ಗುರು ರಾಘವೇಂದ್ರ, ವಶಿಷ್ಟ ಸೌಹಾರ್ದ ಬ್ಯಾಂಕ್ ಹಗರಣ ಸಿಬಿಐಗೆ: ಸಚಿವ ಎಸ್.ಟಿ.ಸೋಮಶೇಖರ್

Update: 2023-01-17 14:35 GMT

ಬೆಂಗಳೂರು, ಜ.17: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ವಶಿಷ್ಟ ಸೌಹಾರ್ದ ಸಹಕಾರಿ ಬ್ಯಾಂಕ್ ಗಳ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ವಹಿಸಲು ಶಿಫಾರಸು ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮಂಗಳವಾರ ವಿಕಾಸಸೌಧದಲ್ಲಿ ನಡೆದ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನ ಅವ್ಯವಹಾರಗಳು ಮತ್ತು ಪುನಃಶ್ಚೇತನ ಹಾಗೂ ವಶಿಷ್ಟ ಸೌಹಾರ್ದ ಸಹಕಾರಿ ಬ್ಯಾಂಕ್ ನ ಅವ್ಯವಹಾರಗಳ ಕುರಿತ ಪರಾಮರ್ಶೆ ಸಭೆಯಲ್ಲಿ ಅವರು ಮಾತನಾಡಿದರು.

ಗುರುರಾಘವೇಂದ್ರ, ವಶಿಷ್ಠ ಸೌಹಾರ್ದ ಸೇರಿದಂತೆ ಇತರೆ ಯಾವುದೇ ಬ್ಯಾಂಕ್ ಗಳಲ್ಲಿ ನಡೆದಿರುವ ಅವ್ಯವಹಾರಗಳಿದ್ದರೆ ಆ ಪ್ರಕರಣಗಳನ್ನು ಸಹ ಸಿಬಿಐಗೆ ವಹಿಸಲು ಶಿಫಾರಸು ಮಾಡಲಾಗುತ್ತದೆ. ಈ ಕುರಿತು ನಿರ್ಣಯ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೋಮಶೇಖರ್ ಸೂಚಿಸಿದರು.

ಹಗರಣದ ತನಿಖೆ ಆರಂಭವಾಗಿ ಮೂರು ವರ್ಷವಾದರೂ ಸಾಲ ವಸೂಲಾತಿ ಆಗುತ್ತಿಲ್ಲ. ಸಭೆಗಳು ಮಾತ್ರ ನಡೆಯುತ್ತಿವೆಯೇ ಹೊರತು ಯಾವುದೇ ಫಲಿತಾಂಶ ಬರುತ್ತಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸಮಸ್ಯೆ ಏನು ಎಂದು ಗುರುರಾಘವೇಂದ್ರ ಬ್ಯಾಂಕ್ ನ ಆಡಳಿತಾಧಿಕಾರಿಯನ್ನು ಅವರು ಪ್ರಶ್ನಿಸಿದರು.

ಸರಕಾರದ ಮೇಲೆ ಠೇವಣಿದಾರರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಠೇವಣಿದಾರರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಪ್ರಕರಣವನ್ನು ಸಿಬಿಐಗೆ ವಹಿಸಲಾಗುವುದು. ಸಂಪುಟದಲ್ಲಿ ಈ ಕುರಿತು ಪ್ರಸ್ತಾವನೆ ಮಂಡಿಸಲಾಗುವುದು ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ಸಮರ್ಥರಿದ್ದು ತನಿಖೆ ನಡೆಸುತ್ತಿದ್ದಾರೆ. ಆದರೆ ಸಾಲ ವಸೂಲಾತಿಯಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಸಿಬಿಐಗೆ ವಹಿಸಿದರೆ ಠೇವಣಿದಾರರಲ್ಲೂ ವಿಶ್ವಾಸ ಮೂಡಲಿದೆ ಎಂದು ಸೋಮಶೇಖರ್ ತಿಳಿಸಿದರು.

ಸಚಿವರ ಈ ಮಾತಿಗೆ ಶಾಸಕರಾದ ರವಿಸುಬ್ರಹ್ಮಣ್ಯ, ಸೌಮ್ಯಾರೆಡ್ಡಿ, ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಸಹಮತ ವ್ಯಕ್ತಪಡಿಸಿದರು. ಸಭೆಯಲ್ಲಿ ಬ್ಯಾಂಕ್ ನ ಪುನಶ್ಚೇತನ, ಸಾಲ ವಸೂಲಾತಿಯಲ್ಲಿ ಆಗಿರುವ ಪ್ರಗತಿ ಕುರಿತು ಪರಾಮರ್ಶಿಸಲಾಯಿತು. ಈ ರೀತಿ ವಂಚನೆ ತಡೆಗೆ ಕಾನೂನಿನಲ್ಲಿ ತಿದ್ದಪಡಿ ತರುವ ಕುರಿತಂತೆ ಚರ್ಚಿಸಲಾಯಿತು.

Similar News