ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ 4,750 ಕೋಟಿ ರೂ. ಅನುದಾನ : ವೇದವ್ಯಾಸ್ ಕಾಮತ್

Update: 2023-01-17 15:48 GMT

ಮಂಗಳೂರು: ಕಳೆದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ  ಕೇಂದ್ರ, ರಾಜ್ಯ ಸರಕಾರ ಸೇರಿದಂತೆ ವಿವಿಧ ಮೂಲಗಳಿಂದ  4,750ಕೋಟಿ ರೂ. ಅನುದಾನ ದೊರಕಿದೆೆ ಎಂದು ಶಾಸಕ ಡಿ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜ್ಯದ ಯಾವುದೇ ಕ್ಷೇತ್ರಕ್ಕೂ ಇಷ್ಟೊಂದು ಪ್ರಮಾಣದಲ್ಲಿ ಅನುದಾನ ಈ ತನಕ ಸಿಕ್ಕಿಲ್ಲ ಎಂದರು.

ಅನುದಾನ ದೊರೆತಿದ್ದರೂ ಎಲ್ಲ ಕಾಮಗಾರಿಗಳನ್ನು ಬೇರೆ ಬೇರೆ ಕಾರಣಗಳಿಂದಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. 2023ರ ಮಾರ್ಚ್ ಅಂತ್ಯದ ವೇಳೆಗೆ ಶೇ 75ರಷ್ಟು ಕಾಮಗಾರಿಯನ್ನು ಅನುಷ್ಠಾನಗೊಳಿಸಲು ತಾನು ಚಿಂತನೆ ನಡೆಸಿದ್ದರೂ ಮೂರು ವರ್ಷ ವಿಪರೀತ ಮಳೆ, ಎರಡು ವರ್ಷಗಳ ಕಾಲ ಕೋವಿಡ್  ಸಮಸ್ಯೆ, ಕೂಲಿಕಾರ್ಮಿಕರ ಕೊರತೆ ದಿಂದಾಗಿ ತೊಂದರೆಯಾಗಿತ್ತು. ಹೀಗಿದ್ದರೂ 2025ವೇಳೆಗೆ  ಎಲ್ಲ ಕಾಮಗಾರಿಗಳು ಪೂರ್ಣಗೊಂಡು  ಮಂಗಳೂರಿನ ಚಿತ್ರಣವನ್ನು ಬದಲಾಯಿಸುವ ಯೋಜನೆ ಹೊಂದಿರುವುದಾಗಿ ಅವರು ತಿಳಿಸಿದರು.

ಜಲ ಸಿರಿ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿಗೆ 795 ಕೋಟಿ ರೂ. ಮಂಜೂರಾಗಿದ್ದು, ಅದರಲ್ಲಿ 2ರಿಂದ 3 ಲಕ್ಷ ಲೀಟರ್ ಸಾಮರ್ಥ್ಯದ 20-25 ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು. ಹೊಸ ಪೈಪ್‌ಗಳನ್ನು ಅಳವಡಿಸಲು ಹಳೆಯ  ರಸ್ತೆಗಳನ್ನು ಅಗೆಯುವುದು ಅನಿವಾರ್ಯವಾಗಿದೆ. ಈಗಿರುವ ಪೈಪ್‌ಲೈನ್‌ಗಳು ಸಾಮರ್ಥ್ಯ ಚಿಕ್ಕದಾಗಿದ್ದು  ಮತ್ತು ಹಳೆಯದಾಗಿದೆ. ಈ ಕಾರಣದಿಂದ 2055 ವರ್ಷದ ತನಕದ ಜನಸಂಖ್ಯೆಗೆ ನೀರು ಪೂರೈಕೆಯ ಆವಶ್ಯಕತೆಯನ್ನು  ಗಮನದಲ್ಲಿಟ್ಟಿಕೊಂಡು  ನಾವು ಯೋಜನೆ ರೂಪಿಸಬೇಕಾಗಿದೆ ಎಂದು ಹೇಳಿದರು.

ಶಾಸಕನಾಗಿ ನಾನು ಹಲವು ಸವಾಲುಗಳನ್ನು ಎದುರಿಸಿದ್ದೇನೆ. ಮಂಗಳೂರಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿರುವುದಾಗಿ ಹೇಳಿದ ಅವರು ಮುಂಬರುವ ಚುನಾವಣೆಯಲ್ಲೂ ತಾನು ಶಾಸಕನಾಗಿ ಆಯ್ಕೆಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

8 ವಾರ್ಡ್‌ಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ: ಮಂಗಳೂರು ಮಹಾನಗರ ಪಾಲಿಕೆಯ 8 ವಾರ್ಡ್‌ಗಳಿಗೆ ಸ್ಮಾರ್ಟ್ ಸಿಟಿ  ಕಾಮಗಾರಿಗಳನ್ನು ಸೀಮಿತಗೊಳಿಸಲಾಗಿದೆ.  1 ಸಾವಿರ ಕೋಟಿ ರೂ. ಮೊತ್ತದ ಯೋಜನೆಯಲ್ಲಿ ಅಂತರ್‌ರಾಷ್ಟ್ರೀಯ ಈಜುಕೊಳ, ಅಂತರ್ ರಾಷ್ಟ್ರೀಯ  ಕ್ರೀಡಾ ಸಂಕೀರ್ಣ, ಮಂಗಳಾ ಸ್ಟೇಡಿಯಂ ಉನ್ನತೀಕರಣ, ನದಿ ಮುಂಭಾಗ ಯೋಜನೆ, ಸುಲ್ತಾನ್ ಬ್ಯಾಟರಿಯಲ್ಲಿ ತೂಗು ಸೇತುವೆ, ಕುದ್ರು ಅಭಿವೃದ್ಧಿ, ಪಂಪ್‌ವೆಲ್-ಪಡೀಲ್ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪಿಪಿಪಿ ಮಾದರಿಯಲ್ಲಿ, ಕದ್ರಿ, ಕಂಕನಾಡಿಯಲ್ಲಿ ಮಾರುಕಟ್ಟೆ ಮತ್ತು 45 ಕೋಟಿ 1ೂಪಾಯಿ ಮೌಲ್ಯದ ಕೇಂದ್ರ ಮಾರುಕಟ್ಟೆ, ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್ ಮತ್ತು ವಾಣಿಜ್ಯ ಜೆಟ್ಟಿಯಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಶಕ್ತಿನಗರದ ವಸತಿ ಯೋಜನೆ ಕುರಿತು  ಸುದ್ದಿಗಾರರೊಬ್ಬರ ಪ್ರಶ್ನೆಗೆ ಉತ್ತರಿಸಿದ ಶಾಸಕ  ಕಾಮತ್, ಈ ಯೋಜನೆಗೆ ಸಂಬಂಧಿಸಿ ನಾನಾ ಸವಾಲುಗಳನ್ನು ಎದುರಿಸಿದ್ದೇನೆ. ಈಗ  ಎಲ್ಲವೂ ಬಗೆಹರಿದಿದೆ. ಮುಂದಿನ ಫೆಬ್ರವರಿಯಲ್ಲಿ  ಯೋಜನೆಗೆ ಶಂಕುಸ್ಥಾಪನೆ ನಡೆಯಲಿದೆ ಎಂದು ಭರವಸೆ ನೀಡಿದರು.

ದ.ಕ.ಜಿಲ್ಲಾ ಕಾರ್ಯನಿರತ ಪ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ , ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.

Similar News