ಮಂಗಳೂರು ವಿಮಾನ ನಿಲ್ದಾಣ ಮೂಲಕ ಪ್ರಯಾಣಿಸುವವರು ಎಪ್ರಿಲ್‌ನಿಂದ ತೆರಬೇಕಿದೆ ಹೆಚ್ಚುವರಿ ಬಳಕೆದಾರರ ಶುಲ್ಕ

ಇಲ್ಲಿದೆ ಸಂಪೂರ್ಣ ಮಾಹಿತಿ

Update: 2023-01-14 11:26 GMT

ಮಂಗಳೂರು: ಎಪ್ರಿಲ್‌ ತಿಂಗಳಿನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Mangaluru International Airport (MIA)) ಮೂಲಕ ಪ್ರಯಾಣಿಸುವವರು ಹೆಚ್ಚಿನ ಬೆಲೆ ತೆರಬೇಕಾಗಿದೆ. ಅದಾನಿ ಏರ್‌ಪೋರ್ಟ್ಸ್‌ ಒಡೆತನದ ಈ ವಿಮಾನ ನಿಲ್ದಾಣದಲ್ಲಿ  ಮಾರ್ಚ್‌ 2026ರ ತನಕ ಯೂಸರ್‌ ಡೆವಲೆಪ್ಮೆಂಟ್‌ ಫೀ (ಯುಡಿಎಫ್)‌ ಅಥವಾ ಬಳಕೆದಾರರ ಶುಲ್ಕವನ್ನು  ಏರಿಸಲು ನಿರ್ಧರಿಸಲಾಗಿದೆ. ವಿಮಾನ ನಿಲ್ದಾಣಗಳ  ಆರ್ಥಿಕ ನಿಯಂತ್ರಣ ಪ್ರಾಧಿಕಾರವು ಈ ನಿಟ್ಟಿನಲ್ಲಿ ಅನುಮತಿಯನ್ನು ನೀಡಿದೆ ಎಂದು CNBC TV18 ವರದಿ ಮಾಡಿದೆ.

ಸದ್ಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಯುಡಿಎಫ್‌ ಅನ್ನು ನಿರ್ಗಮನ ಪ್ರಯಾಣಿಕರು ಮಾತ್ರ ಪಾವತಿಸುತ್ತಿದ್ದಾರೆ. ಆದರೆ ಫೆಬ್ರವರಿಯಿಂದ ಆಗಮನ ಪ್ರಯಾಣಿಕರು ಕೂಡ ಈ ಶುಲ್ಕ ಪಾವತಿಸಬೇಕಿದೆ. ಪ್ರಸ್ತುತ ದೇಶೀಯ ಪ್ರಯಾಣಿಕರಿಗೆ ವಿಧಿಸಲಾಗುವ ಶುಲ್ಕ ರೂ. 150 ಆಗಿದ್ದರೆ ಅಂತಾರಾಷ್ಟ್ರೀಯ ಪ್ರಯಾಣಿಕರು ರೂ. 825 ಪಾವತಿಸಬೇಕಿದೆ.

ಎಪ್ರಿಲ್‌ ತಿಂಗಳಿನಿಂದ ದೇಶೀಯ ನಿರ್ಗಮನ ಪ್ರಯಾಣಿಕರು ರೂ. 150 ರ ಬದಲು ರೂ. 560 ಪಾವತಿಸಬೇಕಿದೆ. ಈ ಶುಲ್ಕ ಎಪ್ರಿಲ್‌ 2024 ರಿಂದ ರೂ. 700  ಗೆ ಏರಿಕೆಯಾಗಲಿದ್ದರೆ ಎಪ್ರಿಲ್‌ 2025 ರಿಂದ ರೂ 735 ಆಗಲಿದೆ. ಅಂತೆಯೇ ಅಂತಾರಾಷ್ಟ್ರೀಯ ನಿರ್ಗಮನ ಪ್ರಯಾಣಿಕರು ಈಗ ರೂ 825 ಪಾವತಿಸುತ್ತಿದ್ದರೆ ಈ ಶುಲ್ಕ ಎಪ್ರಿಲ್‌ನಿಂದ ರೂ 1,015 ಆಗಲಿದ್ದರೆ ಎಪ್ರಿಲ್‌ 2025 ರ ನಂತರ ರೂ. 1,120 ಆಗಲಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಆಗಮನ ದೇಶೀಯ ಪ್ರಯಾಣಿಕರು ಎಪ್ರಿಲ್‌ನಿಂದ ಮೊದಲ ಬಾರಿಗೆ ರೂ. 150 ಶುಲ್ಕ ಪಾವತಿಸಲಿದ್ದು ಮಾರ್ಚ್‌ 2024ರ ನಂತರ ಅವರು ರೂ. 240 ಪಾವತಿಸಬೇಕು ಹಾಗೂ ಎಪ್ರಿಲ್‌ 2025 ರ ನಂತರ ಈ ಶುಲ್ಕ ರೂ. 315 ಆಗಲಿದೆ.

ಆಗಮನ ಅಂತಾರಾಷ್ಟ್ರೀಯ ಪ್ರಯಾಣಿಕರು ಫೆಬ್ರವರಿ ಮತ್ತು ಮಾರ್ಚ್‌ ನಡುವೆ ರೂ. 330 ಪಾವತಿಸಲಿದ್ದರೆ ನಂತರ ಮಾರ್ಚ್‌ 2024 ರವರೆಗೆ ರೂ. 435 ಪಾವತಿಸಬೇಕಿದ್ದು ಎಪ್ರಿಲ್‌ 2025 ರ ನಂತರ ಈ ಶುಲ್ಕ ರೂ. 480 ರಷ್ಟು ಏರಿಕೆಯಾಗಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಅಹ್ಮದಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ನಿರ್ದಿಷ್ಟ ಶುಲ್ಕ ಏರಿಸಲು ನವೆಂಬರ್‌ 2022 ರಲ್ಲಿಯೇ ಅದಾನಿ ಸಂಸ್ಥೆ ಮನವಿ ಮಾಡಿದ್ದರೂ ಪ್ರಾಧಿಕಾರ ಆದಕ್ಕೆ ಇನ್ನಷ್ಟೇ ಅನುಮತಿ ನೀಡಬೇಕಿದೆ.

ಅದಾನಿ ಸಂಸ್ಥೆ ದೇಶದಲ್ಲಿ ಮಂಗಳೂರು, ಅಹ್ಮದಾಬಾದ್‌ ಸಹಿತ ಮುಂಬೈ, ಲಕ್ನೋ, ಜೈಪುರ ಮತ್ತು ಗುವಾಹಟಿ ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳು ದುಬಾರಿಯಾಗಲಿವೆ ಎಂದ ಗೂಗಲ್‌: ಕಾರಣವೇನು ಗೊತ್ತೇ?

Similar News