ಮಂಗಳೂರಿನಿಂದ ದಿಲ್ಲಿಯವರೆಗೆ ಶೇ.40ರ ಕಮಿಷನ್‌ ಪಡೆಯುವ ತ್ರಿಬಲ್‌ ಇಂಜಿನ್‌ ಸರಕಾರ: ಪ್ರಿಯಾಂಕ್ ಖರ್ಗೆ

Update: 2023-01-21 17:17 GMT

ಸುರತ್ಕಲ್: ಮಂಗಳೂರಿನಿಂದ ದಿಲ್ಲಿಯವರೆಗೆ ಸಂಪೂರ್ಣವಾಗಿ ಶೇ.40ರ ಕಮಿಷನ್‌ನ ಪಡೆಯುವ ತ್ರಿಬಲ್‌ ಇಂಜಿನ್‌ ಸರಕಾರವಿದೆ. ಇವರದ್ದು ಬರೀ ಸುಳ್ಳುಗಳ ಸರಕಾರ, ಚೋರ ಗುರು ಚಾಂಡಾಲ ಶಿಷ್ಯರು ಕೇಂದ್ರ, ರಾಜ್ಯ ಹಾಗೂ ಮಂಗಳೂರು ಮಹಾನಗರ ಪಾಲಿಕೆಯವರೆಗೂ ಆಳುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುರತ್ಕಲ್ ಜಂಕ್ಷನ್ ನಲ್ಲಿ ಮಂಗಳೂರು ಉತ್ತರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ 'ಬಿಜೆಪಿ ಸುಳ್ಳುಗಳ ವಿರುದ್ಧ ಸಮರ ಜನಜಾಗೃತಿ ಸಮಾವೇಶ' ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. 

ಮಂಗಳೂರಿನಿಂದ ದಿಲ್ಲಿಯವರೆಗೆ ತ್ರಿಬಲ್‌ ಇಂಜಿನ್‌ನ ಬಿಜೆಪಿ ಸರಕಾರವಿದೆ. ದ.ಕ. ಜಿಲ್ಲೆಯ ಸುರತ್ಕಲ್‌ನಲ್ಲಿ ಮಾರುಕಟ್ಟೆ ಕಟ್ಟಡದ ಕಾಮಗಾರಿ ಶೇ.40 ಕಮಿಷನ್‌ನಿಂದಾಗಿಯೇ ನಿಂತಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ "ಮೈ ಭಿ ಖಾವೂಂಗಾ ತುಮ್ಕೋ ಭಿ ಖಿಲಾವೂಂಗಾ" ಎಂಬ ಘೋಷಣೆಯಡಿ ಕಾರ್ಯಾಚರಿಸುತ್ತಿದೆ. ರಾಜ್ಯ ಸರಕಾರ ಕಮಿಷನ್‌ ದಂಧೆಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್‌ ಆರೋಪಿಸಿಲ್ಲ. ರಾಜ್ಯ ಸರಕಾರದ ಅಧೀನದಲ್ಲಿರುವ ಕಂಟ್ರಾಕ್ಟರ್ ಅಸೋಷಿಯೇಷನ್ ಹೇಳುತ್ತಿದೆ. ಬಿಜೆಪಿಯದ್ದು "ಚೋರ ಗುರು ಚಾಂಡಾಲ ಶಿಷ್ಯರು" ಎಂಬ ಗಾದೆಯಂತೆ ಆಡಳಿತ ನಡೆಸುತ್ತಿದರುವ ಸರಕಾರ. ಗುರು ನರೇಂದ್ರ ಮೋದಿ ಅವರಿಂದ ಹಿಡಿದು ತಳಮಟ್ಟದ ನಾಯಕರವರೆಗೆ ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ನಳಿನ್ ಕುಮಾರ್‌ ಕಟೀಲ್‌ ಭಾಷಣದ ಕುರಿತು ಮಾತನಾಡಿದ ಖರ್ಗೆ, ಇಂತಹಾ ಬುದ್ದಿವಂತರ ಜಿಲ್ಲೆಯಲ್ಲಿ ಎಂತಹಾ ಸಂಸದನ್ನು ಆಯ್ಕೆ ಮಾಡಿದ್ದೀರಿ? ಸಾರ್ವಜನಿಕವಾಗಿ ಮೂಲ ಸೌಕರ್ಯಗಳನ್ನು ಕೇಳಬಾರದು ಎಂದು ಹೇಳುವ ಸಂಸದರೇ, ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿ ಕಾಣೆಯಾಗಿದ್ದಾರೆ. ನಿಮಗೆ ನಾಚಿಕೆ ಆಗುವುದಿಲ್ಲವೇ ಕಟೀಲ್ ಅವರೇ, ಉದ್ಯೋಗ, ಪಿಎಸ್‌ಐ ಹಗರಣ ಸೇರಿದಂತೆ ಹಲವು ರೀತಿಯ ಹಗರಣಗಳಲ್ಲಿ ಬಿಜೆಪಿ ಸರಕಾರ ಶಾಮೀಲಾಗಿದೆ. ಈ ಕುರಿತು ಬಿಜೆಪಿ ಚರ್ಚೆಗೆ ಬರುವುದಾದರೆ, ಚಾಹಾದ ವ್ಯವಸ್ಥೆಯನ್ನೂ ನಾವೇ ಮಾಡುತ್ತೇವೆ 'ಚಾಯ್‌ಪೇ ಚರ್ಚೆಗೆ' ಬರಲು ತಾಕತ್ತಿದೆಯೇ ಎಂದು ಸವಾಲು ಹಾಕಿದರು.

ಪ್ರಾಸ್ತಾವಿಕ ಮಾತನ್ನಾಡಿದ ಮಾಜಿ ಶಾಸಕ ಮೊಯ್ದಿನ್‌ ಬಾವಾ, "ನಾನು ಈ ಭಾಗದ ಶಾಸಕನಾಗಿದ್ದಾಗ 62 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್ ನೂತನ ಮಾರುಕಟ್ಟೆ ಸಂಕೀರ್ಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಶಿಲಾನ್ಯಾಸ ನೆರವೇರಿಸಿದ್ದೆ. 11ಕೋಟಿ ರೂಪಾಯಿ ವೆಚ್ಚದಲ್ಲಿ ಅರ್ಧ ಕಾಮಗಾರಿಯನ್ನೂ ಮಾಡಿ ಮುಗಿಸಿದ್ದೆ. ಆದರೆ ಇಂದು ಬಿಜೆಪಿ ಕುಟಿಲ ರಾಜಕೀಯಕ್ಕೆ ಬಲಿಯಾಗಿ ಕಾಮಗಾರಿ ಅರ್ಧದಲ್ಲೇ ನಿಂತಿದೆ. ಈ ಭಾಗಕ್ಕೆ ಭರತ್ ಶೆಟ್ಟಿ ಅವರು ಶಾಸಕರಾದ ಬಳಿಕ ಮಾಡಿದ್ದೇನು? ಗುತ್ತಿಗೆ ಪಡೆದುಕೊಂಡವರು ಇವರ ಕಮಿಷನ್ ಕೇಳಿ ಓಡಿಹೋಗಿದ್ದಾರೆ" ಎಂದರು.

ಸಭೆಗೂ ಮುನ್ನ ಬೈಕಂಪಾಡಿ ಎಪಿಎಂಸಿಯಿಂದ ಗೋವಿಂದದಾಸ್ ಕಾಲೇಜ್ ವರೆಗೆ ಬೈಕ್ ರ್ಯಾಲಿ ನಡೆಯಿತು. 

ವೇದಿಕೆಯಲ್ಲಿ ಭವ್ಯ ನರಸಿಂಹಮೂರ್ತಿ, ನಿಖೇತ್ ರಾಜ್ ಮೌರ್ಯ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜ, ನವೀನ್ ಡಿಸೋಜ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಗುಲ್ಜಾರ್ ಬಾನು, ಮಮತಾ ಗಟ್ಟಿ, ಗಿರೀಶ್ ಆಳ್ವ, ಪ್ರತಿಭಾ ಕುಳಾಯಿ, ಅನಿಲ್ ಕುಮಾರ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಪುರುಷೋತ್ತಮ್ ಚಿತ್ರಾಪುರ, ಶಾಲೆಟ್ ಪಿಂಟೋ, ಸುರತ್ಕಲ್ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀರ್ ಕಾಟಿಪಳ್ಳ, ಶಶಿಕಲಾ ಪದ್ಮನಾಭ, ಬಿ.ಕೆ. ತಾರಾನಾಥ್, ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಹ್ಯಾರಿಸ್ ಬೈಕಂಪಾಡಿ, ಶರೀಫ್ ಚೊಕ್ಕಬೆಟ್ಟು, ಜಲೀಲ್ ಬದ್ರಿಯ, ಎಸ್ಸಿಎಸ್ಟಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಕೋಡಿಕಲ್, ಅಬೂಬಕರ್ ಪ್ಯಾರಡೈಸ್, ಪ್ರಹ್ಲಾದ್ ಮತ್ತಿತರರು ಉಪಸ್ಥಿತರಿದ್ದರು.

Similar News