ಒಳ ಮೀಸಲಾತಿ ಕುರಿತು ಹೋರಾಟ ಮಾಡುವ ಅಗತ್ಯವಿಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ
ಬೆಂಗಳೂರು, ಜ.10: ಪರಿಶಿಷ್ಟ ಜಾತಿಗಳ ವರ್ಗೀಕರಣದ(ಒಳ ಮೀಸಲಾತಿ) ಕುರಿತು ಪರಿಶೀಲಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡಲು ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಯು ಎರಡು ಬಾರಿ ಸಭೆ ಮಾಡಿ ಚರ್ಚೆ ನಡೆಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಸಚಿವ ಸಂಪುಟದ ಉಪ ಸಮಿತಿಯ ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಭೆಯಲ್ಲಿ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ ಎಂಬುದು ಸಚಿವ ಸಂಪುಟ ಸಭೆಯ ಮುಂದೆ ಬರುವವರೆಗೆ ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ ಎಂದರು.
ಒಳ ಮೀಸಲಾತಿ ಕುರಿತು ಈಗ ಹೋರಾಟ ಮಾಡುವ ಅಗತ್ಯ ಇಲ್ಲ. ಇನ್ನೂ ಆರಂಭದಲ್ಲಿ ಇರುವಾಗಲೆ ಹೋರಾಟಕ್ಕೆ ಇಳಿದರೆ ಹೇಗೆ? ಜನಸಂಖ್ಯೆಯ ಆಧಾರದ ಮೇಲೆ ಒಳ ಮೀಸಲಾತಿ ಕೊಡಿ ಎಂದು ಕೇಳುತ್ತಿರುವವರು ಇದ್ದಾರೆ. ಅನೇಕರು ಹಳೆಯ ಮೀಸಲಾತಿನೆ ಇರಲಿ ಎಂದು ಹೇಳುತ್ತಿದ್ದಾರೆ. ಆದುದರಿಂದ, ಕಾಲ ಕಾಲಕ್ಕೆ ಮಾಹಿತಿಗಳನ್ನು ತರಿಸಿಕೊಳ್ಳುತ್ತಿದ್ದೇವೆ. ಇನ್ನೂ ಎಷ್ಟು ಸಭೆಗಳ ಬಳಿಕ ಇದಕ್ಕೆ ಅಂತಿಮ ರೂಪ ಸಿಗಲಿದೆ ಎಂದು ಹೇಳಲು ಕಷ್ಟ ಎಂದು ಮಾಧುಸ್ವಾಮಿ ಹೇಳಿದರು.