ಕನ್ನಡದ ಕಾನೂನು ನಿಘಂಟು ಸಿದ್ಧತೆಗೆ ತಜ್ಞರ ಸಮಿತಿ: ಸಿಎಂ ಬೊಮ್ಮಾಯಿ

Update: 2023-01-22 15:24 GMT

ಬೆಂಗಳೂರು, ಜ.22: ದಿನನಿತ್ಯ ನ್ಯಾಯಾಲಯದಲ್ಲಿ ಕನ್ನಡದ ಬಳಕೆಯಾಗಲು ಕನ್ನಡದ ಕಾನೂನು ನಿಘಂಟನ್ನು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ‌.

ರವಿವಾರ ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಏರ್ಪಡಿಸಿದ್ದ ನ್ಯಾಯಾಧೀಶರು, ಸರಕಾರಿ  ಅಭಿಯೋಜಕರು ಹಾಗೂ ವಕೀಲರುಗಳಿಗೆ  2019-20 ಮತ್ತು 2020-21ನೇ ಸಾಲಿನ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಮಾನಾಂತರ ಕನ್ನಡ ಶಬ್ದಗಳು ಸ್ಥಾಪಿತವಾದರೆ ಬಳಸಲು ನ್ಯಾಯಾಧೀಶರಿಗೆ ಅನುಕೂಲವಾಗಲಿದೆ. ಹಲವಾರು ಇಂಗ್ಲಿಷ್ ಶಬ್ಧ ಗಳಿಗೆ ನೇರವಾದ ಕನ್ನಡದ ಪದಗಳಿಲ್ಲ. ಮಾತೃಭಾಷೆಯಲ್ಲಿ ತೀರ್ಪು ಬರುವ ಅವಶ್ಯಕತೆ ಇದೆ. ಹೀಗಾಗಿ, ಕನ್ನಡದ ಕಾನೂನು ನಿಘಂಟನ್ನು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಬೇಕು ಎಂದು ನುಡಿದರು.

ಇನ್ನೂ, ಪ್ರಕರಣಗಳ ತೀರ್ಪು ಕನ್ನಡದಲ್ಲಿ ಬಾರದಿದ್ದರೆ ಎಷ್ಟೊ ಸಮಸ್ಯೆಗಳಾಗುತ್ತವೆ. ತೀರ್ಪುಗಳನ್ನು ಕನ್ನಡದಲ್ಲಿ ತರ್ಜುಮೆಗೊಳಿಸುವ ವ್ಯವಸ್ಥೆಯಾಗಬೇಕು. ಅವುಗಳನ್ನು ಎಲ್ಲ ನ್ಯಾಯಾಲಯಗಳ  ಗ್ರಂಥಾಲಯಗಳಿಗೆ ಕಳುಹಿಸಬೇಕು ಎಂದು ಅವರು ಉಲ್ಲೇಖ ಮಾಡಿದರು.

ಅದು ಅಲ್ಲದೆ, ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನಕ್ಕೆ ತರಲು ಸುದೀರ್ಘ ಹೋರಾಟ ನಡೆದಿದೆ. ವಿ.ಕೃ.ಗೋಕಾಕ್ ನೇತೃತ್ವದ ಸಮಿತಿಯ ವರದಿಯನ್ನು ಅನುಷ್ಠಾನ ಮಾಡಲು ದೊಡ್ಡ ಚಳವಳಿ ನಡೆದಿದೆ. ಇಂದು ಬಹುತೇಕವಾಗಿ ಆಡಳಿತ ಕನ್ನಡದಲ್ಲಿ ಆಗುತ್ತಿರುವುದು ಗಮನಿಸುತ್ತಿದ್ದೇವೆ.

ಶಿಕ್ಷಣದಲ್ಲಿ ಕನ್ನಡದ ಬಗ್ಗೆ ಕರ್ನಾಟಕ ಸರ್ಕಾರ ಹಲವಾರು ಕಾನೂನು ಗಳನ್ನು ರೂಪಿಸಿದೆ. ಹಲವಾರು ಸುತ್ತೋಲೆ ಹೊರಡಿಸಿದೆ. ಆದರೂ ಸರ್ವೋಚ್ಚ ನ್ಯಾಯಾಲಯ ಶಿಕ್ಷಣ ದಲ್ಲಿ ಸ್ವಾತಂತ್ರ್ಯವಿರಬೇಕು ಎಂದಿರುವ ಕಾರಣ ಸಂಪೂರ್ಣವಾಗಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಜಿ.ನರೇಂದರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಪ್ರೊ.ಮಲ್ಲಪುರಂ ವೆಂಕಟೇಶ್,  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಕಾರ್ಯದರ್ಶಿ ಡಾ: ಎನ್ ಮಂಜುಳಾ ಸೇರಿದಂತೆ ಪ್ರಮುಖರಿದ್ದರು.

Similar News