ಜ.22ರಂದು ಮಂಗಳೂರಿನಲ್ಲಿ ಪ್ರಜಾಧ್ವನಿ ಯಾತ್ರೆ: ಹರೀಶ್ ಕುಮಾರ್

Update: 2023-01-19 18:04 GMT

ಮಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸೂಚನೆಯ ಪ್ರಕಾರ ಕೆಪಿಸಿಸಿ ಬೆಳಗಾವಿಯಲ್ಲಿ ಪ್ರಾರಂಭವಾಗಿರುವ ಪ್ರಜಾಧ್ವನಿ ಯಾತ್ರೆಯು ಜ.22ರಂದು ಮಂಗಳೂರಿಗೆ ಆಗಮಿಸಲಿದ್ದು ನಗರದ ಕರಾವಳಿ ಮೈದಾನದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರ ಉಪಸ್ಥಿತಿಯಲ್ಲಿಸಮಾವೇಶ ನಡೆಯಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಕೋವಿಡ್ ನಿಂದಾಗಿ ಜನರ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಸರಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ಕಮಿಷನ್ ಶೇ. 40 ಕ್ಕೆ ಏರಿಕೆಯಾಗಿದೆ. ಬೆಲೆ ಗಗನಕ್ಕೆ ಏರುತ್ತಿದೆ ಇದನ್ನು ವಿರೋಧಿಸಲು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಕಾಂಗ್ರೆಸ್ ಆರಂಭಿಸಿದ ಮಹತ್ವದ ಯೋಜನೆಗಳನ್ನು ಸರಕಾರ ನಿರ್ಲಕ್ಷಿಸಿದೆ. ಸರಕಾರದ ಯಾವುದೇ ಯೋಜನೆಗಳಿಗೂ ಹಣ ಕೂಡ ಬಿಡುಗಡೆಗೊಳ್ಳುತ್ತಿಲ್ಲ. ಸಂಪೂರ್ಣ ನಿಂತುಹೋಗಿದೆ. ವಿದ್ಯಾರ್ಥಿಗಳಿಂದ ಹಿಡಿದು ವಯೋವೃದ್ಧರವರೆಗೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸರಕಾರಕ್ಕೆ ಬಡವರ ಬಗ್ಗೆ, ಅಭಿವೃದ್ಧಿ ಯ ಬಗ್ಗೆ ಕಾಳಜಿ ಇಲ್ಲ ಇದನ್ನು ಖಂಡಿಸಲು ಯಾತ್ರೆ ನಡೆಸಲಾ ಗುತ್ತಿದೆ ಎಂದವರು ಹೇಳಿದರು.

ರಾಜ್ಯ ಸರಕಾರ ಕೃಷಿಕರನ್ನು ಬೀದಿಗೆ ತಂದು ನಿಲ್ಲಿಸಿದೆ. ಅಡಿಕೆ ಬೆಳೆಗಾರರು ಅತಂತ್ರ ರಾಗಿದ್ದಾರೆ. ಕೃಷಿಕರಿಗೆ ಪೂರಕವಾಗಿ ಯಾವುದೇ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ. ಜಿಎಸ್ಟಿಯಿಂದ ಜನರು ರೋಸಿಹೋಗಿದ್ದು, ಅವರ ಧ್ವನಿಯಾಗಿ ಸರಕಾರದ ವೈಫಲ್ಯವನ್ನು ಖಂಡಿಸಲು ಪ್ರಜಾಧ್ವನಿ ಯಾತ್ರೆಯನ್ನು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದೆ. ಇದೇ ಸಂದರ್ಭದಲ್ಲಿ ಪುತ್ತೂರಿನ ಅಶೋಕ್ ರೈ ಅವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ. ಪಕ್ಷದ ನೀತಿ ಸಿದ್ದಾಂತವನ್ನು ಒಪ್ಪಿ ಇನ್ನೂ ಹಲವು ಮಂದಿ ಸೇರ್ಪಡೆ ಆಗಲಿದ್ದಾರೆ ಎಂದು ಹರೀಶ್ ಕುಮಾರ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ರೋಜಿ ಜಾನ್, ಎಂ.ಬಿ. ಪಾಟೀಲ್, ಕೆಪಿಸಿಸಿ ಉಸ್ತುವಾರಿ ಸಲೀಂ ಮುಹಮ್ಮದ್, ಮಧು ಬಂಗಾರಪ್ಪ, ಧ್ರುವ ನಾರಾಯಣ್, ಹೆಚ್. ಕೆ. ಪಾಟೀಲ್ ಪಾಲ್ಗೊಳ್ಳಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮನಪಾ ಸದಸ್ಯ ನವೀನ್ ಡಿಸೋಜ ಉಪಸ್ಥಿತರಿದ್ದರು.

Similar News