ಪ್ರಮುಖ 5 ಐಐಟಿಗಳ 98% ಅಧ್ಯಾಪಕರು ಮೇಲ್ಜಾತಿಯವರು, ಮೀಸಲಾತಿ ಜಾರಿಯಾಗಿಲ್ಲ: ವರದಿ
ಹೊಸದಿಲ್ಲಿ: ದೇಶದ ಉನ್ನತ ಶಿಕ್ಷಣ ಸಂಸ್ಥೆಯ ವಿಜ್ಞಾನ ವಿಭಾಗಗಳ ಬಹುಪಾಲು ಹುದ್ದೆಗಳು ಮೇಲ್ವರ್ಗದವರಿಗೆ (ಸಾಮಾನ್ಯ ವಿಭಾಗ) ಹೋಗಿವೆ ಎಂದು ಪತ್ರಕರ್ತ ಅಂಕುಲ್ ಪರಿವಾಲ್ ಅವರು ನೇಚರ್ ವಿಜ್ಞಾನ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಹೇಳಲಾಗಿದೆ ಎಂದು theprint.in ವರದಿ ಮಾಡಿದೆ.
ವರದಿಯ ಪ್ರಕಾರ ಭಾರತದ ಐಐಟಿ (IITs) ಹಾಗೂ ಐಐಎಸ್ಸಿಯಂತಹ (IISc) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 98 ರಷ್ಟು ಪ್ರೊಫೆಸರುಗಳು ಹಾಗೂ ಶೇ. 90 ಕ್ಕೂ ಅಧಿಕ ಸಹಾಯಕ ಪ್ರೊಫೆಸರ್ಗಳು ಮೇಲ್ವರ್ಗದವರಾಗಿದ್ದಾರೆ.
ಇನ್ಸ್ಟಿಟ್ಯೂಶನ್ ಆಫ್ ಎಕ್ಸಲೆನ್ಸ್ ಎಂದು ಗುರುತಿಸಲಾಗಿರುವ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಇಲ್ಲಿನ ಎಲ್ಲಾ ಪ್ರೊಫೆಸರ್ಗಳು ಸಾಮಾನ್ಯ ವರ್ಗದವರಾಗಿದ್ದಾರೆ ಎಂದು ವರದಿ ಹೇಳಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಇನ್ಸ್ಪೈರ್ ಫೆಕಲ್ಟಿ ಫೆಲ್ಲೋಶಿಪ್ ಅನ್ನು 2016 ಹಾಗೂ 2020 ನಡುವೆ ಪಡೆದ ಶೇ 80 ರಷ್ಟು ಮಂದಿ ಸಾಮಾನ್ಯ ವರ್ಗದವರಾಗಿದ್ದರೆ ಶೇ 6 ರಷ್ಟು ಮಂದಿ ಮಾತ್ರ ಪರಿಶಿಷ್ಟ ಜಾತಿ, ವರ್ಗಗಳವರಾಗಿದ್ದಾರೆ.
RTI ಹಾಗೂ ಇತರ ಅಧಿಕೃತ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ವರ್ಗಗಳಿಗೆ ಶೇ 7.5 ಹಾಗೂ ದಲಿತರಿಗೆ ಶೇ 15 ಮೀಸಲಾತಿಯಿದೆಯಾದರೂ ಈ ಹುದ್ದೆಗಳನ್ನು ತುಂಬಲಾಗುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಅಂತೆಯೇ ದಲಿತರು ಮತ್ತು ಆದಿವಾಸಿ ವರ್ಗಗಳವರೂ ವಿಜ್ಞಾನ ವಿಭಾಗಗಳಲ್ಲಿ ಅತ್ಯಂತ ಕಡಿಮೆ ಪ್ರಾತಿನಿಧ್ಯ ಹೊಂದಿದ್ದಾರೆಂದು ವರದಿ ಹೇಳಿದೆ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣ ಮೂಲಕ ಪ್ರಯಾಣಿಸುವವರು ಎಪ್ರಿಲ್ನಿಂದ ತೆರಬೇಕಿದೆ ಹೆಚ್ಚುವರಿ ಬಳಕೆದಾರರ ಶುಲ್ಕ