ತಮ್ಮ ಮಗನ ಭವಿಷ್ಯ ನೋಡಿಕೊಳ್ಳಲಿ...: ಸಿದ್ದರಾಮಯ್ಯ ಕುರಿತ ಬಿಎಸ್‍ವೈ ಹೇಳಿಕೆಗೆ ಡಿಕೆಶಿ ತಿರುಗೇಟು

Update: 2023-01-24 13:05 GMT

ಬೆಂಗಳೂರು, ಜ. 24: ಸಿದ್ದರಾಮಯ್ಯರ ಸ್ಪರ್ಧೆ ಬಗ್ಗೆ ಯಡಿಯೂರಪ್ಪ ಏನಾದರೂ ಹೇಳಿಕೊಳ್ಳಲಿ. ಹೈಕಮಾಂಡ್ ಒಪ್ಪಿಗೆ ನೀಡಿದರೆ, ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಒಬ್ಬ ನಾಯಕ ತನ್ನ ಆಸೆಹೇಳಿಕೊಳ್ಳಬಾರದಾ? ಬಿಎಸ್‍ವೈ ತಮ್ಮ ಹಾಗೂ ತಮ್ಮ ಮಗನ ಭವಿಷ್ಯದ ಬಗ್ಗೆ ನೋಡಿಕೊಳ್ಳಲಿ. ನಂತರ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಮಂಗಳವಾರ ಇಲ್ಲಿನ ಸದಾಶಿವನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಮಯದ ಅಭಾವವಿದೆ. ಜ.27ಕ್ಕೆ ರಾಮನಗರದಲ್ಲಿ ನಡೆಯಬೇಕಾಗಿದ್ದ ಪ್ರಜಾಧ್ವನಿ ಯಾತ್ರೆ ಮುಂದೂಡಿದ್ದು, ಅಂದು ಪಕ್ಷದ ಗ್ಯಾರಂಟಿ ಯೋಜನೆ, ಪ್ರಚಾರದ ರೂಪುರೇಷೆಗಳ ವಿಚಾರವಾಗಿ ಎಲ್ಲ ಬ್ಲಾಕ್ ಕಾಂಗ್ರೆಸ್ ನಾಯಕರು, ಸೋತ ಅಭ್ಯರ್ಥಿಗಳು ಹಾಗೂ ನೂತನ ಪ್ರಚಾರ ಸಮಿತಿಯ ಜತೆ ಸಭೆ ಆಯೋಜಿಸಿದ್ದೇವೆ. ಈ ಸಭೆಗೆ ಪಕ್ಷದ 1ಸಾವಿರ ನಾಯಕರನ್ನು ಆಹ್ವಾನಿಸಿದ್ದೇವೆ. ಈ ಸಭೆಯಲ್ಲಿ ನಮ್ಮ ನಾಯಕರಿಗೆ ಟಾಸ್ಕ್ ನೀಡಲಾಗುವುದು ಎಂದರು.

ರಾಮನಗರ ಬೆಂಗಳೂರಿನ ಪಕ್ಕದಲ್ಲಿದ್ದು, ನನ್ನ ಕ್ಷೇತ್ರ ಸೇರಿದಂತೆ ನಾಲ್ಕು ಕ್ಷೇತ್ರಗಳಿವೆ. ನಾವು ಯಾವಾಗ ಬೇಕಾದರೂ ಅಲ್ಲಿ ಯಾತ್ರೆ ಮಾಡಬಹುದು. ಅಧಿವೇಶನ ಆರಂಭವಾದ ನಂತರ ಬಿಡುವಿರುವ ಒಂದು ದಿನ ಹೋಗಿಯೂ ಯಾತ್ರೆ ಮಾಡಬಹುದು. ಹೀಗಾಗಿ ರಾಮನಗರದ ಯಾತ್ರೆ ಮುಂದಕ್ಕೆ ಹಾಕಿದ್ದೇವೆ ಎಂದ ಅವರು, ಅಮಿತ್ ಶಾ, ಪ್ರಧಾನಿ ಮೋದಿ ಅವರು ದಿನನಿತ್ಯ ರಾಜ್ಯಕ್ಕೆ ಬಂದು ರೋಡ್ ಶೋ ಮಾಡಲಿ. ಅವರು ರೋಡ್ ಶೋ ಮಾಡಿ, ಶೇ.40 ಕಮಿಷನ್ ಆರೋಪ, ಎಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ? ಜನರ ಖಾತೆಗೆ 15 ಲಕ್ಷ ರೂ.ಯಾವಾಗ ಹಾಕುತ್ತಾರೆ? ರೈತರ ಆದಾಯ ಯಾವಾಗ ಡಬಲ್ ಆಗುತ್ತದೆ? ಎಂಬ ವಿಚಾರವಾಗಿ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಬಿಜೆಪಿಯವರು ಏನಾದರೂ ಮಾಡಲಿ. ಅವರ ಮಂತ್ರಿಗಳು, ನಾಯಕರ ಮಾತುಗಳಿಗೆ ಅವರು ಉತ್ತರ ನೀಡಲಿ. ಅವರ ನಾಯಕನೊಬ್ಬ ಪ್ರತಿ ಮತದಾರನಿಗೆ ಹಣ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿ ಸೋಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾನೆ. ಆದರೂ ಚುನಾವಣಾ ಆಯೋಗ ಏನು ಮಾಡುತ್ತಿದೆ? ಆದಾಯ ತೆರಿಗೆ ಇಲಾಖೆ ಏನು ಮಾಡುತ್ತಿದೆ? ಬಿಜೆಪಿಯವರು ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರತಿ ಮತಕ್ಕೆ 6 ಸಾವಿರ ರೂ.ನೀಡಿ ಮತಗಳನ್ನು ಖರೀದಿ ಮಾಡುತ್ತಾರಾ? ಇದೇನಾ ಬಿಜೆಪಿ ಸಂಸ್ಕøತಿ?’ ಎಂದು ಅವರು ಪ್ರಶ್ನಿಸಿದರು.

ಸ್ತ್ರೀ ಸಂಘಗಳ ಸಾಲದ ಪ್ರಮಾಣ ಹೆಚ್ಚಳದ ಘೋಷಣೆ ನಮ್ಮ ಗ್ಯಾರಂಟಿ ಯೋಜನೆ ಪಟ್ಟಿಯ ಕಾರ್ಯಕ್ರಮ ಎಂದು ಹೇಳಿಲ್ಲ. 10ಕೆ.ಜಿ ಅಕ್ಕಿ ನೀಡುವ ಯೋಜನೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇನ್ನುಳಿದ ಯೋಜನೆಗಳನ್ನು ಘೋಷಿಸಲು ಇನ್ನು ಸಮಯಾವಕಾಶ ಇವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಘೋಷಿಸುತ್ತೇವೆ’ ಎಂದು ಅವರು ಸ್ಪಷ್ಟನೆ ನೀಡಿದರು.

Similar News