ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವತಿ ಬಂಧನ

Update: 2023-01-23 06:46 GMT

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಯುವತಿ ಮತ್ತು ಆಕೆಯ ಪ್ರಿಯತಮನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿರುವುದು ವರದಿಯಾಗಿದೆ. 

ಇಕ್ರಾ ಜೀವನಿ (19) ಹಾಗೂ ಮುಲಾಯಂ ಸಿಂಗ್ ಬಂಧಿತರು. ಆರೋಪಿ ಇಕ್ರಾ, ಲೂಡೋ ಗೇಮಿಂಗ್ ಆ್ಯಪ್ ಮೂಲಕ ಉತ್ತರ ಪ್ರದೇಶದ ಮುಲಾಯಂ ಸಿಂಗ್‌ ಎಂಬುವನನ್ನು ಪರಿಚಯಿಸಿಕೊಂಡಿದ್ದಾಳೆನ್ನಲಾಗಿದೆ.

ಮುಲಾಯಂ ಸಿಂಗ್ ನಗರದಲ್ಲಿ  ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದ. ನಗರದ ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ಇವರು ವಾಸವಿದ್ದರು ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಈ ಮಧ್ಯೆ ತಾಯಿಯನ್ನು ಸಂಪರ್ಕಿಸಲು ಇಕ್ರಾ ಜೀವನಿ ಯತ್ನಿಸಿದ್ದು, ಈ ವಿಚಾರವನ್ನು ಪತ್ತೆ ಮಾಡಿದ್ದ ಕೇಂದ್ರ ಗುಪ್ತಚರ ಇಲಾಖೆಯು ಬೆಂಗಳೂರು ಪೊಲೀಸರಿಗೆ ತಿಳಿಸಿತ್ತು. ವಿಶೇಷ ಕರ‍್ಯಾಚರಣೆ ನಡೆಸಿದ ಪೊಲೀಸರು, ಇಕ್ರಾ ಜೀವನಿ ಹಾಗೂ ಮುಲಾಯಂ ಸಿಂಗ್ ಇಬ್ಬರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

ಸದ್ಯಕ್ಕೆ ಆರೋಪಿ ಯುವತಿಯನ್ನು ವಿಚಾರಣೆ ನಡೆಸಿದಾಗ ಆಕೆ ರಾವಾ ಯಾದವ್ ಎಂದು ಹೆಸರು ಬದಲಿಸಿಕೊಂಡು ಪಾಸ್ ಪೋರ್ಟ್ ಗೆ ಅರ್ಜಿ ಹಾಕಿದ್ದ ಸಂಗತಿ ಗೊತ್ತಾಗಿದೆ. ಈ ಕುರಿತು ಎಫ್ ಆರ್ ಆರ್ ಓ ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

Similar News