×
Ad

ಕೊಡಿಗೇಹಳ್ಳಿ ಸರಕಾರಿ ಜಮೀನು ಒತ್ತುವರಿ: ಅಧಿಕಾರಿಗಳು ಸೇರಿ 8 ಜನರ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಸೂಚನೆ

Update: 2023-01-10 17:38 IST

ಬೆಂಗಳೂರು, ಜ.10: ನಗರದ ಕೊಡಿಗೇಹಳ್ಳಿ ಮತ್ತು ಕೋತಿಹೊಸಹಳ್ಳಿಯಲ್ಲಿ ಖಾಸಗಿ ಕಂಪೆನಿಗಳು ಸರಕಾರಿ ಜಮೀನು ಒತ್ತುವರಿ ಮಾಡಿ ವಸತಿ ಸಮುಚ್ಛಯ ನಿರ್ಮಿಸಲು ಕಾರಣವಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆಲ ಅಧಿಕಾರಿಗಳು ಸೇರಿ ಎಂಟು ಮಂದಿ ವಿರುದ್ಧ ಕಾನೂನು ಮತ್ತು ಸೇವಾ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಬಿಡಿಎ ಆಯುಕ್ತರಿಗೆ ನಿರ್ದೇಶನ ನೀಡಿದೆ. 

ಸರಕಾರಿ ಜಾಗದ ಒತ್ತುವರಿಯನ್ನು ತೆರವುಗೊಳಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೊಡಿಗೇಹಳ್ಳಿಯ ನಿವಾಸಿ ಅಶ್ವತ್ಥ ನಾರಾಯಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ಮಾಡಿದೆ. 

ಒತ್ತುವರಿಯಾಗಿರುವ ಜಮೀನನ್ನು ಮುಂದಿನ 15 ದಿನಗಳಲ್ಲಿ ತೆರವು ಗೊಳಿಸಬೇಕು ಎಂದು ಯಲಹಂಕ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಫೆ.2ಕ್ಕೆ ಮುಂದೂಡಿದೆ.

ಈ ಸಂದರ್ಭದಲ್ಲಿ ಅದೇ ವಸತಿ ಸಮುಚ್ಚಯದಲ್ಲಿ ಮನೆ ಹೊಂದಿರುವವರ ಪರ ವಕೀಲರು ಹಾಜರಾಗಿ, ತಕ್ಷಣ ಒತ್ತುವರಿ ತೆರವು ಮಾಡಿದಲ್ಲಿ ನಮ್ಮ ಕಕ್ಷಿದಾರರಿಗೆ ತೊಂದರೆಯಾಗಲಿದೆ. ಹೀಗಾಗಿ ಒತ್ತುವರಿ ಪ್ರಕ್ರಿಯೆ ಮುಂದೂಡಲು ಮನವಿ ಮಾಡಿದರು. ಇದರಿಂದ ತೀವ್ರ ಅಸಮಾಧಾನ ಗೊಂಡ ನ್ಯಾಯಪೀಠ, ಈ ಸಂದರ್ಭದಲ್ಲಿ ಒತ್ತುವರಿ ತೆರವು ಮಾಡಬಾರದು ಎಂದಾದರೆ ನಮ್ಮ ಆದೇಶಕ್ಕೆ ಬೆಲೆ ಏನಿದೆ?, ಒತ್ತುವರಿ ಕಟ್ಟಡದಲ್ಲಿ ಮನೆ ಪಡೆದಿರುವವರಿಗೆ ಈ ಕುರಿತು ಜವಾಬ್ದಾರಿ ಇಲ್ಲವೇ? ಎಂದು ಪ್ರಶ್ನಿಸಿತು. ಜತೆಗೆ, ನಿಮ್ಮ ಅಹವಾಲನ್ನು ತಹಶೀಲ್ದಾರ್ ಅವರ ಬಳಿ ಸಲ್ಲಿಸಿ ಎಂದು ಸೂಚನೆ ನೀಡಿತು. 

Similar News