ದ.ಕ. ಜಿಲ್ಲೆಯಲ್ಲಿ ವೈರಲ್ ಜ್ವರ ಹಾವಳಿ

ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿರುವ ಮಂಜು, ಶೀತಗಾಳಿ

Update: 2023-01-19 04:47 GMT

ಮಂಗಳೂರು: ದ.ಕ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ‘ವೈರಲ್ ಜ್ವರ’ದ ಹಾವಳಿ ಹೆಚ್ಚಾಗತೊಡಗಿದ್ದು, ಜನಸಾಮಾನ್ಯರನ್ನು ಕಂಗೆಡಿಸಿವೆ. ಮುಂಜಾನೆಯ ಮಂಜು, ಶೀತಗಾಳಿಯು ಆರೋಗ್ಯದ ಮೇಲೆ ಪರಿಣಾಮ ಬೀರತೊಡಗಿರುವುದಾಗಿ ವರದಿಯಾಗಿವೆ.

ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ಆರೋಗ್ಯದ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಿಕೊಳ್ಳಿ ಎಂಬ ಸಂದೇಶವನ್ನು ಆರೋಗ್ಯ ಇಲಾಖೆ ರವಾನಿಸತೊಡಗಿವೆ. ಅಲ್ಲಲ್ಲಿ ಮಾಹಿತಿ, ಜಾಗೃತಿ ನೀಡುವ ಕಾರ್ಯಕ್ರಮವನ್ನೂ ಆಯೋಜಿಸುತ್ತಿವೆ.

ಭಾರತೀಯ ಹವಾಮಾನ ಇಲಾಖೆಯು ಮುಂದಿನ ಒಂದು ವಾರ ಶೀತಗಾಳಿ ಇರಲಿವೆ ಎಂದು ಸೂಚಿಸಿದೆ. ಜ.19ರ ವೇಳೆಗೆ ಕನಿಷ್ಠ ತಾಪಮಾನ 14 ಡಿಗ್ರಿಗೆ ಬರುವ ಸಾಧ್ಯಯಿದೆ ಎಂದು ಮಾಹಿತಿ ನೀಡಿದೆ. ಚಳಿಯೊಂದಿಗೆ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ. ಹವಾಮಾನದ ಈ ಬದಲಾವಣೆಯಿಂದ ಜನಸಾಮಾನ್ಯರ ಆರೋಗ್ಯದಲ್ಲಿ ಏರುಪೇರುಗಳಾಗಲಿವೆ ಎಂದು ಆರೋಗ್ಯ ಇಲಾಖೆ ತಿಳಿಸಿವೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಹವಾಮಾನದ ಬದಲಾವಣೆಯು ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮ ಬೀರಲಿದೆ. ಆದರೆ ಕೆಲವು ವರ್ಷಗಳಲ್ಲಿ ಮಳೆ, ಚಳಿ, ಬೇಸಿಗೆ ಕಾಲ ಯಾವುದು ಎಂದು ತಿಳಿಯ ಲಾರದಷ್ಟು ಕರಾವಳಿಯಲ್ಲಿ ಬದಲಾವಣೆ ಕಂಡು ಬರುತ್ತಿರುವುದರಿಂದ ದ.ಕ.ಜಿಲ್ಲೆಯಲ್ಲಿ ವೈರಲ್ ಜ್ವರದ ಅಬ್ಬರ ಹಿಂದಿಗಿಂತಲೂ ಈ ಬಾರಿ ಹೆಚ್ಚಾಗಿವೆ. ಅದರಲ್ಲೂ ವಿದ್ಯಾರ್ಥಿಗಳಲ್ಲಿ ವೈರಲ್ ಜ್ವರದ ಪ್ರಮಾಣ ಏರಿಕೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಗೈರುಹಾಜರಾಗುವ ಸನ್ನಿವೇಶ ಸೃಷ್ಟಿಯಾಗಿವೆ.

ಶೀತ, ಕೆಮ್ಮು, ಜ್ವರ, ಮೈಕೈನೋವು, ತಲೆನೋವು ಸಾಮಾನ್ಯ. ಆದರೆ ಈ ಬಾರಿ ಇದರ ಪ್ರಮಾಣ ಸ್ವಲ್ಪ ಹೆಚ್ಚಾಗಿವೆ. ಶೀತ ವಾತಾವರಣಕ್ಕೆ ಪೂರಕವಾದ ಆಹಾರಗಳನ್ನು ಸೇವಿಸುವ ಮೂಲಕ ವೈರಲ್ ಜ್ವರದಿಂದ ಅಲ್ಪಮಟ್ಟಿಗೆ ಪಾರಾಗಬಹುದು ಎಂದು ಮಕ್ಕಳ ವೈದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ನಗರ ವ್ಯಾಪ್ತಿಯಲ್ಲಿ ವೈರಲ್ ಜ್ವರದ ಪ್ರಮಾಣ ಅಷ್ಟೇನು ಜಾಸ್ತಿಯಾಗಿರುವ ಬಗ್ಗೆ ಮಾಹಿತಿಯಿಲ್ಲ. ಆದರೆ, ಸುಳ್ಯ, ಪುತ್ತೂರು, ಬೆಳ್ತಂಗಡಿ ಮತ್ತಿತರ ಕಡೆಗಳಲ್ಲಿ ಚಳಿ, ಮಂಜು, ಶೀತಗಾಳಿಯ ಪ್ರಮಾಣ ಹೆಚ್ಚಿವೆ. ಇದರಿಂದ ಹಿರಿಯರು, ಮಧ್ಯವಯಸ್ಕರಲ್ಲಿ ಮಾತ್ರವಲ್ಲ ಮಕ್ಕಳಲ್ಲೂ ಕೂಡ ವೈರಲ್ ಜ್ವರ ಕಾಣಿಸಿಕೊಂಡಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದೆ.
ಕೆ.ಸುಧಾಕರ, ಡಿಡಿಪಿಐ

ಸಾಮಾನ್ಯವಾಗಿ ಚಳಿಗಾಲದಲ್ಲಿ ಮೂಗು ಮುಚ್ಚಲ್ಪಟ್ಟಿರುತ್ತವೆ. ಹೆಚ್ಚಾಗಿ ಉಸಿರಾಟವನ್ನು ಬಾಯಿ ಮೂಲಕ ಮಾಡುವುದರಿಂದ ಬ್ಯಾಕ್ಟೀರಿಯಾ ಪ್ರಮಾಣವು ದೇಹ ಸೇರಿಕೊಂಡು ಆರೋಗ್ಯದಲ್ಲಿ ಏರುಪೇರಾಗುತ್ತದೆ. ಚಳಿಗಾಲದಲ್ಲಿ ವೈರಲ್ ಜ್ವರದ ಪ್ರಮಾಣವೂ ಹೆಚ್ಚಾಗಿರುತ್ತದೆ. ಮಕ್ಕಳು ಮತ್ತು ಹಿರಿಯರಲ್ಲಿ ವೈರಲ್ ಜ್ವರದ ಪ್ರಮಾಣ ಹೆಚ್ಚಿರುತ್ತದೆ.
ಡಾ.ಕಿಶೋರ್ ಕುಮಾರ್ ಎಂ.,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ, ದ.ಕ. ಜಿಲ್ಲೆ

Similar News