ಶಿಕ್ಷಣದ ಮೌಲ್ಯ ಕೆಡಿಸುವುದಕ್ಕೆ ಒಂದು ದುಂಡು ಮೇಜು!

Update: 2023-01-12 03:42 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಶಿಕ್ಷಣ ತಜ್ಞರೇ ಅಲ್ಲದ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರೆಂದು ಗುರುತಿಸಲ್ಪಟ್ಟ ರೋಹಿತ್ ಚಕ್ರತೀರ್ಥ ಮತ್ತು ಆತನ ಬಳಗದಿಂದ ಪಠ್ಯ ಪುಸ್ತಕಗಳನ್ನು 'ವಿರೂಪಗೊಳಿಸಿ' ಈಗಾಗಲೇ ಸಾಕಷ್ಟು ಆಕ್ರೋಶಗಳನ್ನು ಎದುರಿಸುತ್ತಿರುವ ರಾಜ್ಯ ಸಚಿವ ಬಿ.ಸಿ.ನಾಗೇಶ್ ಅವರಿಗೆ ಇಷ್ಟರಲ್ಲೇ ಸಮಾಧಾನವಾದದಂತಿಲ್ಲ. ತನ್ನ ಅಧಿಕಾರಾವಧಿಯಲ್ಲೇ ಇಡೀ ಶಿಕ್ಷಣ ವ್ಯವಸ್ಥೆಯನ್ನು ಅವರುಕುಲಗೆಡಿಸಲು ಪಣ ತೊಟ್ಟಂತಿದೆ. ಅದರ ಭಾಗವಾಗಿಯೇ ಇತ್ತೀಚೆಗೆ ವಿಧಾನಸೌಧ ಸಭಾಂಗಣದಲ್ಲಿ ಬಹುತೇಕ ಮಠಾಧೀಶರನ್ನೇ ಒಳಗೊಂಡ ದುಂಡುಮೇಜಿನ ಸಮಾಲೋಚನಾ ಸಭೆಯೊಂದನ್ನು ಸಚಿವ ಬಿ.ಸಿ.ನಾಗೇಶ್ ಹಮ್ಮಿಕೊಂಡಿದ್ದರು. ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣವನ್ನು ಅನುಷ್ಠಾನಗೊಳಿಸುವುದು ಈ ದುಂಡು ಮೇಜಿನ ಸಮಾಲೋಚನೆಯ ಉದ್ದೇಶವಾಗಿತ್ತಂತೆ. ಶಿಕ್ಷಣ ತಜ್ಞರು, ಹಿರಿಯ ಚಿಂತಕರು, ಬರಹಗಾರರು, ಮಾನಸಿಕ ತಜ್ಞರು ಮೊದಲಾದವರ ಸಲಹೆಗಳನ್ನು ಪಡೆದುಕೊಂಡು ಈವರೆಗೆ ಶಿಕ್ಷಣದಲ್ಲಿ ಸುಧಾರಣೆ ತರಲಾಗುತ್ತಿದ್ದರೆ, ಇದೀಗ ಮೊದಲ ಬಾರಿ, ಖಾವಿ ಸನ್ಯಾಸಿಗಳ ಸಲಹೆ ಪಡೆದು ಶಿಕ್ಷಣದಲ್ಲಿ ಸುಧಾರಣೆ ನಡೆಸುವುದಕ್ಕೆ ಸರಕಾರ ಮುಂದಾಗಿದೆ.

ಇತ್ತೀಚೆಗೆ ಹಿರಿಯ ಸ್ವಾಮೀಜಿಯೊಬ್ಬರು ಎಳೆಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಪೊಕ್ಸೊ ಕಾಯ್ದೆಯಡಿ ಬಂಧಿತರಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಒಂದು ವೇಳೆ ಈ ಪ್ರಕರಣ ಬೆಳಕಿಗೆ ಬರದೇ ಇದ್ದಿದ್ದರೆ, ಈ ಸ್ವಾಮೀಜಿಯೂ ಈ ದುಂಡು ಮೇಜು ಸಮಾವೇಶದಲ್ಲಿ ಭಾಗವಹಿಸುತ್ತಿದ್ದರು. ಅವರೂ ಮೌಲ್ಯಯುತ ಶಿಕ್ಷಣದ ಬಗ್ಗೆ ಸರಕಾರಕ್ಕೆ ಸಲಹೆಗಳನ್ನು ನೀಡುತ್ತಿದ್ದರು. ಈಗಾಗಲೇ ಹತ್ತು ಹಲವು ಮಠಾಧೀಶರು ತಮ್ಮ ಭಕ್ತೆಯರ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿರುವ, ಅವರೊಂದಿಗೆ ಅನೈತಿಕವಾಗಿ ವರ್ತಿಸಿರುವ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರಲ್ಲಿ ಒಂದಿಬ್ಬರು ಈ ದುಂಡು ಮೇಲಿನ ಸಭೆಯಲ್ಲಿ ಭಾಗವಹಿಸಿದ್ದರು. ಹಾಗೆಂದು ಎಲ್ಲ ಸ್ವಾಮೀಜಿಗಳು ಇಂತಹ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಅರ್ಥವಲ್ಲ. ಆದರೆ ಇಂದು ನಮ್ಮ ಶಿಕ್ಷಣ ವ್ಯವಸ್ಥೆಗೆ ಮೌಲ್ಯದ ಕುರಿತಂತೆ ಸಲಹೆ ನೀಡಿರುವ ಯಾವುದೇ ಒಬ್ಬ ಸ್ವಾಮೀಜಿ ನಾಳೆ ಅನೈತಿಕ ಕೃತ್ಯದ ಆರೋಪಗಳನ್ನು ಎದುರಿಸಬಾರದೆಂದೂ ಇಲ್ಲ. ಯಾಕೆಂದರೆ, ಮುರುಘಾ ಮಠದ ಸ್ವಾಮೀಜಿಗಳು ನಾಡಿನಾದ್ಯಂತ ಪ್ರಗತಿಪರ ಸ್ವಾಮೀಜಿಗಳಾಗಿ ಗುರುತಿಸಿ ಸಮಾಜದ ಹತ್ತು ಹಲವು ಗಣ್ಯರಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ನೀಡುತ್ತಾ ಬಂದವರು. ಆ ಪ್ರಶಸ್ತಿಯನ್ನು ಪಡೆದ ಹಿರಿಯ ಪತ್ರಕರ್ತರು ನಾಚಿಕೊಂಡು ಅದನ್ನು ಮರಳಿಸುವ ಸ್ಥಿತಿ ನಿರ್ಮಾಣವಾಯಿತು. ಮಠಗಳನ್ನು, ಮತಧರ್ಮಗಳನ್ನು, ಅದರೊಳಗಿನ ರಾಜಕೀಯಗಳನ್ನು ಶಿಕ್ಷಣ ವ್ಯವಸ್ಥೆಯಿಂದ ದೂರವಿಡುವುದೇ ಶಿಕ್ಷಣವನ್ನು ವೌಲ್ಯಯುತಗೊಳಿಸುವುದಕ್ಕಿರುವ ಅತ್ಯುತ್ತಮ ದಾರಿ. ಆದರೆ ಅದೇ ಮಠಾಧೀಶರನ್ನು ರಾಜಹಾಸು ಹಾಕಿ ಶಿಕ್ಷಣ ಸಚಿವರು ಶಿಕ್ಷಣ ಕ್ಷೇತ್ರವನ್ನು ಅಪವೌಲ್ಯಗೊಳಿಸುವುದಕ್ಕೆ ಮುಂದಾಗಿದ್ದಾರೆ.

 ಇಷ್ಟಕ್ಕೂ ಈ ಸಮಾಲೋಚನಾ ಸಭೆಯಲ್ಲಿ ಮಠಾಧೀಶರಲ್ಲಿ ಕೆಲವರು ನೀಡಿದ ಸಲಹೆಯಾದರೂ ಶಿಕ್ಷಣಕ್ಕೆ ಪೂರಕವಾಗಿದೆಯೆ? ಎಂದರೆ ಅದೂ ಇಲ್ಲ. ಸ್ವಾಮೀಜಿಯೊಬ್ಬರು ಮಾತನಾಡುತ್ತಾ ''ಶಾಲೆಯಲ್ಲಿ ಮಕ್ಕಳಿಗೆ ಸಾತ್ವಿಕ ಆಹಾರವನ್ನು ನೀಡಬೇಕು'' ಎಂದು ಸಲಹೆ ನೀಡುತ್ತಾರೆ. ಇದಕ್ಕೂ ಶಿಕ್ಷಣಕ್ಕೂ ಎತ್ತಣಿಂದೆತ್ತ ಸಂಬಂಧ? ವಿಶ್ವದಲ್ಲಿ 'ಸತ್ವಯುತ ಆಹಾರ' ಅಸ್ತಿತ್ವದಲ್ಲಿದೆಯೇ ಹೊರತು 'ಸಾತ್ವಿಕ ಆಹಾರ'ವೆನ್ನುವುದು ಅಸ್ತಿತ್ವದಲ್ಲಿಲ್ಲ. ಶಾಲೆಯ ಮಕ್ಕಳಿಗೆ ಹೆಚ್ಚು ಪೌಷ್ಟಿಕಾಂಶವಿರುವ, ಸತ್ವಯುತ ಆಹಾರವನ್ನು ನೀಡಿ ಎನ್ನುವುದು ಸ್ವಾಮೀಜಿಯೊಬ್ಬರು ಮಕ್ಕಳ ಮೇಲಿನ ಕಳಕಳಿಯಿಂದ ಆಡಬೇಕಾದ ಮಾತು. ಇದರಿಂದ ಬಡವರ ಮಕ್ಕಳು ಇನ್ನಷ್ಟು ಆಸಕ್ತಿಯಿಂದ ಶಾಲೆಯ ಕಡೆಗೆ ಹೊರಳುವುದಕ್ಕೆ ಸಾಧ್ಯವಾಗುತ್ತದೆ. 'ಸಾತ್ವಿಕ ಆಹಾರವನ್ನು ನೀಡಿ' ಎಂದು ಸಲಹೆ ನೀಡುವ ಮೂಲಕ ಸ್ವಾಮೀಜಿಗಳು ಪರೋಕ್ಷವಾಗಿ ಮೊಟ್ಟೆಯಂತಹ ಪೌಷ್ಟಿಕ ಆಹಾರವನ್ನು ನೀಡಬೇಡಿ ಎನ್ನುವ ಸೂಚನೆಯನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮಾಂಸಾಹಾರವನ್ನು ತಾಮಸ ಆಹಾರವೆಂದು ಅವರು ನಿಂದಿಸಿ ಬಹುಸಂಖ್ಯಾತ ಮಾಂಸಾಹಾರಿಗಳ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಾರೆ.

ಮಾಂಸಾಹಾರಿಗಳನ್ನು ತಾಮಸಿಗಳೆಂದು, ಸಸ್ಯಾಹಾರಿಗಳನ್ನು ಸಾತ್ವಿಕರೆಂದು ವಿಂಗಡಿಸಿದ್ದಾರೆ. ಶತಶತಮಾನಗಳಿಂದ ದಲಿತರು ಮತ್ತು ಶೂದ್ರರು ಮಾಂಸಾಹಾರವನ್ನು ಸೇವಿಸುತ್ತಾ ಬಂದಿದ್ದಾರೆ. ಆದರೆ ಅವರ ಮೇಲೆ ಬರ್ಬರವಾದ ದೌರ್ಜನ್ಯಗಳನ್ನು ಎಸುಗುತ್ತಾ ಬಂದವರು, ಆ ಸಮುದಾಯವನ್ನು ಶೋಷಿಸುತ್ತಾ ಬಂದವರು ಸಸ್ಯಾಹಾರಿಗಳು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಈಳವ ಹೆಣ್ಣು ಮಕ್ಕಳಿಗೆ ರವಿಕೆ ಧರಿಸಬಾರದು ಎಂದು ಆದೇಶಿಸಿದವರು, ದಲಿತರನ್ನು ದೇವಸ್ಥಾನಗಳಿಗೆ ಕಾಲಿಡದಂತೆ ನೋಡಿಕೊಂಡವರು, ಕೆರೆಯ ನೀರನ್ನು ಕೆಳಜಾತಿಯವರು ಮುಟ್ಟದಂತೆ ತಡೆದು ಕ್ರೌರ್ಯವನ್ನು ಮೆರೆದವರು ಮಾಂಸಾಹಾರಿಗಳಾಗಿರಲಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆ ಸಸ್ಯಾಹಾರಿಯಾಗಿದ್ದ. ಮಹಿಳೆಯರ ಮೇಲೆ ಬರ್ಬರ ಅತ್ಯಾಚಾರವೆಸಗಿ ಜೈಲು ಕಂಬಿ ಎಣಿಸುತ್ತಿರುವ ದೇಶದ ಹಲವು ಸ್ವಾಮೀಜಿಗಳು ಸಸ್ಯಾಹಾರಿಗಳಾಗಿದ್ದಾರೆ. ಹಾಗೆಂದು ಮಕ್ಕಳಿಗೆ ಸಸ್ಯಾಹಾರ ನೀಡಬೇಡಿ, ಅದು ಅವರನ್ನು ತಾಮಸಗುಣವನ್ನು ಬೆಳೆಸುತ್ತದೆ ಎಂದು ಹೇಳುವುದಕ್ಕೆ ಸಾಧ್ಯವೆ?

ಇನ್ನೊಬ್ಬ ಧಾರ್ಮಿಕ ಮುಖಂಡರು ''ಶಿಕ್ಷಕರಿಗೆ ಪುನರ್ಜನ್ಮದ ಬಗ್ಗೆ ಮಾಹಿತಿ ನೀಡಬೇಕು'' ಎಂದು ಸಲಹೆ ನೀಡಿದ್ದಾರೆ. ಮಗದೊಬ್ಬರು 'ಭಗವದ್ಗೀತೆ ಅಳವಡಿಸಬೇಕು' ಎಂದು ಸೂಚನೆ ನೀಡಿದ್ದಾರೆ. ವರ್ಣಾಶ್ರಮ ವ್ಯವಸ್ಥೆಯನ್ನು ಬೆಂಬಲಿಸುವ ಭಗವದ್ಗೀತೆಯನ್ನು ಬೋಧಿಸಲು ಸಲಹೆ ನೀಡುವುದು, ತಮ್ಮ ತಮ್ಮ ಕರ್ಮದಿಂದ ಪುನರ್ಜನ್ಮ ಪಡೆಯುತ್ತಾರೆ ಎನ್ನುವ ನಂಬಿಕೆಗಳನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬಲು ಪ್ರೋತ್ಸಾಹಿಸುವುದರ ಹಿಂದೆ, ಜಾತಿ ವ್ಯವಸ್ಥೆಯನ್ನು ಸಮರ್ಥಿಸುವ, ಪೋಷಿಸುವ ಹುನ್ನಾರವಿದೆ. ಶಿಕ್ಷಣವೆನ್ನುವುದು ಎಲ್ಲ ಬಗೆಯ ಗುಲಾಮಗಿರಿಯಿಂದ ಬಿಡುಗಡೆ ಮಾಡಬೇಕು. ಈ ಸ್ವಾಮೀಜಿಗಳು ಮತ್ತೆ ವಿದ್ಯಾರ್ಥಿಗಳನ್ನು ಗುಲಾಮತನಕ್ಕೆ ತಳ್ಳುವ ದಾರಿಯೊಂದನ್ನು ಸರಕಾರಕ್ಕೆ ತಿಳಿಸಿಕೊಟ್ಟಿದ್ದಾರೆ.

ಸಂವಿಧಾನದ ಆಶಯಗಳನ್ನು ಶಿಕ್ಷಣದಲ್ಲಿ ಅಳವಡಿಸಿ, ಜಾತೀಯತೆ, ಕೋಮುವಾದ, ಮೂಲಭೂತವಾದಂತಹ ವೈರಸ್‌ಗಳಿಂದ ವಿದ್ಯಾರ್ಥಿಗಳನ್ನು ಪಾರು ಮಾಡುವುದು ಇಂದಿನ ಅಗತ್ಯವಾಗಿದೆ. ಇದೇ ಸಂದರ್ಭದಲ್ಲಿ ಸರಕಾರಿ ಶಾಲೆಗಳ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಿ ಅವುಗಳನ್ನು ಇನ್ನಷ್ಟು ಆಧುನೀಕರಣಗೊಳಿಸುವ ಕಡೆಗೆ ಸರಕಾರ ಗಮನ ನೀಡಬೇಕು. ಬಡ ವಿದ್ಯಾರ್ಥಿಗಳು ಶಾಲೆಯ ಕಡೆಗೆ ಮುಖ ಮಾಡುವುದಕ್ಕಾಗಿ ಪೌಷ್ಟಿಕ ಆಹಾರಗಳನ್ನು ಶಾಲೆಗಳಲ್ಲಿ ಒದಗಿಸುವುದಕ್ಕೆ ಬೇಕಾದ ಆರ್ಥಿಕ ಸವಲತ್ತುಗಳನ್ನು ನೀಡಬೇಕು. ವಿಜ್ಞಾನ ತಂತ್ರಜ್ಞಾನಗಳ ಜೊತೆ ಜೊತೆಗೆ ಸ್ವಾಮಿ ವಿವೇಕಾನಂದ, ನಾರಾಯಣಗುರುವಿನಂತಹ ಸಾಮಾಜಿಕ ಸುಧಾರಣಾವಾದಿಗಳು ಹರಡಿ ಹೋದ ಮಾನವೀಯ ಚಿಂತನೆಗಳನ್ನು ಶಿಕ್ಷಣದಲ್ಲಿ ಅಳವಡಿಸಿದರೆ ಸಾಕು. ಎಲ್ಲಕ್ಕಿಂತ ಮುಖ್ಯವಾಗಿ ರಾಜಕಾರಣಿಗಳು ತಮ್ಮ ರಾಜಕೀಯ ಅಜೆಂಡಾಗಳನ್ನು ಶಿಕ್ಷಣ ಕ್ಷೇತ್ರದಿಂದ ದೂರ ಇಟ್ಟರೆ ಶಿಕ್ಷಣಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದಂತೆ.

Similar News