ಮೋದಿ, ಅಮಿತ್ ಶಾ ರಾಜ್ಯಕ್ಕೆ ನೂರು ಬಾರಿ ಭೇಟಿ ನೀಡಿದರೂ ಬಿಜೆಪಿ ಮತ್ತೆ ಅಧಿಕಾರಕ್ಕೇರದು: ಕುಮಾರಸ್ವಾಮಿ

Update: 2023-01-14 10:41 GMT

ಬೆಂಗಳೂರು, ಜ.14: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ರಾಜ್ಯಕ್ಕೆ ನೂರು ಬಾರಿ ಭೇಟಿ ನೀಡಿದರೂ, ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಆಯೋಜಿಸಿದ್ದ, ಮಾಧ್ಯಮ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗರ ನಡವಳಿಕೆಯಿಂದ ಜನ ಬೇಸತ್ತು‌ ಹೋಗಿದ್ದಾರೆ. ಕಾಂಗ್ರೆಸ್, ಬಿಜೆಪಿ ಜೊತೆ ಅತಂತ್ರ ಸರಕಾರ ಮಾಡಿದರೆ ಈ ಯಾವ ಯೋಜನೆಯನ್ನೂ ಜಾರಿ ಮಾಡೋಕೆ ಆಗಲ್ಲ. ಹೀಗಾಗಿ ರಾಜ್ಯದ ಜನರು ಜೆಡಿಎಸ್ ಗೆ ಸಂಪೂರ್ಣ ಬೆಂಬಲ ನೀಡಬೇಕು. ಐದು ವರ್ಷದ ಪೂರ್ಣ ಬಹುಮತದ ಆಡಳಿತ ಬರುವಂತೆ ಮಾಡಿದರೆ ಎಲ್ಲಾ ಯೋಜನೆಗಳು ಜಾರಿಯಾಗುತ್ತವೆ. ಇಲ್ಲವೆಂದರೆ, ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡಿ ಮನೆಯಲ್ಲಿ ಕೂರುತ್ತೇನೆ ಎಂದು ತಿಳಿಸಿದರು.

ಮಂಡ್ಯಕ್ಕೆ ಅಮಿತ್ ಶಾ ಬಂದು ಹೋಗಿರೋದು ಪರಿಣಾಮ ಬೀರಲ್ಲ. ಬೇಕಿದ್ದರೆ, ಬರದಿಟ್ಟುಕೊಳ್ಳಿ, ಮಂಡ್ಯದಲ್ಲಿ ಏಳಕ್ಕೆ ಏಳು ಕ್ಷೇತ್ರ ಮತ್ತೆ ಈ ಬಾರಿ ಜೆಡಿಎಸ್ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಂಚರತ್ನ ಕಾರ್ಯಕ್ರಮ ಜನರ ಬವಣೆಗಳನ್ನು ಅರಿಯಲು ಸಹಕಾರಿ ಆಗಿದೆ. ಬಡವರ ನಿರೀಕ್ಷೆ ಏನಿದೆ ಎಂದು ಈ ಯಾತ್ರೆ ಮೂಲಕ ಗೊತ್ತಾಗುತ್ತಿದೆ. ದೇಶ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದೆ. ಇದೇ ವೇಳೆ ದೇಶ ಬೆಳಯುವ ವೇಗಕ್ಕಿಂತ ವೇಗವಾಗಿ ದೇಶದಲ್ಲಿ ಬಡತನ ಬೆಳೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲವ್ ಜಿಹಾದ್: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕ್ಷುಲ್ಲಕ ಹೇಳಿಕೆ ನೀಡಿದ್ದಾರೆ. ರಸ್ತೆ ಗುಂಡಿ, ಡ್ರೈನೇಜ್ ಎಂದು ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ. ಲವ್ ಜಿಹಾದ್ ಬಗ್ಗೆ ಮಾತನಾಡಿ, ಹೋರಾಟ ಮಾಡಿ ಎಂದು ಕರೆ ಕೊಟ್ಟಿದ್ದಾರೆ. ಆದರೆ, ಲವ್ ಜಿಹಾದ್ ಹೆಸರಲ್ಲಿ ರಾಜ್ಯದ ನೆಮ್ಮದಿ ಕದಡುವ ಕೆಲಸ ಆಗುತ್ತಿದೆ. ಕರ್ನಾಟಕವನ್ನು ಬಿಹಾರ, ಉತ್ತರ ಪ್ರದೇಶ ಮಾಡಲು ಹೊರಟಿದ್ದಾರೆ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟವೆಂದು ಹಿರಿಯರು ಹೇಳಿದ್ದಾರೆ. ಅದನ್ನು ನಾವು ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಸೇರಿದಂತೆ ಪ್ರಮುಖರಿದ್ದರು.

Similar News