ಅವ್ಯವಹಾರ ಆರೋಪ: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಎಂಡಿ ಕೆ.ಎಂ. ಸುರೇಶ್ ಕುಮಾರ್ ಅಮಾನತು

Update: 2023-01-22 12:36 GMT

ಬೆಂಗಳೂರು, ಜ.22: ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಸುರೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಕೆಎಎಸ್ (ಆಯ್ಕೆ ಶ್ರೇಣಿ) ಅಧಿಕಾರಿ, ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಸುರೇಶ್ ಕುಮಾರ್ ಅವರು ಗಂಗಾ ಕಲ್ಯಾಣ ಯೋಜನೆ, ನೇರ ಸಾಲ, ಉದ್ಯಮಶೀಲತೆ ಅಭಿವೃದ್ಧಿ ಯೋಜನೆ, ಮೈಕ್ರೋ ಕ್ರೆಡಿಟ್, ಸಮೃದ್ಧಿ ಮತ್ತು ಐರಾವತ ಯೋಜನೆಗಳಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಅನುದಾನ ದುರ್ಬಳಕೆ ಎಸಗಿರುವುದಾಗಿ ದಾಖಲೆಗಳನ್ನು ಪರಾಮರ್ಶಿಸಿದಾಗ ತಿಳಿದು ಬಂದಿದೆ. ಹಾಗಾಗಿ ಅವರನ್ನು ಅಮಾನತ್ತಿನಲ್ಲಿ ಇರಿಸಲಾಗಿದೆ. 

ಅಮಾನತ್ತಿನಲ್ಲಿ ಇರುವಾಗ ಅಧಿಕಾರಿಯು ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಹಾಗೆಯೇ ಸಕ್ಷಮ ಪ್ರಾಧಿಕಾರದ ಅನುಮತಿಯನ್ನು ಪಡೆಯದೆ, ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.   

Similar News