×
Ad

‘ಬೊಮ್ಮಾಯಿ ಅವರಿಂದ ನಾರಾಯಣಗುರು ನಿಗಮದ ಭರವಸೆ ಮಾತ್ರ’: ಘೋಷಣೆಯಾಗಿದ್ದರೆ ಜಿಓ ತೋರಿಸಲಿ; ಪ್ರಣವಾನಂದ ಸ್ವಾಮೀಜಿ ಸವಾಲು

ಸಚಿವರು ಸ್ವಾಭಿಮಾನಿ ಆಗಿದ್ದರೆ ರಾಜಿನಾಮೆ ನೀಡಿ ಪಾದಯಾತ್ರೆಗೆ ಬರಲಿ

Update: 2023-01-10 20:43 IST

ಬ್ರಹ್ಮಾವರ: ಮುಖ್ಯಮಂತ್ರಿಗಳು ಜ.5ರಂದು ನಾರಾಯಣಗುರು ನಿಗಮವನ್ನು ಬಜೆಟ್‌ನಲ್ಲಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಇದು ಕೇವಲ ಭರವಸೆ ಮಾತ್ರ. ಈ ಹಿಂದೆ ಕೂಡಾ ಮುಖ್ಯಮಂತ್ರಿಗಳಾಗಿದ್ದವರು ಇಂಥ ಸಾಕಷ್ಟು ಭರವಸೆಗಳನ್ನು ನೀಡಿದ್ದಾರೆ. ಯಾವುದೂ ಈವರೆಗೆ ಜಾರಿಗೊಂಡಿಲ್ಲ. ಒಂದು ವೇಳೆ ಈ ಬಾರಿ ನಿಗಮವನ್ನು ಘೋಷಣೆ ಮಾಡಿದ್ದರೆ ಅದರ ಸರಕಾರಿ ಆದೇಶವನ್ನು (ಜಿಓ) ತೋರಿಸಿ ಎಂದು ಕರದಾಳುವಿನ ಶ್ರೀನಾರಾಯಣ ಗುರುಶಕ್ತಿ ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮೀಜಿ ಸಚಿವ ಸುನಿಲ್‌ಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.

ಮಂಗಳೂರಿನಿಂದ ಹೊರಟ ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಮಂಗಳವಾರ ಬೆಳಗ್ಗೆ ಬ್ರಹ್ಮಾವರದ  ನಾರಾಯಣಗುರು  ಸಭಾಭವನಕ್ಕೆ ಆಗಮಿಸಿದ್ದು, ಇಲ್ಲಿನ ಬಿಲ್ಲವರ ಸೇವಾ ಸಂಘದಲ್ಲಿ ನೆರೆದವರನ್ನುದ್ದೇಶಿಸಿ ಮಾತನಾಡಿ ಪಾದಯಾತ್ರೆಯ ಅನಿವಾರ್ಯತೆ ಬಗ್ಗೆ ವಿವರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಒಂದು ವೇಳೆ ನಿಗಮ ಘೋಷಣೆ ಮಾಡಿದ್ದರೆ, ಅದನ್ನು ನಾವು ಖಂಡಿತ ಸ್ವಾಗತಿಸುತ್ತೇವೆ ಎಂದರು.

ತಮ್ಮ ಪಾದಯಾತ್ರೆ ಕೇವಲ ನಿಗಮ ಸ್ಥಾಪನೆಗೆ ಸಂಬಂಧಿಸಿದ್ದಲ್ಲ. ಇಲ್ಲಿ 10 ಅಂಶಗಳ ಬೇಡಿಕೆಯನ್ನಿಟ್ಟುಕೊಂಡು ಅವುಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಾದಯಾತ್ರೆ ಕೈಗೊಂಡಿದ್ದೇವೆ. ಹೀಗಾಗಿ ನಿಗಮವೊಂದನ್ನು ಒಪ್ಪಿದ್ದೇವೆಂದು ಸಚಿವರು ಹೇಳಿದಾಕ್ಷಣ ಪಾದಯಾತ್ರೆ ನಿಲ್ಲುವುದಿಲ್ಲ ಎಂದವರು ಸ್ಪಷ್ಟಪಡಿಸಿದರು.

ಸಚಿವ ಸುನಿಲ್‌ಕುಮಾರ್ ಸಹಿತ ಇಡೀ ಸರಕಾರ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ದಯವಿಟ್ಟು ನಮ್ಮ ಸಮುದಾಯದ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಹಿಂದೆ ಹಲವು ಬಾರಿ, ಹಲವರಿಂದ ನಾವು ಭರವಸೆಯನ್ನು ಪಡೆದಿದ್ದೇವೆ. ಅವ್ಯಾವುದೂ ಈಡೇರಿಲ್ಲ ಎಂದು ಪ್ರಣವಾನಂದ ಸ್ವಾಮೀಜಿ ಗುಡುಗಿದರು.

ತಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳು ಕಿವಿ ಮೇಲೆ ಹಾಕಿಕೊಳ್ಳದೇ ಇರುವುದರಿಂದ, ಸಚಿವ ಸಂಪುಟದಲ್ಲಿರುವ ಸುನಿಲ್ ಕುಮಾರ್ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ನಿಜವಾಗಿ ಸ್ವಾಭಿಮಾನ ಇದ್ದರೆ, ಸಮುದಾಯದ ಬಗ್ಗೆ ನಿಜವಾದ ಕಳಕಳಿ ಇದ್ದರೆ ಸಚಿವ ಪದವಿಗೆ ರಾಜಿನಾಮೆ ನೀಡಿ ಪಾದಯಾತ್ರೆಯಲ್ಲಿ ತಮ್ಮೊಂದಿಗೆ ಸೇರಿಕೊಳ್ಳಿ ಎಂದು ಅವರು ಸವಾಲೆಸೆದರು. 

ನಿಗಮದ ಸ್ಥಾಪನೆಯೂ ಸೇರಿದಂತೆ ಪ್ರಮುಖ ಹತ್ತು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಮ್ಮ ಪಾದಯಾತ್ರೆ ರಾಜ್ಯದ ಹಲವು ಜಿಲ್ಲೆಗಳ ಮೂಲಕ ಮುಂದುವರಿದು ಫೆ.14ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೊನೆಗೊಳ್ಳುವುದು ಶತ:ಸಿದ್ಧ. ಫೆ.14ರಿಂದ ತಮ್ಮ ಅಮರಣಾಂತ ಉಪವಾಸ ಸತ್ಯಾಗ್ರಹವೂ ನಡೆಯುವುದು ಎಂದು ಅವರು ಸ್ಪಷ್ಟಪಡಿಸಿದರು. 

Similar News