ಬೆಂಗಳೂರು: ಜ.18ರಿಂದ 5 ದಿನಗಳ ಕಾಲ ಸಿಐಟಿಯು ರಾಷ್ಟ್ರೀಯ ಸಮ್ಮೇಳನ; ಚೆಗೆವಾರ ಪುತ್ರಿ ಆಲಿಡಾ ಗೆವಾರ ಆಗಮನ

Update: 2023-01-12 12:28 GMT

ಬೆಂಗಳೂರು, ಜ. 12: ರಾಜ್ಯದ ಕಾರ್ಮಿಕರ ಹಾಗೂ ಅಸಂಘಟಿತ ನೌಕರರ ಪರವಾಗಿ ಹೋರಾಟ ಮಾಡುತ್ತಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್(ಸಿಐಟಿಯು) ಸಂಘಟನೆಯು ಜ.18ರಿಂದ ಜ.22ರ ವರೆಗೆ ಅಖಿಲ ಭಾರತ 17ನೆ ಸಮ್ಮೇಳನವನ್ನು ನಗರದ ಅರಮನೆ ಮೈದಾನದಲ್ಲಿ ಅಯೋಜಿಸಿದೆ ಎಂದು ಸಂಘಟನೆಯ ಅಧ್ಯಕ್ಷೆ ವರಲಕ್ಷ್ಮಿ ತಿಳಿಸಿದ್ದಾರೆ. 

ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜ.18ರಂದು ಸಮಾವೇಶವು ಉದ್ಘಾಟನೆ ಆಗಲಿದ್ದು, 1500 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಲ್ರ್ಡ್ ಫೆಡರೇಷನ್ ಆಫ್‍ಟ್ರೇಡ್ ಯೂನಿಯನ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಂಬಿಸ್ ಕೀರ್ತಿಸಿಸ್ ಸಮ್ಮೇಳನಕ್ಕೆ ಶುಭ ಕೋರಲಿದ್ದಾರೆ. ಜ.19ರಂದು ಕ್ಯೂಬಾ ಕ್ರಾಂತಿಯ ನಾಯಕ ಚೆ ಗೆವಾರ ಅವರ ಪುತ್ರಿ ಆಲಿಡಾ ಗೆವಾರ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಜ.21ರಂದು ಒಟ್ಟು ಪ್ರತಿನಿಧಿಗಳನ್ನು ನಾಲ್ಕು ವಿಶೇಷ ಆಯೋಗಳನ್ನಾಗಿ ವಿಂಗಡಿಸಲಾಗುವುದು. ಆಧುನಿಕ ತಯಾರಿಕಾ ವಲಯದ ಕಾರ್ಮಿಕರನ್ನು ಸಂಘಟಿಸುವುದರ ಬಗ್ಗೆ, ವಲಸೆ ಕಾರ್ಮಿಕರ ಪರಿಸ್ಥಿತಿ ಬಗ್ಗೆ, ಬದಲಾಗುತ್ತಿರುವ ಉದ್ಯೋಗ ಸ್ವರೂಪಗಳ ಬಗ್ಗೆ ಮತ್ತು ಕಾರ್ಮಿಕರ ಐಕ್ಯತೆಯ ಬಗ್ಗೆ ಈ ವಿಶೇಷ ಆಯೋಗಗಳು ಚರ್ಚೆ ಮಾಡಿ ನಿರ್ಣಯಗಳನ್ನು ರೂಪಿಸುತ್ತವೆ ಎಂದು ಮಾಹಿತಿ ನೀಡಿದರು.

ಸಮಾವೇಶಕ್ಕೆ ಪೂರಕವಾಗಿ ಜ.22ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಮಿಕರ ಬಹಿರಂಗ ಸಭೆಯನ್ನು ಆಯೋಜಿಸಿಲಾಗಿದೆ. ಸಮ್ಮೇಳನ ನಡೆಯುವ ದಿನಗಳಂದು ರಾಜ್ಯದೆಲ್ಲಡೆ ವಿಚಾರ ಸಂಕಿರಣ, ಕ್ರೀಡೆ, ಸಾಂಸ್ಕøತಿಕ ಜಾಥಗಳನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.

ಮೋದಿ ಸರಕಾರವು ಬಂಡವಾಳಶಾಹಿಗಳಿಗೆ ಉಪಯುಕ್ತ ಆಗುವಂತೆ 29 ಕಾನೂನುಗಳನ್ನು ತಿದ್ದುಪಡಿ ಮಾಡಿ 4 ಸಂಹಿತೆಗಳನ್ನಾಗಿ ರೂಪಿಸಿದೆ. ಇವು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಂಡಿವೆ. ಕನಿಷ್ಠ ವೇತವನ್ನು ನೀಡದೆ, ಗರಿಷ್ಠ ದುಡಿಮೆ ಮಾಡಿಸಿಕೊಂಡು ಕಂಪೆನಿಗಳು ಲೂಟಿ ಮಾಡುತ್ತಿವೆ. ಇದರಿಂದ ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಪತ್ತು ಕೇಂದ್ರಿಕೃತ ಆಗುತ್ತದೆ ಎಂದು ಅವರು ಹೇಳಿದರು.

ಕೊರೊನಾ ಸಂದರ್ಭದಲ್ಲಿ ಸರಕಾರವು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಜನರಿಗೆ ಸರಿಯಾಗಿ ಚಿಕಿತ್ಸೆಯನ್ನು ಪಡೆಯದೆ ಸಾವನ್ನಪ್ಪಿದ್ದಾರೆ. ದೇಶ ಬೀಕರ ಪರಿಸ್ಥಿತಿಯನ್ನು ಅನುಭವಿಸಿದೆ. ಆದರೆ ಸರಕಾರ ಮಾತ್ರ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಬಂಡವಾಳಶಾಹಿಗಳ ಕೈಗೆ ಒಪ್ಪಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಬಡತನ ಅಪೌಷ್ಠಿಕತೆಯಿಂದ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಸರಕಾರ ಯಾವುದೇ ಪರಿಹಾರಗಳನ್ನು ಹುಡುಕದೆ ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಅಲ್ಲದೆ, ಬಿಜೆಪಿ ನಾಯಕರು ರಸ್ತೆ, ಚರಂಡಿ ಬಗ್ಗೆ ಮಾತನಾಡಬೇಡಿ, ಲವ್ ಜಹಾದ್ ಬಗ್ಗೆ ಮಾತನಾಡಿ ಎಂದು ಹೇಳಿ ಜನರಲ್ಲಿ ಕೋಮುದ್ವೇಷ ಉಂಟಾಗುವಂತೆ ಪ್ರೇರೆಪಿಸುತ್ತಿದ್ದಾರೆ ಎಂದುಅವರು ಕಳವಳ ವ್ಯಕ್ತಪಡಿಸಿದರು. ಗೋಷ್ಟಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಉಪಸ್ಥಿತರಿದ್ದರು.

Similar News