ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ 3 ವರ್ಷ: ಠೇವಣಿದಾರರಿಂದ ಸಹಿ ಸಂಗ್ರಹ ಅಭಿಯಾನ
''ಸಚಿವ ಎಸ್.ಟಿ. ಸೋಮಶೇಖರ್ ಸದನದಲ್ಲಿ ಸುಳ್ಳು ಹೇಳಿದ್ದಾರೆ''
ಬೆಂಗಳೂರು, ಜ.10: ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದು ಮೂರು ವರ್ಷಗಳು ಕಳೆದಿದ್ದು, ಮಂಗಳವಾರದಂದು ಠೇವಣಿದಾರರೆಲ್ಲರು ಸೇರಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿ, ಸಹಿ ಸಂಗ್ರಹ ಅಭಿಯಾನವನ್ನು ನಡೆಸಿದರು.
ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮಹಾ ಪೋಷಕ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ಮಾತನಾಡಿ, ಗುರು ರಾಘವೇಂದ್ರ ಬ್ಯಾಂಕ್ ಹಗರಣ ಬೆಳಕಿಗೆ ಬಂದು ಮೂರು ವರ್ಷ ಆಗಿದೆ. ಸತತವಾಗಿ ಸಿಬಿಐಗೆ ಕೊಡಿ ಎಂದು ಒತ್ತಾಯಿಸಿದರೂ, ಸರಕಾರ ಈ ವಿಷಯವಾಗಿ ಜವಬ್ದಾರಿ ತೆಗೆದುಕೊಳ್ಳಲು ಸಿದ್ದರಾಗಿಲ್ಲ. ಆದರೆ ಇನ್ಶೂರೆನ್ಸ್ ಹಣ ಬಂದಿರುವುದಕ್ಕೆ ಸಂಸದ ತೇಜಸ್ವಿ ಸೂರ್ಯ ತಾವು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಹಣ ಕಳೆದುಕೊಂಡ ದುಃಖದಲ್ಲಿ 150 ಹೆಚ್ಚು ಠೇವಣಿದಾರರು ಪ್ರಾಣ ಕಳೆದುಕೊಂಡಿದ್ದಾರೆ. 46 ಸಾವಿರ ಜನ ನೇರ ಠೇವಣಿದಾರರು ಮತ್ತು 120 ಸೊಸೈಟಿಗಳು ಸೇರಿ ಮೂರರಿಂದ ಐದು ಲಕ್ಷ ಜನ ಈ ಪ್ರಕರಣದಿಂದ ವಂಚನೆಗೊಳಗಾಗಿದ್ದಾರೆ. ಗುರುರಾಘವೇಂದ್ರ ಬ್ಯಾಂಕ್, ವಸಿಷ್ಠ ಸೌಹಾರ್ದ, ಗುರುಸಾರ್ವಭೌಮ ಸೊಸೈಟಿ, ಕಣ್ವ ಸೊಸೈಟಿ, ನಾಗರತ್ನ ಬ್ಯಾಂಕ್ ಹಾಗೂ ಇನ್ನುಳಿದ ಎಲ್ಲ ಸಹಕಾರಿ ಬ್ಯಾಂಕ್ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ನಾಯಕರಿಂದ ಪ್ರಧಾನ ಮಂತ್ರಿಗಳ ಮೇಲೆ ಒತ್ತಡ ಹಾಕಿಸಬೇಕಿತ್ತು. ಆದರೆ ಸಂಸದ ತೇಜಸ್ವಿ ಸೂರ್ಯ ಒಬ್ಬರೇ ಓಡಾಡುವ ಮೂಲಕ ತಾವು ಕ್ರೆಡಿಟ್ ತೆಗೆದುಕೊಳ್ಳಲು ಬಯಸುತ್ತಿದ್ದಾರೆ. ಬ್ಯಾಂಕ್ ಹಗರಣದ ಕುರಿತು ಸಚಿವ ಎಸ್.ಟಿ. ಸೋಮಶೇಖರ್ ಸದನದಲ್ಲಿ ಪೂರ್ತಿ ಸುಳ್ಳು ಹೇಳಿದ್ದಾರೆ ಎಂದು ಹೇಳಿದರು.