ್ತೇನೆ ಎಂದರು.

ರೂಪೇಶ್ ಶೆಟ್ಟಿ ಅವರು ತಾನೇ ರಚಿಸಿದ ‘ಬುದ್ಧಿವಂತರು...ನಾವು ಬುದ್ಧಿವಂತ ದಡ್ಡರು..ಜೀವನವೇ ಒಂದು ಡೊಂಬರಾಟ...’ ಹಾಡನ್ನು ಹಾಡಿದರು.
ಸನ್ಮಾನ ನೆರವೇರಿಸಿ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ರೂಪೇಶ್ ಶೆಟ್ಟಿ ತುಳು, ಕನ್ನಡ ಚಿತ್ರರಂಗದ ಸಾಧನೆಯ ಜತೆಗೆ ಬಿಗ್‌ಬಾಸ್‌ನಲ್ಲಿಯೂ ವಿಜೇತರಾಗುವ ಮೂಲಕ ಮನೆಮಾತಾಗಿದ್ದಾರೆ. ಅವರು ಇನ್ನಷ್ಟು ಸಾಧನೆ ಮಾಡಿ ಕನ್ನಡ ತುಳುಭಾಷೆಯ ಕಂಪನ್ನು ಜಗತ್ತಿನಾದ್ಯಂತ ಪಸರಿಸಲಿ ಎಂದರು.

ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ಅನ್ಶು ಕುಮಾರ್, ದಿನೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Similar News