ಎಲ್ಲ ಮಾದರಿ ಕ್ರಿಕೆಟ್ ನಿಂದ ಹಾಶಿಮ್ ಅಮ್ಲ ನಿವೃತ್ತಿ: ಭಾವನಾತ್ಮಕ ಟ್ವೀಟ್ ಮಾಡಿದ ಎಬಿಡಿ

Update: 2023-01-19 07:47 GMT

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಹಾಶಿಮ್ ಅಮ್ಲ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದು,ಈ ಹಿನ್ನೆಲೆಯಲ್ಲಿ  ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ತಮ್ಮ ಸಹ ಆಟಗಾರ ಅಮ್ಲಾ ಅವರಿಗೆ ಭಾವನಾತ್ಮಕ ಟಿಪ್ಪಣಿ ಬರೆದಿದ್ದಾರೆ.

ಅಮ್ಲ ಅವರು ಕೌಂಟಿ ಚಾಂಪಿಯನ್‌ಶಿಪ್‌ಗಾಗಿ ಸರ್ರೆ ಪರ ಆಡುವುದಿಲ್ಲ ಎಂದು ಖಚಿತಪಡಿಸಿದರು. 39 ವರ್ಷ ವಯಸ್ಸಿನ ಅವರು ಪ್ರಥಮ ದರ್ಜೆ ಸೇರಿದಂತೆ ಎಲ್ಲಾ ಸ್ವರೂಪಗಳಲ್ಲಿ 34,104 ರನ್ ಗಳಿಸಿದ್ದರು. ಅಮ್ಲ ಅವರು 2004-2019 ರ ನಡುವೆ 124 ಟೆಸ್ಟ್‌ಗಳಲ್ಲಿ 9,282 ರನ್ ಗಳಿಸಿದರು.

"ಹಾಶಿಮ್ ಅಮ್ಲಾ.. ನಿಮ್ಮ ಕುರಿತು ಬರೆಯಲು ನಾನು ಎಲ್ಲಿಂದ ಆರಂಭಿಸಲಿ?! ಇದು ಸುಲಭವಲ್ಲ.ನಿಮ್ಮ ಬಗ್ಗೆ ಬರೆಯಲು  ನನಗೆ ಕೆಲವು ದಿನಗಳು, ವಾರಗಳು, ತಿಂಗಳುಗಳು, ವರ್ಷಗಳು ಬೇಕಾಗಬಹುದು. ನಾನು ನಿಶ್ಚಿತವಾಗಿಯೂ ನಿಮ್ಮ ಬಗ್ಗೆ ಪುಸ್ತಕವನ್ನು ಬರೆಯಬಲ್ಲೆ" ಎಂದು ಡಿವಿಲಿಯರ್ಸ್ ಟ್ವೀಟ್ ಮಾಡಿದ್ದಾರೆ.

" ನನ್ನೊಂದಿಗೆ ಯಾವಾಗಲೂ ಇದ್ದಿದ್ದಕ್ಕೆ ಧನ್ಯವಾದಗಳು. ನೀವು ಯಾವಾಗಲೂ ನನಗೆ ಅನೇಕ ರೀತಿಯಲ್ಲಿ ಸುರಕ್ಷಿತ ಭಾವನೆ ಮೂಡಿಸಿದ ಸಹೋದರರಾಗಿದ್ದಿರಿ. ನಿಮ್ಮ ಪ್ರಯಾಣವು ಸುಲಭವಲ್ಲ. ವಿಭಿನ್ನ  ತಂತ್ರವನ್ನು ಹೊಂದಿರುವ ವ್ಯಕ್ತಿಯಾಗಿದ್ದೀರಿ’’ ಎಂದರು.

"ಇಂದು ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಗೆಳೆಯಾ, ನೀವು ಕ್ರಿಕೆಟಿಗೆ ಪರಿಪೂರ್ಣತೆ ನೀಡಿದ್ದೀರಿ! ನಾವೆಲ್ಲರೂ ಅದರಿಂದ ಕಲಿಯಬಹುದು. ನೀವು ನನ್ನ ಸ್ಫೂರ್ತಿಯಾಗಿದ್ದೀರಿ.  ನಾನು ನಿಮ್ಮೊಂದಿಗೆ ಇನ್ನೊಂದು ಬಾರಿ ಬ್ಯಾಟಿಂಗ್ ಮಾಡಲು ಬಯಸುತ್ತೇನೆ’’ ಎಂದು ಡಿವಿಲಿಯರ್ಸ್ ಹೇಳಿದರು.

ಅಮ್ಲ 181 ಏಕದಿನ ಪಂದ್ಯಗಳಲ್ಲಿ 27 ಶತಕಗಳು ಸೇರಿದಂತೆ 8,113 ರನ್ ಹಾಗೂ  44 ಟಿ-20ಗಳಲ್ಲಿ 1,277 ರನ್ ಗಳಿಸಿದ್ದಾರೆ. 2019 ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಅಭಿಯಾನದ ಮುಕ್ತಾಯದ ನಂತರ ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

Similar News