ಮಲ್ಪೆ ಬೀಚ್ ಉತ್ಸವದ ಪ್ರೊಮೋ ಬಿಡುಗಡೆ

Update: 2023-01-15 16:41 GMT

ಮಲ್ಪೆ: ಉಡುಪಿ ಜಿಲ್ಲಾ ರಜತ ಉತ್ಸವ ಅಂಗವಾಗಿ ಜ.20ರಿಂದ 22ರವರೆಗೆ ನಡೆಯುವ ಬೀಚ್ ಉತ್ಸವ ಕುರಿತ ಸಂಪೂರ್ಣ ಮಾಹಿತಿಯ ಪ್ರೊಮೋವನ್ನು ಉಡುಪಿ ಶಾಸಕ ರಘುಪತಿ ಭಟ್ ರವಿವಾರ ಮಲ್ಪೆಬೀಚ್‌ನಲ್ಲಿ ಬಿಡುಗಡೆ ಮಾಡಿದರು.

ಬೀಚ್ ಉತ್ಸವದ  ಯಶಸ್ವಿಗಾಗಿ ರಚಿಸಿರುವ  ವಿವಿಧ ಸಮಿತಿಗಳು ಹಾಗೂ ಭಜನಾ ಮಂಡಳಿಗಳೊಂದಿಗೆ ಈವರೆಗೆ ಕೈಗೊಂಡಿರುವ  ಸಿದ್ದತೆಗಳ ಬಗ್ಗೆ ಸಭೆ ನಡೆಸಲಾಯಿತು. ಉತ್ಸವ ಸಂದರ್ಭದಲ್ಲಿ ವಸತಿ, ಸಂಚಾರ ವ್ಯವಸ್ಥೆ, ಪಾರ್ಕಿಂಗ್ ಬಗ್ಗೆ ಚರ್ಚೆ ನಡೆಯಿತು.

ಈ ವೇಳೆ ಬೀಚ್‌ನಲ್ಲಿ ವಿನೂತನ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು  ಹಾಗೂ ವಿಶೇಷ ದೀಪಾಲಂಕಾರ ವ್ಯವಸ್ಥೆಯನ್ನು ಶಾಸಕರು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪ್ರಸನ್ನ ಎಚ್., ಎಸ್ಪಿ ಹಾಕಿ ಅಕ್ಷಯ್ ಮಚ್ಚಿಂದ್ರ, ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಯತೀಶ್, ನಗರಸಭಾ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಮಲ್ಪೆ ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ, ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

Similar News