'ಮುಸ್ಲಿಮರಿಗೆ ಸಾಮೂಹಿಕ ಶಿಕ್ಷೆ': BJP ಆಡಳಿತದ ರಾಜ್ಯಗಳಲ್ಲಿ ನೆಲಸಮ ಕಾರ್ಯಾಚರಣೆಗಳಿಗೆ ಮಾನವ ಹಕ್ಕುಗಳ ಸಂಘಟನೆ ತರಾಟೆ

Update: 2023-01-14 13:44 GMT

ಹೊಸದಿಲ್ಲಿ: ಭಾರತೀಯ ಮುಸ್ಲಿಮರು (Muslims) ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಸೇರಿದ ಮನೆಗಳನ್ನು ನೆಲಸಮಗೊಳಿಸಲು (demolish) ವಿವಿಧ ರಾಜ್ಯ ಸರಕಾರಗಳು ನಡೆಸುತ್ತಿರುವ ಕಾರ್ಯಾಚರಣೆಗಳನ್ನು ಅಮೆರಿಕ ಮೂಲದ ಜಾಗತಿಕ ಮಾನವ ಹಕ್ಕುಗಳ ಸಂಘಟನೆ ಹ್ಯೂಮನ್ ರೈಟ್ಸ್ ವಾಚ್ (HRW) ಗುರುವಾರ ಬಿಡುಗಡೆಗೊಂಡ ತನ್ನ ವಾರ್ಷಿಕ ವರದಿಯಲ್ಲಿ ತೀವ್ರ ತರಾಟೆಗೆತ್ತಿಕೊಂಡಿದೆ. ಸುಮಾರು 100 ದೇಶಗಳಲ್ಲಿಯ ಮಾನವ ಹಕ್ಕುಗಳ ಉಲ್ಲಂಘನೆಗಳು ಮತ್ತು ಕಳವಳಕಾರಿ ವಿದ್ಯಮಾನಗಳನ್ನು ವಿವರಿಸಿರುವ ವರದಿಯು, 2022ರಲ್ಲಿ ಭಾರತದಲ್ಲಿಯ ವಿವಿಧ ರಾಜ್ಯ ಸರಕಾರಗಳು ಕಡಿಮೆ ಆದಾಯ ಗುಂಪುಗಳ,ವಿಶೇಷವಾಗಿ ಮುಸ್ಲಿಮರ ವಿರುದ್ಧ ಮನೆ ನೆಲಸಮ ಅಭಿಯಾನವನ್ನು ಹೇಗೆ ಕಾನೂನೇತರ ದಂಡನೆಯಾಗಿ ಬಳಸಿಕೊಂಡವು ಎನ್ನುವುದರ ಮೇಲೆ ಪ್ರಮುಖವಾಗಿ ಗಮನವನ್ನು ಹರಿಸಿದೆ ಎಂದು thewire.in ವರದಿ ಮಾಡಿದೆ.

ನೆಲಸಮ ಕಾರ್ಯಾಚರಣೆಯು ಭಿನ್ನಮತೀಯರು ಮತ್ತು ಪ್ರತಿಭಟನಾಕಾರರ ಧ್ವನಿಯನ್ನಡಗಿಸಲು ಆಡಳಿತಗಳ ಅತಿರೇಕದ ಕ್ರಮವಾಗಿದೆ ಎಂದು ಮಾನವ ಹಕ್ಕುಗಳ ರಕ್ಷಕರು ನಿರಂತರವಾಗಿ ಟೀಕಿಸುತ್ತಿದ್ದಾರೆ. ಆದರೆ ಸರಕಾರಗಳು ಮಾತ್ರ ಅದು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಪರಿಣಾಮಕಾರಿ ಪಾಠವಾಗಿದೆ ಎಂದು ನೆಲಸಮ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ನೆಲಸಮ ಕಾರ್ಯಾಚರಣೆಯನ್ನು ‘ಶಾಂತಿಯ ಸಂಕೇತ’ ಎಂದು ಇತ್ತೀಚಿಗೆ ಸಮರ್ಥಿಸಿಕೊಂಡಿದ್ದಾರೆ. 

HRW ತನ್ನ ವರದಿಯಲ್ಲಿ ನೆಲಸಮ ಕಾರ್ಯಾಚರಣೆಗಳನ್ನು ಪ್ರಸ್ತಾಪಿಸುವುದರೊಂದಿಗೆ ಬಹುಶಃ ಇದೇ ಮೊದಲ ಬಾರಿಗೆ ಜಾಗತಿಕ ಮಾನವ ಹಕ್ಕುಗಳ ಸಂಘಟನೆಯೊಂದು ಸರಕಾರದಿಂದ ದುರ್ಬಲ ಗುಂಪುಗಳ ವಿರುದ್ಧ ಇಂತಹ ಕ್ರೂರ ಕ್ರಮದ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಭಾರತದಲ್ಲಿ ಹಿಂದು ಬಹುಸಂಖ್ಯಾತ ಸಿದ್ಧಾಂತದಿಂದ ಪ್ರೇರಿತ ಬಿಜೆಪಿ ನೇತೃತ್ವದ ರಾಜ್ಯ ಸರಕಾರಗಳಿಂದ ಮುಸ್ಲಿಮರ ವಿರುದ್ಧ ಮನೆ ನೆಲಸಮ ಕಾರ್ಯಾಚರಣೆಗಳ ಬಳಕೆ ಹೆಚ್ಚುತ್ತಿದೆ ಎಂದು HRW ಆತಂಕ ವ್ಯಕ್ತಪಡಿಸಿದೆ.
2022ರಲ್ಲಿ ರಾಜ್ಯ ಸರಕಾರಗಳು ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ಶಿಕ್ಷೆಯ ರೂಪದಲ್ಲಿ ಮನೆಗಳನ್ನು ನೆಲಸಮಗೊಳಿಸಿರುವ ಹಲವಾರು ಘಟನೆಗಳನ್ನು ವರದಿಯು ಬೆಟ್ಟು ಮಾಡಿದೆ.

ಎಪ್ರಿಲ್ ನಲ್ಲಿ ಮಧ್ಯಪ್ರದೇಶ, ಗುಜರಾತ್ ಮತ್ತು ದಿಲ್ಲಿಯಲ್ಲಿನ ಅಧಿಕಾರಿಗಳು ಕೋಮು ಘರ್ಷಣೆಗಳಿಗೆ ಉತ್ತರವಾಗಿ ಹೆಚ್ಚಾಗಿ ಮುಸ್ಲಿಮರ ಒಡೆತನದ ಆಸ್ತಿಗಳನ್ನು ನೆಲಸಮಗೊಳಿಸಿದ್ದಾರೆ. ಈ ಕಟ್ಟಡಗಳು ಅಕ್ರಮ ನಿರ್ಮಾಣಗಳಾಗಿದ್ದವು ಎಂದು ಪ್ರತಿಪಾದಿಸುವ ಮೂಲಕ ನೆಲಸಮ ಕಾರ್ಯಾಚರಣೆಗಳನ್ನು ಸಮರ್ಥಿಸಿಕೊಳ್ಳಲು ಅವರು ಪ್ರಯತ್ನಿಸಿದ್ದರಾದರೂ, ಅದು ಮುಸ್ಲಿಮರಿಗೆ ಸಾಮೂಹಿಕ ದಂಡನೆಯ ಉದ್ದೇಶವನ್ನು ಹೊಂದಿದ್ದಂತೆ ಕಂಡು ಬಂದಿದೆ ಎಂದು HRW ವರದಿಯಲ್ಲಿ ಒತ್ತಿ ಹೇಳಿದೆ.

ಇಂತಹ ಎಲ್ಲ ಕ್ರಮಗಳಲ್ಲಿ ರಾಜ್ಯ ಸರಕಾರಗಳು ಯಾವುದೇ ಕಾನೂನುಬದ್ಧ ಅಧಿಕಾರಗಳನ್ನು ಹೊಂದಿರಲಿಲ್ಲ. ಹಲವಾರು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅಧಿಕಾರಿಗಳು ಯಾವುದೇ ಕಾನೂನು ಅನುಮತಿ ಅಥವಾ ಸೂಕ್ತ ಪ್ರಕ್ರಿಯೆಯಿಲ್ಲದೆ ಪ್ರತಿಭಟನೆಗಳು ಅಥವಾ ಆರೋಪಿತ ಅಪರಾಧಗಳಿಗೆ ಕ್ಷಿಪ್ರ ಶಿಕ್ಷೆಯಾಗಿ ಮುಸ್ಲಿಮರಿಗೆ ಸೇರಿದ ಮನೆಗಳು ಮತ್ತು ಆಸ್ತಿಗಳನ್ನು ಧ್ವಂಸಗೊಳಿಸಿದ್ದರು ಎಂದು HRW ಹೇಳಿದೆ.

ಕೋಮು ಹಿಂಸಾಚಾರಗಳಲ್ಲಿ ಭಾಗಿಯಾಗಿದ್ದ ಆರೋಪಗಳಲ್ಲಿ ಮುಸ್ಲಿಂ ಸಮುದಾಯಗಳು ಮತ್ತು ಕಡಿಮೆ ಆದಾಯದ ಗುಂಪುಗಳ ವಿರುದ್ಧ ನಿರಂಕುಶ ನೆಲಸಮ ಕಾರ್ಯಾಚರಣೆಗಳ ಕುರಿತು ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿ ವಿಶ್ವಸಂಸ್ಥೆಯ ವಿಶೇಷ ವರದಿಗಾರರು ಜೂನ್ 2022ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಪತ್ರವನ್ನು ಬರೆದಿದ್ದರು ಎಂದು ವರದಿಯು ಉಲ್ಲೇಖಿಸಿದೆ.

ಜಾಗತಿಕ ಮಾನವ ಹಕ್ಕುಗಳ ಮಾನದಂಡಗಳನ್ನು ಉಲ್ಲಂಘಿಸುವಲ್ಲಿ ಚೀನಾವನ್ನು ಅನುಕರಿಸುತ್ತಿರುವುದಕ್ಕಾಗಿ ಭಾರತವನ್ನು ತನ್ನ ವರದಿಯಲ್ಲಿ ಪ್ರತ್ಯೇಕಿಸಿರುವ HRW, ಅಲ್ಪಸಂಖ್ಯಾತರ ವಿರುದ್ಧ ಆಡಳಿತ ಬಿಜೆಪಿಯಿಂದ ಹೆಚ್ಚುತ್ತಿರುವ ಬಹುಸಂಖ್ಯಾತ ಆಕ್ರಮಣವನ್ನು ವಿಶೇಷವಾಗಿ ವಿವರಿಸಿದೆ.

ಮಾನವ ಹಕ್ಕುಗಳ ಅನುಷ್ಠಾನದ ಹೊಣೆಯನ್ನು ಹೊತ್ತಿರುವ ರಾಜ್ಯ ಸಂಸ್ಥೆಗಳ ಕಾರ್ಯ ನಿರ್ವಹಣೆಯಲ್ಲಿ ಬಹುಸಂಖ್ಯಾತರ ಪರ ಪಕ್ಷಪಾತವನ್ನೂHRW ಟೀಕಿಸಿದೆ.
ಕ್ರೈಸ್ತರನ್ನು,ವಿಶೇಷವಾಗಿ ದಲಿತ ಮತ್ತು ಆದಿವಾಸಿ ಸಮುದಾಯಗಳ ಕ್ರೈಸ್ತರನ್ನು ಗುರಿಯಾಗಿಸಿಕೊಳ್ಳಲು ರಾಜ್ಯಗಳ ಅಧಿಕಾರಿಗಳು ಬಲವಂತದ ಧಾರ್ಮಿಕ ಮತಾಂತರ ನಿಷೇಧ ಕಾನೂನುಗಳನ್ನು ದುರುಪಯೋಗಿಸಿಕೊಂಡಿದ್ದಾರೆ ಎಂದು ವರದಿಯು ಬೆಟ್ಟು ಮಾಡಿದೆ.

ಇದನ್ನೂ ಓದಿ: ಪ್ರಮುಖ 5 ಐಐಟಿಗಳ 98% ಅಧ್ಯಾಪಕರು ಮೇಲ್ಜಾತಿಯವರು, ಮೀಸಲಾತಿ ಜಾರಿಯಾಗಿಲ್ಲ: ವರದಿ

Similar News