ಮಂಗಳೂರು: ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದಿಂದ ಸರಕಾರದ ವಿರುದ್ಧ ಪ್ರತಿಭಟನೆ

Update: 2023-01-25 06:27 GMT

ಮಂಗಳೂರು, ಜ.25: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳಿಗೆ ರಾಜ್ಯ ಬಿಜೆಪಿ ಸರಕಾರ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಬುಧವಾರ ಬೆಳಗ್ಗೆ ನಗರದ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಯಿತು.

ಕಾಂಗ್ರೆಸ್ ಮಹಿಳಾ ಘಟಕದ ರಾಜಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ‌ ಮುಳುಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿ ಭ್ರಷ್ಟ ಸಚಿವರ ರಕ್ಷಣೆಗೆ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಹಲವು ಬೇಡಿಕೆಗಳನ್ನು‌ ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಸರಕಾರ ದೌರ್ಜನ್ಯ ಎಸಗಿದೆ. ಅಂಗನವಾಡಿ ಕಾರ್ಯಕರ್ತೆಯೊಬ್ಬರ ತಾಳಿ ‌ಕಿತ್ತು ಬರುವಂತೆ ಎಳೆದಾಡಿ ಅವರ ಸಾವಿಗೂ ಕಾರಣರಾಗಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ‌ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸಾವಿಗೀಡಾದ ಕಾರ್ಯಕರ್ತೆಯ ಕುಟುಂಬಕ್ಕೆ‌ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್‌ನ ನಾಯಕಿಯರು, ಕಾರ್ಯಕರ್ತೆಯರು ಧಿಕ್ಕಾರ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪಕ್ಷದ ರಾಜ್ಯ‌ ನಾಯಕಿಯರಾದ‌ ಮಮತಾ ಗಟ್ಟಿ, ಕೃಪಾ ಆಳ್ವ ಮಾತನಾಡಿದರು.

ಮಾಜಿ ಮೇಯರ್ ಜೆಸಿಂತಾ ವಿಜಯ್ ಆಲ್ಫ್ರೆಡ್, ಅಪ್ಪಿಲತಾ, ಮಂಜುಳಾ ನಾಯಕ್ ಮತ್ತಿತರರು ಪಾಲ್ಗೊಂಡಿದ್ದರು.

Similar News