ಪಚ್ಚನಾಡಿಯ ತ್ಯಾಜ್ಯದ ರಾಶಿಗೆ ಬೆಂಕಿ ಬಿದ್ದ ಪ್ರಕರಣ: ಮಂಗಳೂರು ಮನಪಾ ಆಡಳಿತದ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ

Update: 2023-01-17 13:41 GMT

ಮಂಗಳೂರು: ನಗರ ಹೊರವಲಯದ ಪಚ್ಚನಾಡಿಯ ತ್ಯಾಜ್ಯದ ರಾಶಿಗೆ ಬೆಂಕಿ ಬಿದ್ದ ಪರಿಣಾಮ ದಟ್ಟ ಹೊಗೆಯಿಂದಾಗಿ ಸ್ಥಳೀಯರಿಗೆ ಅನಾರೋಗ್ಯ ಕಾಡುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ನೇತೃತ್ವದಲ್ಲಿ ಮಂಗಳವಾರ  ಪಚ್ಚನಾಡಿಯ ಮಂಗಳಜ್ಯೋತಿ ಬಳಿ ಪ್ರತಿಭಟನೆ ನಡೆಯಿತು.

ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ ಮಾತನಾಡಿ ಇಲ್ಲಿನ ತ್ಯಾಜ್ಯರಾಶಿಗೆ ಪ್ರತೀ ವರ್ಷವೂ ಬೆಂಕಿ ಬೀಳುತ್ತದೆ. ಕಸದಿಂದ ದುಡ್ಡು ತಿನ್ನುವವರ ಮಾಫಿಯಾ ಇದಕ್ಕೆ ಕಾರಣವಾಗಿದೆ. ಹೊಗೆಯಿಂದ ಸ್ಥಳೀಯ ಜನರು ಆರೋಗ್ಯ ಸಮಸ್ಯೆಯಿಂದ ನರಳುತ್ತಿದ್ದರೂ ಕೂಡ ಸ್ಥಳೀಯಾಡಳಿತ, ಆರೋಗ್ಯ ಇಲಾಖೆಯ ಅಧಿಕಾರಿಗಳು ಇಲ್ಲಿನ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸುವ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಆರೋಪಿಸಿದರು.

ಹಣದ ಆಸೆಗಾಗಿ ಸ್ಥಳೀಯ ಪ್ರಾಣದ ಜತೆಗೆ ಚೆಲ್ಲಾಟವಾಡಲಾಗುತ್ತಿದೆ. ಈ ಸಮಸ್ಯೆಯ ವಿರುದ್ದ ಊರವರು, ಮಕ್ಕಳು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದಾಗ ತಡೆಯುವ ಪ್ರಯತ್ನ ನಡೆದಿದೆ. ಅನುಮತಿ ನೀಡದಂತೆ ಪೊಲೀಸ್ ಇಲಾಖೆಗೆ ಒತ್ತಡ ಹೇರಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಜರಗಿಸದಿದ್ದರೆ ಶಾಸಕ ಡಾ.ಭರತ್ ಶೆಟ್ಟಿಯ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸ್ಥಳೀಯರಾದ ಹರೀಶ್ ಮಂಗಳನಗರ ಮಾತನಾಡಿ ಕಳೆದ 60 ವರ್ಷದಿಂದ ನಾವಿಲ್ಲಿ ವಾಸವಾಗಿದ್ದೇವೆ. ಬೆಂಕಿ ಬಿದ್ದು ಹೊಗೆ ಬೀಳುವ ಸಮಸ್ಯೆ ಪ್ರತೀವರ್ಷವೂ ನಡೆಯುತ್ತಲೇ ಇದೆ. ಮಂಗಳೂರು ಮನಪಾ ಇದಕ್ಕೆ ಶಾಶ್ವತ ಪರಿಹಾರವನ್ನು ಕೈಗೊಂಡಿಲ್ಲ. ಆರೋಗ್ಯ ಇಲಾಖೆಯವರು ಇಲ್ಲಿಯವರೆಗೆ ಬಂದಿಲ್ಲ. ಪಾಲಿಕೆಯವರು ಹಣವನ್ನು ಖರ್ಚು ಮಾಡಿದರೂ ಬೆಂಕಿ ಬೀಳುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಇದರಲ್ಲಿ ಮಾಫಿಯಾಗಳ ಕೈವಾಡವಿದೆ ಎಂದರು.

ತಿರುವೈಲು ವಾರ್ಡ್ ಕಮಿಟಿ ಸದಸ್ಯೆ ಹರಿಣಿ ಮಾತನಾಡಿ ಬೇರೆ ಬೇರೆ ಕಡೆಯಿಂದ ಕಸವನ್ನು ತಂದು ರಾಶಿ ಹಾಕಲಾಗುತ್ತಿದೆ. ಸೂಕ್ತ ರೀತಿಯಲ್ಲಿ ಕಸ ನಿರ್ವಹಣೆ ಮಾಡದ ಕಾರಣ ಈ ಸಮಸ್ಯೆ ತಲೆದೋರಿದೆ. ಪ್ರತೀ ವರ್ಷ ಎದುರಾಗುವ ಇಂತಹ ಸಮಸ್ಯೆಗೆ ಮನಪಾ ಆಡಳಿತವು ಇನ್ನಾದರೂ ಪರಿಹಾರ ಕಲ್ಪಿಸಲಿ ಎಂದು ಆಗ್ರಹಿಸಿದರು.

Similar News