ನಿಷ್ಠಾವಂತ ಕಾರ್ಯಕರ್ತರಿಗೆ ಕಿಂಚಿತ್ತೂ ಗೌರವವಿಲ್ಲ: BJP ನಾಯಕರ ವಿರುದ್ಧ ಮಾಜಿ ಶಾಸಕ ನಂದೀಶ್ ರೆಡ್ಡಿ ಅಸಮಾಧಾನ

Update: 2023-01-16 14:26 GMT

ಬೆಂಗಳೂರು, ಜ. 16: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದಿರುವ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಹಾಗೂ ಬೆಂಬಲಿಗರಿಗೆ ಬಿಜೆಪಿ ಪಕ್ಷದಲ್ಲಿ ಗೌರವ ಸಿಗುತ್ತಿದೆ. ಆದರೆ, ಈ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದಂತಹ ಮೂಲ ಕಾರ್ಯಕರ್ತರಿಗೆ ಕಿಂಚಿತ್ತೂ ಗೌರವವಿಲ್ಲ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಅಧ್ಯಕ್ಷ ಎನ್.ಎಸ್.ನಂದೀಶ್ ರೆಡ್ಡಿ ವಾಗ್ದಾಳಿ ನಡೆಸಿದರು.

ಸೋಮವಾರ ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿಯಲ್ಲಿರುವ ತಮ್ಮ ನಿವಾಸದಲ್ಲಿ ಸಂಕ್ರಾಂತಿ ಸಂಭ್ರಮ ಹಿನ್ನೆಲೆಯಲ್ಲಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಸಭೆ ನಡೆಸಿದ ಅವರು, ಸಚಿವ ಬಸವರಾಜ ಹಾಗೂ ಅವರ ಬೆಂಬಲಿಗರ ಭ್ರಷ್ಟಾಚಾರ, ಅನಾಚಾರ, ದೌರ್ಜನ್ಯಗಳು ಮಿತಿ ಮೀರಿದೆ ಎಂದರು.

ಕೆ.ಆರ್.ಪುರ ಕ್ಷೇತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಎರಡು, ಮೂರು ಬಾರಿ ಬಂದು ಹೋದರೂ ಸೌಜನ್ಯಕ್ಕೂ ನಮಗೆ ಆಹ್ವಾನ ನೀಡುವುದಿಲ್ಲ. ಬಿಬಿಎಂಪಿ ವಾರ್ಡ್ ಪುನರ್ ವಿಂಗಡನೆ ಅವೈಜ್ಞಾನಿಕವಾಗಿದ್ದು, ಅದನ್ನು ಸರಿಪಡಿಸಿ ಎಂದು ಮನವಿ ಮಾಡಿದರೆ ಸಚಿವ ಅಶೋಕ್ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಅವರು ಕಿಡಿಗಾರಿದರು.

 ಸಂಧಾನಕ್ಕೆ ಸತೀಶ್ ರೆಡ್ಡಿ ಯತ್ನ:

ನಂದೀಶ್ ರೆಡ್ಡಿ ಸಂಕ್ರಾಂತಿ ಹಬ್ಬದಂದು ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಬಿಎಂಟಿಸಿ ಅಧ್ಯಕ್ಷ ಸ್ಥಾನ ಹಾಗೂ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ದಟ್ಟವಾಗಿದ್ದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ, ನಂದೀಶ್ ರೆಡ್ಡಿ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಲು ಪ್ರಯತ್ನಿಸಿದರು.

ಆದರೆ, ಬಿಜೆಪಿ ಕಾರ್ಯಕರ್ತರು ಅದಕ್ಕೆ ಅವಕಾಶ ನೀಡದೆ ನೇರವಾಗಿ ಬಂದು ತಮ್ಮನ್ನು ಭೇಟಿ ಮಾಡಬೇಕು. ಯಾವುದೆ ಕಾರಣಕ್ಕೂ ಮಾತುಕತೆಗೆ ಮುಂದಾಗಬಾರದು ಎಂದು ಒತ್ತಾಯಿಸಿದರು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸತೀಶ್ ರೆಡ್ಡಿ, ಯಾವುದೆ ಕಾರಣಕ್ಕೂ ದುಡುಕಿ ನಿರ್ಧಾರ ಕೈಗೊಳ್ಳದೆ, ಹಿರಿಯರು, ಮಾರ್ಗದರ್ಶಕರು, ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಿ ಎಂದಷ್ಟೆ ಮನವಿ ಮಾಡುತ್ತೇನೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನಂದೀಶ್ ರೆಡ್ಡಿ, ಕ್ಷೇತ್ರದ ವಿಚಾರದಲ್ಲಿ ಯಾವುದಾದರೂ ಒಂದು ತೀರ್ಮಾನ ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇಂದಿನಿಂದ 10 ದಿನ ಕ್ಷೇತ್ರದ ಮನೆಗೆ ಭೇಟಿ ನೀಡುತ್ತೇನೆ. ಜ.25ರ ಬಳಿಕ ನನ್ನ ತೀರ್ಮಾನ ಪ್ರಕಟಿಸುತ್ತೇನೆ ಎಂದರು.

Similar News