ಮಹಿಳೆಯರಿಗಾಗಿ ಒಂದೇ ಒಂದು ಕಾರ್ಯಕ್ರಮ ರೂಪಿಸದ BJP: ಸಿದ್ದರಾಮಯ್ಯ ವಾಗ್ದಾಳಿ

Update: 2023-01-16 13:56 GMT

ಬೆಂಗಳೂರು, ಜ.16: ನಾವು ರಾಜ್ಯದಲ್ಲಿ ಮಹಿಳಾ ಸಮಾವೇಶವನ್ನು ಏರ್ಪಾಡು ಮಾಡಿ, ಅದರಲ್ಲಿ ಪ್ರಿಯಾಂಕಾ ಗಾಂಧಿ ಪಾಲ್ಗೊಳ್ಳುತ್ತಾರೆ ಎಂದು ಗೊತ್ತಾದ ಮೇಲೆ ರಾಜ್ಯ ಬಿಜೆಪಿ ಸರಕಾರ ದೊಡ್ಡ ಜಾಹಿರಾತನ್ನು ನೀಡಿ ತಾವು ಮುಂದೆ ಮಂಡಿಸುವ ಬಜೆಟ್ ನಲ್ಲಿ ಮಹಿಳಾ ಪರವಾದ ಕಾರ್ಯಕ್ರಮಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಸೋಮವಾರ ಬೆಂಗಳೂರು ಅರಮನೆ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ‘ನಾ ನಾಯಕಿ’ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದು ಮೂರುವರೆ ವರ್ಷಗಳಾಯಿತು. ಆದರೆ ಇಂದಿನ ವರೆಗೆ ಮಹಿಳೆಯರಿಗಾಗಿ ಒಂದೇ ಒಂದು ಕಾರ್ಯಕ್ರಮ ರೂಪಿಸಿ ಜಾರಿ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

2018ರ ಚುನಾವಣೆ ವೇಳೆ ಮಹಿಳೆಯರಿಗಾಗಿ 21 ಭರವಸೆಗಳನ್ನು ನೀಡಿದ್ದರು ಅದನ್ನು ಈಡೇರಿಸಿಲ್ಲ. ಈ ವರೆಗೆ ಮಲಗಿದ್ದ ರಾಜ್ಯ ಸರಕಾರ ನಾವು ರಾಜ್ಯದ ಪ್ರತಿ ಮನೆಗೆ ಉಚಿತವಾಗಿ 200 ಯುನಿಟ್ ನೀಡುತ್ತೇವೆ ಎಂದು ಘೋಷಿಸಿದ ಮೇಲೆ ಮಹಿಳೆಯರಿಗೆ ಪುಂಕಾನುಪುಂಕವಾಗಿ ಭರವಸೆಗಳನ್ನು ನೀಡಲು ಆರಂಭ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಪಕ್ಷ 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ 600 ಭರವಸೆಗಳನ್ನು ನೀಡಿತ್ತು, ಅದರಲ್ಲಿ ಶೇ.10 ಅನ್ನು ಈಡೇರಿಸಿಲ್ಲ. ಬಿಜೆಪಿಯಂತ ವಚನಭ್ರಷ್ಟ ಸರಕಾರ ಯಾವುದೂ ಇಲ್ಲ. ಬಿಜೆಪಿ ಸಂವಿಧಾನ ಜಾರಿಯಾಗುವ ಮೊದಲಿನಿಂದಲೂ ಮಹಿಳೆಯರ ಪರವಾಗಿ ಇಲ್ಲ. ಇದೇ ಜನ ಮನುಸ್ಮೃತಿಯ ಮೂಲಕ ಮಹಿಳೆಯರನ್ನು ದಮನ ಮಾಡಿದ್ದರು. ಅಂಬೇಡ್ಕರ್ ಸಂವಿಧಾನ ರಚಿಸಿದ ಕಾರಣಕ್ಕೆ ಇಂದು ಈ ದೇಶದ ಮಹಿಳೆಯರಿಗೆ ಎಲ್ಲ ಹಕ್ಕುಗಳು ಸಿಗುತ್ತಿವೆ ಎಂದು ಅವರು ತಿಳಿಸಿದರು.

ಮೊದಲ ಪ್ರಧಾನಿ ಜವಾಹರಲಾಲ್ ನೆಹರು ‘ಈ ದೇಶದ ಅಭಿವೃದ್ಧಿ ಆಗಬೇಕಾದರೆ ದೇಶದ ಅರ್ಧದಷ್ಟಿರುವ ಮಹಿಳಾ ಸಮುದಾಯ ಅಭಿವೃದ್ಧಿಯಾಗಬೇಕು’ ಎಂದಿದ್ದರು. ಅವರ ಆಡಳಿತದಲ್ಲಿ ಬಾಲ್ಯ ವಿವಾಹ, ಸತಿ ಪದ್ಧತಿಗಳಂಥ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಹಿಂದೂ ವಿವಾಹ ಕಾಯ್ದೆ ಜಾರಿಗೆ ತಂದರು. ಹಿಂದೂ ಉತ್ತರಾಧಿಕಾರಿ ಕಾಯ್ದೆ, ದತ್ತು ಸ್ವೀಕರಿಸುವ ಕಾಯ್ದೆ, ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರು. 1951ರ ಜನಗಣತಿ ಪ್ರಕಾರ ದೇಶದ ಮಹಿಳಾ ಸಾಕ್ಷರತೆ ಪ್ರಮಾಣ ಶೇ.8.86 ಇತ್ತು. 2011ರ ಜನಗಣತಿಯ ಪ್ರಕಾರ ಶೇ.65.45ಗೆ ಹೆಚ್ಚಳವಾಗಲು ಕಾಂಗ್ರೆಸ್ ಸರಕಾರ ಕಾರಣ ಎಂದು ಅವರು ಹೇಳಿದರು. 

ನಾವು ಅಧಿಕಾರದಲ್ಲಿದ್ದಾಗ ಮಹಿಳೆಯರಿಗೆ ಉದ್ಯೋಗದಲ್ಲಿ ಸಿಗುತ್ತಿದ್ದ ಶೇ.30ರಷ್ಟು ಮೀಸಲಾತಿ ಪ್ರಮಾಣವನ್ನು ಶೇ.33ಕ್ಕೆ ಹೆಚ್ಚಿಸಿದ್ದೇವೆ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಸಂವಿಧಾನ ತಿದ್ದುಪಡಿ ಮಾಡಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡಿದ್ದು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಲ್ಲಿ ಮೀಸಲಾತಿ ಕಲ್ಪಿಸಿದರು ಎಂದು ಸಿದ್ದರಾಮಯ್ಯ ಹೇಳಿದರು.

ಮಹಿಳೆಯರಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ 1995ರಲ್ಲಿ ಲೋಕಸಭೆ ಮುಂದೆ ತರಲಾಗಿದೆ. ಅದು ಇನ್ನೂ ಹಾಗೆ ಇದೆ. ಒಂದು ವೇಳೆ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮೀಸಲಾತಿ ನೀಡುವ ಈ ಮಸೂದೆಯನ್ನು ಜಾರಿ ಮಾಡುವ ಕೆಲಸ ಮಾಡಬೇಕು ಎಂಬ ನಿರ್ಣಯವನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಬೇಕು. ಇದು ನನ್ನ ಒತ್ತಾಯ ಎಂದು ಅವರು ತಿಳಿಸಿದರು. 

ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮಾತನಾಡಿದರು. ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಾಸೀರ್ ಹುಸೇನ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿದಂತೆ ಶಾಸಕರು, ವಿಧಾನಪರಿಷತ್ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

Similar News