ಅದಾನಿ ಗ್ರೂಪ್ ಕಂಪನಿಗಳ ಸಾಲಗಳ ಹೊರೆಯ ಬಗ್ಗೆ ಕಳವಳ, ಲೆಕ್ಕಪತ್ರಗಳಲ್ಲಿ ವಂಚನೆ ಆರೋಪ

ಶೇರುಗಳನ್ನು ಶಾರ್ಟ್ ಸೆಲ್ ಮಾಡಿದ ಹಿಂಡೆನ್ಬರ್ಗ್

Update: 2023-01-25 11:41 GMT

ಬೆಂಗಳೂರು: Hindenburg Research ಭಾರತದ ನಂ.1 ಶ್ರೀಮಂತ ಗೌತಮ್ ಅದಾನಿಯವರ (Gautam Adani)  ಅದಾನಿ ಗ್ರೂಪ್ ನ (Adani Group) ಮೇಲಿರುವ ಸಾಲಗಳ ಹೊರೆಯ ಬಗ್ಗೆ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ. ಅದಾನಿ ಗ್ರೂಪ್ ಸಾಗರದಾಚೆಯ ತೆರಿಗೆ ಸ್ವರ್ಗಗಳಲ್ಲಿ ಸ್ಥಾಪಿಸಿರುವ ಘಟಕಗಳನ್ನು ವ್ಯಾಪಕವಾಗಿ ದುರುಪಯೋಗ ಮಾಡಿಕೊಂಡಿದೆ ಎಂದು ಅದು ಬುಧವಾರ ಆರೋಪಿಸಿದೆ. ಅಮೆರಿಕದ ಖ್ಯಾತ ಶಾರ್ಟ್ ಸೆಲ್ಲರ್ ಆಗಿರುವ ಹಿಂಡೆನ್ಬರ್ಗ್ ಅದಾನಿ ಗ್ರೂಪ್ ಕಂಪನಿಗಳ ಶೇರುಗಳನ್ನು ಶಾರ್ಟ್ ಸೆಲ್ ಮಾಡಿದೆ. (ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಶೇರುಗಳ ಕುಸಿತವನ್ನು ಮೊದಲೇ ಊಹಿಸಿ ಅವುಗಳನ್ನು ಮೊದಲು ಮಾರಾಟ ಮಾಡಿ ಬೆಲೆ ಇಳಿದ ಬಳಿಕ ಮರುಖರೀದಿಸುವುದು). ಅದಾನಿ ಗ್ರೂಪ್ ತನ್ನ ಮುಂಚೂಣಿಯ ಕಂಪನಿ ಅದಾನಿ ಎಂಟರ್ಪೈಸಸ್ ನ 2.5 ಶತಕೋಟಿ ಡಾ. ಮೌಲ್ಯದ ಶೇರುಗಳನ್ನು ಹೂಡಿಕೆದಾರರಿಗೆ ಬಿಡುಗಡೆ ಮಾಡಲು ಸಜ್ಜಾಗಿದ್ದು, ಇದಕ್ಕೆ ಕೆಲವೇ ದಿನಗಳ ಮುನ್ನ Hindenburg ನ ಹೇಳಿಕೆ ಹೊರಬಿದ್ದಿದೆ. ಪರಿಣಾಮವಾಗಿ ಅದಾನಿ ಗ್ರೂಪ್ ಕಂಪನಿಗಳ ಶೇರುಗಳು ಬುಧವಾರ ಒಂದೇ ದಿನದ ವಹಿವಾಟಿನಲ್ಲಿ ಶೇ.9ರವರೆಗೆ ಕುಸಿತ ಕಂಡಿದ್ದು, ಹೂಡಿಕೆದಾರರಿಗೆ ಸಾವಿರಾರು ಕೋ.ರೂ.ಗಳ ನಷ್ಟವುಂಟಾಗಿದೆ.

ಶೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್ ಆಗಿರುವ ಅದಾನಿ ಗ್ರೂಪ್ ನ ಏಳು ಪ್ರಮುಖ ಕಂಪನಿಗಳು ಗಣನೀಯ ಸಾಲಗಳನ್ನು ಹೊಂದಿದ್ದು, ಸಾಲಕ್ಕಾಗಿ ಕೃತಕವಾಗಿ ಬೆಲೆಗಳು ಹೆಚ್ಚಿಸಲ್ಪಟ್ಟಿರುವ ಶೇರುಗಳನ್ನು ಅದು ಮೇಲಾಧಾರವಾಗಿ ನೀಡಿದೆ. ಇದು ಇಡೀ ಗ್ರೂಪ್ ನ ಆರ್ಥಿಕ ಬುನಾದಿಯನ್ನು ಅನಿಶ್ಚಿತ ಸ್ಥಿತಿಯಲ್ಲಿರಿಸಿದೆ ಎಂದೂ ಹಿಂಡೆನ್ಬರ್ಗ್ ಎಚ್ಚರಿಕೆ ನೀಡಿದೆ.

ಲಿಸ್ಟೆಡ್ ಕಂಪನಿಗಳ ಶೇರುಗಳ ಬೆಲೆಗಳನ್ನು ಕೃತಕವಾಗಿ ಮುಗಿಲೆತ್ತರಕ್ಕೆ ಏರಿಸಲಾಗಿದೆ, ಫಂಡಾಮೆಂಟಲ್ ಗಳು ದುರ್ಬಲವಾಗಿದ್ದು, ಶೇರುಗಳ ಬೆಲೆಗಳು ಶೇ.85ರಷ್ಟು ಕುಸಿಯುವ ಅಪಾಯವಿದೆ ಎಂದು ಅದು ಹೇಳಿದೆ.

ಅದಾನಿ ಗ್ರೂಪ್ ನ ಮಾಜಿ ಅಧಿಕಾರಿಗಳು ಸೇರಿದಂತೆ ಹಲವಾರು ವ್ಯಕ್ತಿಗಳ ಸಂದರ್ಶನ ಮತ್ತು ದಾಖಲೆಗಳ ಪುನರ್ಪರಿಶೀಲನೆಯ ಬಳಿಕ ತನ್ನ ವರದಿಯನ್ನು ಸಿದ್ಧಪಡಿಸಿರುವುದಾಗಿ ಹಿಂಡೆನ್ಬರ್ಗ್ ಹೇಳಿದೆ. ಅದಾನಿ ಗ್ರೂಪ್ನ ವಕ್ತಾರರು ವರದಿಗೆ ತಕ್ಷಣದ ಪ್ರತಿಕ್ರಿಯೆಯನ್ನು ನೀಡಿಲ್ಲ.

ಅಮೆರಿಕದಲ್ಲಿ ವಹಿವಾಟಾಗುವ ಬಾಂಡ್ಗಳು ಮತ್ತು ಭಾರತದಲ್ಲಿ ವಹಿವಾಟು ನಡೆಯದ ಡೆರಿವೇಟಿವ್ ಇನ್ಸ್ಟ್ರುಮೆಂಟ್ಗಳ ಮೂಲಕ ಹಿಂಡೆನ್ಬರ್ಗ್ ಅದಾನಿ ಗ್ರೂಪ್ ಕಂಪನಿಗಳಲ್ಲಿ ಶಾರ್ಟ್ ಪೊಸಿಷನ್ಗಳನ್ನು ಹೊಂದಿದೆ. ನಿರೀಕ್ಷೆಯಂತೆ ಅದಾನಿ ಗ್ರೂಪ್ ಕಂಪನಿಗಳ ಶೇರುಗಳ ಬೆಲೆಗಳು ತಳ ಕಚ್ಚಿದರೆ ಅದು ಕೋಟ್ಯಂತರ ಡಾಲರ್ಗಳ ಲಾಭವನ್ನು ಗಳಿಸಲಿದೆ.
ಸಾಲಗಳ ಕುರಿತು ಕಳವಳಗಳನ್ನು ಅದಾನಿ ಗ್ರೂಪ್ ಪದೇಪದೇ ತಳ್ಳಿ ಹಾಕುತ್ತಲೇ ಬಂದಿದೆ. ‘ಒಬ್ಬರೇ ಒಬ್ಬ ಹೂಡಿಕೆದಾರರು ಸಾಲಗಳ ಬಗ್ಗೆ ನಮ್ಮಲ್ಲಿ ಕಳವಳಗಳನ್ನು ವ್ಯಕ್ತಪಡಿಸಿಲ್ಲ ’ ಅದಾನಿಯ ಮುಖ್ಯ ಹಣಕಾಸು ಅಧಿಕಾರಿ ಜುಗಶಿಂದರ್ ಸಿಂಗ್ ಜ.21ರಂದು ಮಾಧ್ಯಮಗಳಲ್ಲಿ ಹೇಳಿದ್ದರು.

2022, ಮಾ.31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಅದಾನಿ ಗ್ರೂಪ್ ನ ಒಟ್ಟು ಸಾಲ ಶೇ.40ರಷ್ಟು ಏರಿಕೆಯಾಗಿ 2.2 ಲಕ್ಷ ಕೋಟಿ ರೂ.ಗಳಿಗೆ ತಲುಪಿತ್ತು.
ಅದಾನಿ ಗ್ರೂಪ್ ನ ಎಲ್ಲ ಏಳೂ ಲಿಸ್ಟೆಡ್ ಕಂಪನಿಗಳ ಸಾಲವು ಈಟ್ವಿಟಿಯನ್ನು ಮೀರಿದೆ. ಅದಾನಿ ಗ್ರೀನ್ ಎನರ್ಜಿಯ ಸಾಲವು ಈಕ್ವಿಟಿಯ ಶೇ.2000ಕ್ಕೂ ಹೆಚ್ಚು ಮೀರಿದೆ ಎಂದು ರಿಫೈನೈಟಿವ್ ಡಾಟಾ ತೋರಿಸಿದೆ.

ಅದಾನಿ ಎಂಟರ್ಪೈಸಸ್ ನ ಶೇರುಗಳು 2022ರಲ್ಲಿ ಶೇ.125ರಷ್ಟು ಏರಿಕೆಯನ್ನು ದಾಖಲಿಸಿದ್ದರೆ ಇತರ ಗ್ರೂಪ್ ಕಂಪನಿಗಳ ಶೇರುಗಳ ಮೌಲ್ಯ ಶೇ.100ಕ್ಕೂ ಹೆಚ್ಚು ಏರಿತ್ತು.

ಇದನ್ನೂ ಓದಿ: ಕಾಫಿ ಡೇ ಎಂಟರ್‌ಪ್ರೈಸಸ್‌ಗೆ ರೂ. 26 ಕೋಟಿ ದಂಡ ವಿಧಿಸಿದ ಸೆಬಿ: 45 ದಿನಗಳೊಳಗೆ ಪಾವತಿಸಲು ಸೂಚನೆ

Similar News