ಉಡುಪಿ ನಗರಸಭೆಯಿಂದ ಇ-ತ್ಯಾಜ್ಯವಿಲೇವಾರಿಗೆ ಒಪ್ಪಂದ: ಸುಮಿತ್ರಾ ನಾಯಕ್

Update: 2023-01-13 15:34 GMT

ಉಡುಪಿ: ಉಡುಪಿ ನಗರಸಭೆಯಿಂದ ಸಂಗ್ರಹಿಸಲಾಗುವ ಇ- ವೇಸ್ಟ್(ಇಲೆಕ್ಟ್ರಾನಿಕ್ ತ್ಯಾಜ್ಯ)ನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ನಗರಸಭೆಯು ಲಯನ್ಸ್ ಅಂತಾರಾಷ್ಟ್ರೀಯ ಮಣಿಪಾಲ್ ಲಯನ್ಸ್ ಚಾರಿ ಟೇಬಲ್ ಫೌಂಡೇಶನ್ ಜೊತೆ 4-ಆರ್ ರಿಸೈಕಲಿಂಗ್ ಇ-ವೇಸ್ಟ್‌ನೊಂದಿಗೆ ಒಡಬಂಡಿಕೆ ಮಾಡಿಕೊಂಡಿದೆಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ತಿಳಿಸಿದ್ದಾರೆ.

ಉಡುಪಿ ನಗರಸಭೆಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯಿಂದ ಪ್ರತಿ ತಿಂಗಳ ಎರಡನೇ ಶನಿವಾರದಂದು ಗ್ಲಾಸ್ ಹಾಗೂ ಇ ವೇಸ್ಟ್‌ಗಳನ್ನು ಸಂಗ್ರಹಿಸಲಾಗುತ್ತದೆ. ಪ್ರತಿ ತಿಂಗಳು 15.5ರಿಂದ 18.5 ಟನ್‌ಗಳಷ್ಟು ಈ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಗ್ಲಾಸ್ ವೇಸ್ಟ್‌ಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಆದರೆ ಇ-ತ್ಯಾಜ್ಯವನ್ನು ವಿಲೇ ವಾರಿ ಮಾಡಲು ಆಗುತ್ತಿರಲಿಲ್ಲ ಎಂದರು.

ಎಲ್‌ಸಿಡಿ, ಎಲ್‌ಇಡಿ, ಟಿವಿ, ಹೋಮ್ ಅಪ್ಲೇಯನಸ್, ಮಿಕ್ಸಿ, ಗ್ರೈಂಡರ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಮೈಕ್ರೋ ಒವನ್, ಐರನ್ ಬಾಕ್ಸ್, ಸ್ಪೀಕರ್ ಸೇರಿದಂತೆ ಎಲ್ಲ ರೀತಿಯ ಇ-ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇ ವಾರಿ ಮಾಡದಿದ್ದರೆ ಇ ತ್ಯಾಜ್ಯದಲ್ಲಿರುವ ಸೀಸ, ಪಾದರಸ, ಆರ್ಸೆನಿಕ್ ಕ್ಯಾಡ್ಮಿ ಯಂತಹ ರಾಸಾಯನಿಕ ವಸ್ತುಗಳು ಪರಿಸರಕ್ಕೆ ಸಾಕಷ್ಟು ಹಾನಿಯುಂಟು ಮಾಡು ತ್ತದೆ. ಎಲ್ಲೆಂದರಲ್ಲಿ ಎಸೆಯುವುದರಿಂದ ಜಲಮಾಲಿನ್ಯ, ಸುಡುವುದರಿಂದ ವಾಯು ಮಾಲಿನ್ಯ ಉಂಟು ಮಾಡಿ ಮಾರಣಾಂತಿಕ ರೋಗಗಳಿಗೆ ಕಾರಣ ವಾಗುತ್ತದೆ. ಈ ನಿಟ್ಟಿನಲ್ಲಿ ಈ ಒಡಬಂಡಿಕೆ ಮಾಡಿಕೊಂಡು ಇ ತ್ಯಾಜ್ಯವನ್ನು ವಿಲೇವಾರಿ ಮಾಡಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

ನಗರಸಭೆಯ ಬನ್ನಂಜೆ ಒಣ ಮತ್ತು ಇಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹ ಘಟಕದಲ್ಲಿ, ಬೀಡಿನಗುಡ್ಡೆ ಒಣ ಹಾಗೂ ಇಲೆಕ್ಟ್ರೀನಿಕ್ಸ್ ತ್ಯಾಜ್ಯ ಸಂಗ್ರಹಣ ಘಟಕದಲ್ಲಿ, ಅಲೆವೂರು ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ, ಮಣಿಪಾಲ ಉಪ ಕಚೇರಿಯಲ್ಲಿ ಹಾಗೂ ಮಲ್ಪೆ ಬೀಚ್‌ನ ಒಣ ಹಾಗೂ ಇಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹಣ ಘಟಕಗಳಲ್ಲಿ ಬೆಳಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯವರೆಗೆ ಹಾಗೂ ಪ್ರತಿ ತಿಂಗಳ ಎರಡನೇ ಶನಿವಾರದಂದು ಮನೆ ಮನೆ ಕಸ ಸಂಗ್ರಹಣೆಯ ವಾಹನಗಳಲ್ಲಿ ಸಂಗ್ರಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಕೊಡವೂರು, ಲಯನ್ಸ್ ಜಿಲ್ಲಾ ಗವರ್ನರ್ ಡಾ.ಎಂ.ಕೆ. ಭಟ್, ಡಾ.ಗಣೇಶ್ ಪೈ, ಸುರೇಶ್ ಪ್ರಭು, ವಾದಿರಾಜ ರಾವ್ ಉಪಸ್ಥಿತರಿದ್ದರು.

ಫೆಬ್ರವರಿಯಲ್ಲಿ ಎಂಆರ್‌ಎಫ್ ಘಟಕ ಉದ್ಘಾಟನೆ
ನಗರಸಭೆಯಿಂದ ಕರ್ವಾಲುವಿನಲ್ಲಿ ಸ್ಥಾಪಿಸಲಾದ ಎಂಆರ್‌ಎಫ್ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದ ಕಾಮಗಾರಿ ನಡೆಯುತ್ತಿದೆ. ಫೆಬ್ರವರಿ ಅಂತ್ಯದಲ್ಲಿ ಇತರ ಉದ್ಘಾಟನೆ ನಡೆಯಲಿದೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ತಿಳಿಸಿದರು.

ಉಡುಪಿ ನಗರಸಭೆಯಿಂದ ಸದ್ಯ ಪ್ರತಿದಿನ 71.5ಟನ್ ಪ್ರಮಾಣದಲ್ಲಿ ಘನ ತ್ಯಾಜ್ಯ ಸಂಗ್ರಹವಾಗುತ್ತದೆ. ಸದ್ಯ ಆ ಎಲ್ಲ ತ್ಯಾಜ್ಯ ವಿಲೇವಾರಿ ಆಗುತ್ತಿರಲಿಲ್ಲ. ಎಂಆರ್‌ಎಫ್ ಘಟಕ ಸ್ಥಾಪನೆ ಆದ ನಂತರ ಈ ಎಲ್ಲ ತ್ಯಾಜ್ಯ ವಿಲೇವಾರಿ ಆಗುತ್ತದೆ ಎಂದ ಅವರು, ಹಸಿ ಕಸವನ್ನು ಗೊಬ್ಬರ ಮಾಡುವ ಯಂತ್ರ ಸ್ಥಾಪಿಸಲು ಶೆಡ್ ಕೂಡಸ ನಿರ್ಮಿಸಲಾಗುತ್ತಿದೆ. ನಮ್ಮಲ್ಲಿನ ಎಲ್ಲ ತ್ಯಾಜ್ಯಗಳಿಗೂ ಬೇಡಿಕೆ ಇದೆ. ಆದರೆ ಚಪ್ಪಳಿ ಮತ್ತು ಬಟ್ಟೆಗಳಿಗೆ ಯಾವುದೇ ಬೇಡಿಕೆ ಇಲ್ಲ ಎಂದರು.

Similar News