​ಶಿಕ್ಷಕರು ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಲು ಸ್ವಾಮಿ ಜಿತಕಾಮಾನಂದಜೀ ಕರೆ

ರಾಮಕೃಷ್ಣ ಮಠದಲ್ಲಿ ಶೈಕ್ಷಣಿಕ ವಿಚಾರ ಸಂಕಿರಣ

Update: 2023-01-19 18:23 GMT

ಮಂಗಳೂರು: ಶಿಕ್ಷಕರ ಜೀವನವು ಮೌಲ್ಯಯುತವಾಗಿದ್ದರೆ ಶಾಲಾ ಮಕ್ಕಳು ಕೂಡ ಸಂಸ್ಕಾರಯುತ ಶಿಕ್ಷಣ ಪಡೆದು ದೇಶದ ಉತ್ತಮ ಪ್ರಜೆಗಳಾಗಿ ಬೆಳೆಯಲು ಸಾಧ್ಯವಾಗಲಿದೆ. ಹಾಗಾಗಿ ಶಿಕ್ಷಕರು ತಮ್ಮಲ್ಲಿ ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಹೇಳಿದರು.

ನಗರದ ಮಂಗಳಾದೇವಿ ಬಳಿಯ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ‘ಸಶಕ್ತೀಕರಣಕ್ಕಾಗಿ ಶಿಕ್ಷಣ’ ಎಂಬ ವಿಚಾರವಾಗಿ ಆಯೋಜಿಸಲಾಗಿರುವ ಮೂರು ದಿನಗಳ ಶೈಕ್ಷಣಿಕ ವಿಚಾರ ಸಂಕಿರಣದ ಅಂಗವಾಗಿ ಶಿಕ್ಷಕ ಹಾಗೂ ಪ್ರಶಿಕ್ಷಕರಿಗಾಗಿ ಗುರುವಾರ ನಡೆದ ‘ಮೇಧಾ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಶಿಕ್ಷಕರಲ್ಲಿ ಆತ್ಮಗೌರವ ಮುಖ್ಯವಾಗಿದೆ. ಮಾತು, ಪಾಠದ ಮೂಲಕ ಮಕ್ಕಳಿಗೆ ಪ್ರಭಾವ ಬೀರಬೇಕಾದರೆ ಶಿಕ್ಷಕರ ವ್ಯಕ್ತಿತ್ವ, ನಡೆನುಡಿ ಪ್ರಮುಖವಾಗಿರುತ್ತದೆ. ಕಲಿಕೆಯಲ್ಲಿ ತ್ಯಾಗ ಮನೋಭಾವ, ಬದ್ಧತೆಯೂ ಅತೀ ಅಗತ್ಯವಾಗಿದೆ ಎಂದು ಸ್ವಾಮಿ ಜಿತಕಾಮಾನಂದಜೀ ನುಡಿದರು.

ಹೈದರಾಬಾದ್ ರಾಮಕೃಷ್ಣ ಮಠದ ಅಧ್ಯಕ್ಷ  ಸ್ವಾಮಿ ಬೋಧಮಯಾನಂದಜೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿದರು. ಬೆಂಗಳೂರು ಸೀಕ್ ಫೌಂಡೇಶನ್ ಮುಖ್ಯಸ್ಥ ಪ್ರೊ. ಕೆ. ರಘೋತ್ತಮ ರಾವ್  ಸಂಪನ್ಮೂಲ ವ್ಯಕ್ತಿಯಾಗಿದ್ದರು.

ರಾಮಕೃಷ್ಣ ಆಶ್ರಮದ ಸ್ವಯಂಸೇವಕ ರಂಜನ್ ಬೆಲ್ಲರ್ಪಾಡಿ ಸ್ವಾಗತಿಸಿದರು. ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Similar News