'ಸರಕಾರ ಗೌರವ ಸಲ್ಲಿಸದಿದ್ದರೂ ನಾವು ಅವರನ್ನು ಸದಾ ನೆನಪಿಸುತ್ತಿದ್ದೇವೆ': ಸಾರಾ ಅಬೂಬಕರ್‌ಗೆ ನಾಗರಿಕ ನುಡಿನಮನ

Update: 2023-01-15 12:53 GMT

ಮಂಗಳೂರು, ಜ.15:ನಾಡಿನ ಖ್ಯಾತ ಸಾಹಿತಿ, ಹಿರಿಯ ಲೇಖಕಿ, ಮಹಿಳಾ ಧ್ವನಿ, ಪ್ರಗತಿಪರ ಚಿಂತಕಿ, ನೃಪತುಂಗ ಪ್ರಶಸ್ತಿ ಮತ್ತು ಗೌರವ ಡಾಕ್ಟರೇಟ್ ಪುರಸ್ಕೃತೆ ಸಾರಾ ಅಬೂಬಕರ್ ಅವರಿಗೆ ರವಿವಾರ ನಗರದ ಬಲ್ಮಠ ಸಹೋದಯ ಸಭಾಂಗಣದಲ್ಲಿ ‘ನಾಗರಿಕ ನುಡಿನಮನ’ ಕಾರ್ಯಕ್ರಮ ನಡೆಯಿತು.

‘ಸರಕಾರ ಕಡೆಗಣಿಸಿದರೂ ಕೂಡ ನಾವು ಗೌರವಿಸುತ್ತೇವೆ ಮತ್ತು ನೆನಪುಗಳನ್ನು ಶಾಶ್ವತಗೊಳಿಸುತ್ತೇವೆ’ ಎಂಬ ಘೋಷಣೆಯೊಂದಿಗೆ ಸಮುದಾಯ ಮಂಗಳೂರು, ವಿಚಾರವಾದಿ ವೇದಿಕೆ, ಕರಾವಳಿ ವಾಚಕಿಯರ ಲೇಖಕಿಯರ ಸಂಘ, ದಲಿತ ಸಂಘರ್ಷ ಸಮಿತಿ, ದಲಿತ ಹಕ್ಕುಗಳ ಸಮಿತಿ, ಡಿವೈಎಫ್‌ಐ, ಎಐವೈಎಫ್‌ಐ, ಎಸ್‌ಎಫ್‌ಐ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಜನವಾದಿ ಮಹಿಳಾ ಸಂಘಟನೆ, ಭಾರತೀಯ ಮಹಿಳಾ ಒಕ್ಕೂಟ, ಪ್ರಗತಿಪರ ಚಿಂತಕರ ವೇದಿಕೆ, ದೇಶಪ್ರೇಮಿ ಸಂಘಟನೆಗಳ ಒಕ್ಕೂಟ, ಅಖಿಲ ಭಾರತ ವಕೀಲರ ಸಂಘ ಹಾಗೂ ಸಮಾನ ಮನಸ್ಕರ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರು ಸಾರಾ ಅವರ ವ್ಯಕ್ತಿತ್ವವನ್ನು ತೆರೆದಿಟ್ಟರು. ‘ಸಮುದಾಯ’ದ ವಾಸುದೇವ ಉಚ್ಚಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

'ಸಾರಾ ಅವರ ಸೃಜನೇತರ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಪ್ರಭುತ್ವದ, ಪೊಲೀಸರ, ಪುರೋಹಿತ ಶಾಹಿಯ ವಿರುದ್ಧ ಅವರು ಧ್ವನಿ ಎತ್ತಿದ್ದರು. ನಾವು ನಮ್ಮ ಸುತ್ತ ಎಂದೂ ಬೇಲಿ ಹಾಕಿಕೊಳ್ಳಬಾರದು. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎನುತ್ತಿದ್ದರು. ನುಡಿದಂತೆಯೇ ಅವರು ನಡೆದರು. ಸಾರಾ ಸಾಹಿತಿಯೇ ಅಲ್ಲ, ಅವರು ಬರೆದದ್ದು ಸಾಹಿತ್ಯವೇ ಅಲ್ಲ. ಅವರಿಗೆ ಪ್ರಶಸ್ತಿ ಯಾಕೆ ಕೊಟ್ಟದ್ದು ಎಂದು ಆಕ್ಷೇಪಿಸಿದವರಿಗೆ ಅವರು ಸಾಹಿತ್ಯಿಕವಾಗಿ ಉತ್ತರ ಕೊಟ್ಟರೇ ವಿನಃ ಎಂದೂ ಅಸಹನೆ ತೋರಲಿಲ್ಲ. ಯಾವುದೇ ಕಾರ್ಯಕ್ರಮವಾಗಲಿ ವಾರದ ಹಿಂದೆಯೇ ಪೂರ್ವತಯಾರಿ ಮಾಡುತ್ತಿದ್ದರು. ತನ್ನ ಕೃತಿಯ ಅನುವಾದ ಮತ್ತು ತನ್ನ ಕಾದಂಬರಿ ಆಧರಿಸಿ ನಿರ್ಮಿಸಿದ ಚಲನಚಿತ್ರವನ್ನು ತಿರುಚಿದಾಗ ಅದರ ವಿರುದ್ಧ ನ್ಯಾಯಾಲಯದ ಮೆಟ್ಟಲೇರಲೂ ಅವರು ಹಿಂಜರಿದವರಲ್ಲ. ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಾಗಲೂ ಅವರು ಧೃತಿಗೆಡಲಿಲ್ಲ'.

ಬಿ.ಎಂ. ರೋಹಿಣಿ- ಖ್ಯಾತ ಲೇಖಕಿ, ಮಂಗಳೂರು

--------------------------------

ಸುಮಾರು 40 ವರ್ಷದ ಹಿಂದೆ ಬಳಕೆದಾರರ ವೇದಿಕೆಯ ಆಂದೋಲನದಲ್ಲಿ ತೊಡಗಿಸಿಕೊಂಡಾಗಿನ ಅವರ ಪರಿಚಯ, ಸ್ನೇಹ ಸಂಬಂಧವು ಕೊನೆಯವರೆಗೂ ಮುಂದುವರಿದಿತ್ತು. ಅವರು ಪ್ರತೀ ಶಬ್ಧವನ್ನು ತೂಕ ಮಾಡಿ ಬರೆಯುತ್ತಿದ್ದರು. ಅವರದ್ದು ಆತ್ಮೀಯ ನಡೆನುಡಿ. ಮನೆಗೆ ಹೋದವರಿಗೆಲ್ಲಾ ತಾನು ರಚಿಸಿದ ಕೃತಿಯನ್ನು ಗೌರವ ಕಾಣಿಕೆಯಾಗಿ ನೀಡುತ್ತಿದ್ದರು. ಸರಕಾರ ಅವರಿಗೆ ಗೌರವ ಸಲ್ಲಿಸದಿದ್ದರೂ ನಾವು ಅವರನ್ನು ಸದಾ ನೆನಪಿಸುತ್ತಿದ್ದೇವೆ.

ಪ್ರೊ. ನರೇಂದ್ರ ನಾಯಕ್- ಅಧ್ಯಕ್ಷರು, ವಿಚಾರವಾದಿಗಳ ವೇದಿಕೆ

-------------------------------

ಸಣ್ಣ ಪ್ರಾಯದಿಂದಲೇ ಸಾರಾ ಅವರ ಹೆಸರನ್ನು ಕೇಳಿಕೊಂಡು ಬಂದವ. ಆ ಕಾಲದಲ್ಲಿ ಸಾರಾ ಅವರ ಬಗ್ಗೆ ಮುಸ್ಲಿಂ ಸಮಾಜದಲ್ಲಿ ಕೆಟ್ಟ ಮಾತುಗಳು ಕೇಳಿ ಬರುತ್ತಿತ್ತು. ನಾನು ಸಾಮಾಜಿಕ ಚಳುವಳಿಯಲ್ಲಿ ತೊಡಗಿಸಿಕೊಂಡಾಗ ಸಾರಾ ಅವರ ಜೊತೆ ನಿಕಟವಾಗಿ ಬೆರೆಯುವ ಅವಕಾಶ ಸಿಗತೊಡಗಿತು. ಸಾರಾ ಅವರ ವ್ಯಕ್ತಿತ್ವವೂ ಅನಾವರಣಗೊಳ್ಳತೊಡಗಿತು. ‘ಜನನುಡಿ’ ಕಾರ್ಯಕ್ರಮ ನಡೆಸುವಾಗ ಸಾರಾ ನಮಗೆ ಧೈರ್ಯ ತುಂಬಿದ್ದರು. ಧರ್ಮದ ಹೆಸರಿನಲ್ಲಿ ನಡೆಯುವ ಪುರುಷ ಪ್ರಧಾನದ ವಿರುದ್ಧ ಅವರು ಸಿಡಿದೇಳುತ್ತಿದ್ದರು. ಅಂತಹ ಸಾಹಿತಿ ನಿಧನರಾದಾಗ ಜಿಲ್ಲಾಡಳಿತ, ಸರಕಾರ, ಜನಪ್ರತಿನಿಧಿಗಳು ನಿರ್ಲಕ್ಷತಾಳಿರುವುದು ಅಕ್ಷಮ್ಯ.

ಮುನೀರ್ ಕಾಟಿಪಳ್ಳ- ರಾಜ್ಯಾಧ್ಯಕ್ಷರು,ಡಿವೈಎಫ್‌ಐ

--------------------------------------------------

ಸಾರಾ ಅವರಿಗೆ ಸರಕಾರ ಗೌರವ ಸಲ್ಲಿಸಿಲ್ಲ ಎಂಬ ಅಸಮಾಧಾನ ಬೇಡ. ಮನುಷ್ಯ ಪ್ರೀತಿ ಇಲ್ಲದ ಸರಕಾರದಿಂದ ಅಂತಹವುಗಳನ್ನು ನಾವು ನಿರೀಕ್ಷಿಸಬೇಕಿಲ್ಲ. ಅಪ್ಪಟ ಮಾನವತಾವಾದಿಯಾಗಿದ್ದ ಅವರನ್ನು ಮನುಷ್ಯ ಪ್ರೇಮಿಗಳು ಮಾತ್ರ ಗೌರವಿಸಿದರೆ ಸಾಕು.

- ಡಾ.ಇಸ್ಮಾಯೀಲ್- ನಿವೃತ್ತ ಪ್ರಾಚಾರ್ಯರು, ಮಂಗಳೂರು

--------------------------------------

ಖ್ಯಾತ ಸಾಹಿತಿಯಾಗಿದ್ದರೂ ಕೂಡ ಕಿರಿಯರ ಜೊತೆಯೂ ಆತ್ಮೀಯವಾಗಿ ಬೆರೆಯುತ್ತಿದ್ದರು. ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸುವ ಮನಸ್ಸು ಅವರದ್ದಾಗಿತ್ತು. ಅವರು ಅನ್ಯಾಯದ ವಿರುದ್ಧ ವೌನ ಮುರಿದು ಮಾತನಾಡುತ್ತಿದ್ದರು. ಕರಾವಳಿ ಲೇಖಕಿಯರು, ವಾಚಕಿಯರ ಸಂಘದ ಸ್ಥಾಪಕ ಸದಸ್ಯೆಯಾಗಿದ್ದ, ಅಧ್ಯಕ್ಷೆಯಾಗಿದ್ದ ಅವರು ಸಂಘದ ಘನತೆ-ಗೌರವ ಹೆಚ್ಚಿಸಿದ್ದರು.

ಜ್ಯೋತಿ ಚೇಳಾಯಾರು- ಅಧ್ಯಕ್ಷೆ, ಕರಾವಳಿ ಲೇಖಕಿಯರು, ವಾಚಕಿಯರ ಸಂಘ ಮಂಗಳೂರು

Similar News