ಸನ್ನಡೆತೆಯ ಆಧಾರದಲ್ಲಿ ರೌಡಿಶೀಟರ್‌ಗಳ ಪಟ್ಟಿಯಿಂದ 783 ಮಂದಿ ಹೊರಕ್ಕೆ: ಮಂಗಳೂರು ಕಮಿಷನರ್ ಶಶಿಕುಮಾರ್

Update: 2023-01-23 15:05 GMT

ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯ  ವಿವಿಧ ಠಾಣೆಗಳ 783 ರೌಡಿಶೀಟರ್‌ಗಳನ್ನು ಸನ್ನಡೆತೆಯ ಆಧಾರದಲ್ಲಿ ರೌಡಿಶೀಟರ್ ಪಟ್ಟಿಯಿಂದ ತೆಗೆದುಹಾಕಿ ಅವರಿಗೆ  ಹೊಸ ಬದುಕಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ (Mangaluru police commissioner N. Shashi Kumar) ತಿಳಿಸಿದ್ದಾರೆ.

ನಗರದ ರೋಶನಿ ನಿಲಯದಲ್ಲಿ ನಡೆದ  ಪರಿವರ್ತನಾ ಸಭೆಯನ್ನು  ಉದ್ಘಾಟಿಸಿ ಮಾತನಾಡಿದ ಅವರು ಕಳೆದ ಎರಡು ತಿಂಗಳಿನಿಂದ ಪೊಲೀಸ್ ಅಧಿಕಾರಿಗಳು ಈ ಪ್ರಕ್ರಿಯೆಲ್ಲಿ ಭಾಗಿಯಾಗಿ ಸನ್ನಡೆ ಹೊಂದಿರುವ  ರೌಡಿಗಳನ್ನು  ರೌಡಿ ಲೀಸ್ಟ್ ನಿಂದ ತೆಗೆಯುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದರು.

ಒಬ್ಬ ರೌಡಿ  ಶೀಟರ್ ಹಣೆಪಟ್ಟಿ ಕಟ್ಟಿಕೊಳ್ಳುವುದು  ಆತನ  ಕುಟುಂಬಕ್ಕೆ ಶೋಭೆ ತರುವ  ಹಾಗೂ ಹೆಮ್ಮೆ ತರುವ ವಿಚಾರವಲ್ಲ. ಪೊಲೀಸ್ ಇಲಾಖೆಗೆ ಇದು ಪ್ರಿಯವಾದ ಪದವಲ್ಲ. ಆದರೆ  ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು   ಕೆಲವು ಪ್ರಕರಣಗಳಲ್ಲಿ  ಭಾಗಿಯಾದವರನ್ನು  ರೌಡಿ ಶೀಟರ್ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ರೌಡಿ ಶೀಟರ್ ಹಣೆಪಟ್ಟಿ ಕಟ್ಟಿಕೊಂಡವರಿಗೆ ತಮ್ಮ ಪಾಡಿಗೆ ಇರಲು ಸಾಧ್ಯವಾಗುವುದಿಲ್ಲ.  ಕುಟುಂಬದಲ್ಲಿ ಸಮಾಜದಲ್ಲಿ ಬಹಿಷ್ಕಾರ ಹಾಕಿದಂತೆ  ನೋಡುವ  ಸ್ಥಿತಿ ಇದೆ.  ಈ ಪಟ್ಟಿಯಲ್ಲಿ ಸೇರಿಕೊಂಡವರು ಪ್ರತಿಯೊಂದಕ್ಕೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ರೋಶನಿ ನಿಲಯದ  ಮಾಜಿ ಪ್ರಾಂಶುಪಾಲ  ಡಾ.ಜುಡಿತ್ ಸಿ.ಜೆ,  ಅಸಿಸ್ಟೆಂಟ್ ಪ್ರೊಫೆಸರ್ ಸಾರಿಕಾ , ಡಿಸಿಪಿ  ಅಂಶುಕುಮಾರ್ ಉಪಸ್ಥಿತರಿದ್ದರು.

ಡಿಸಿಪಿ ಕೆ.ಬಿ.ದಿನೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಇನ್‌ಸ್ಪೆಕ್ಟರ್ ಮೊಹಮ್ಮದ್ ಶರೀಫ್ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ: ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಉತ್ತರಾಖಂಡದಲ್ಲಿ ಬಂಧಿಸಿದ ಮಣಿಪಾಲ ಪೊಲೀಸರು

Similar News